ಕನ್ನಡಪ್ರಭ ವಾರ್ತೆ ಮುಧೋಳ
ಸದ್ಯ ಲೋಕಾಪೂರ, ಬಾಗಲಕೋಟ, ರಾಮದುರ್ಗ, ಸವದತ್ತಿ, ಧಾರವಾಡ, ಯರಗಟ್ಟಿ, ಬೆಳಗಾವಿ ಸೇರಿದಂತೆ ಇತರೆ ಊರುಗಳಿಗೆ ಸಂಪರ್ಕ ಕಲ್ಪಿಸುವ ಮುಧೋಳ-ಚಿಂಚಖಂಡಿ ಸೇತುವೆ ಮೇಲೆ ಸೋಮವಾರ ಮಧ್ಯಾಹ್ನ ಘಟಪ್ರಭ ನದಿ ನೀರು ಹರಿಯುತ್ತಿರುವುದರಿಂದ ಈ ಮಾರ್ಗದ ಮೂಲಕ ಸಂಚರಿಸುವ ಎಲ್ಲ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಯಾದವಾಡ, ರೂಗಿ, ಜಾಲಿಬೇರಿ, ಉತ್ತೂರ, ಚನ್ನಾಳ, ರಂಜಣಗಿ, ಒಂಟಗೋಡಿ, ಮಲ್ಲಾಪೂರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಧೋಳ-ಯಾದವಾಡ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಭಾನುವಾರದಿಂದಲೇ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ಈ ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸುವ ಗ್ರಾಮಗಳಿಗೆ ತೆರಳಲು ಸುತ್ತುವರಿದು ಬರಬೇಕಿದೆ. ಅಲ್ಲದೇ, ಪ್ರವಾಹದಿಂದ ರೈತರು ಬೆಳೆದ ಬೆಳಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಪ್ರವಾಹ ಪೀಡಿತ ಗ್ರಾಮಗಳಲ್ಲಿ ನೋಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಂತ್ರಸ್ಥರಿಗೆ ಮತ್ತು ಜಾನುವಾರುಗಳಿಗೆ ಎಲ್ಲ ರೀತಿಯ ಸೌಲಭ್ಯ ಮತ್ತು ಸೌಕರ್ಯ ಒದಗಿಸಲು ಸಿದ್ದರಾಗಿದ್ದಾರೆ, ತಾಲೂಕು ಮತ್ತು ಜಿಲ್ಲಾಡಳಿತ ಪ್ರವಾಹ ಎದುರಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ.