ಮಾಗಳ ಕಲ್ಲಾಗನೂರು ಸೇತುವೆ ನಿರ್ಮಾಣಕ್ಕೆ ಮತ್ತೆ ವಿಘ್ನ

KannadaprabhaNewsNetwork |  
Published : Jul 30, 2024, 12:41 AM IST
ಹೂವಿನಹಡಗಲಿ ತಾಲೂಕು ಮಾಗಳ-ಶಿರಹಟ್ಟಿ ತಾಲೂಕು ಕಲ್ಲಾಗನೂರು ಗ್ರಾಮಗಳ ಮಧ್ಯೆ ಸೇತುವೆ ನಿರ್ಮಾಣ ಸ್ಥಳಾಂತರ ಮಾಡುವಂತೆ ಆನಂದಸ್ವಾಮಿ ಗಡ್ಡದೇವರ ಮಠದ ಬರೆದಿರುವ ಪತ್ರ. | Kannada Prabha

ಸಾರಾಂಶ

ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಸದ್ಯಕ್ಕೆ 1.9 ಟಿಎಂಸಿ ಹಿನ್ನೀರು ನಿಲುಗಡೆಯಾಗುತ್ತಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಗದಗ-ವಿಜಯನಗರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮಾಗಳ-ಕಲ್ಲಾಗನೂರು ಸೇತುವೆ ನಿರ್ಮಾಣಕ್ಕೆ ಮತ್ತೆ ವಿಘ್ನ ಎದುರಾಗಿದೆ. ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ್‌ ಪತ್ರ ಬರೆದಿದ್ದರು. ಈಗ ಮತ್ತೆ ಶಿರಹಟ್ಟಿಯ ಆನಂದಸ್ವಾಮಿ ಗಡ್ಡದೇವರಮಠ ಸ್ಥಳಾಂತರಕ್ಕೆ ಪತ್ರ ಬರೆದಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಲ್ಲಾಗನೂರು ಹಾಗೂ ಮಾಗಳ ಗ್ರಾಮಗಳ ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದ ಸ್ಥಳ ಮುಳುಗಡೆ ಪ್ರದೇಶ ವ್ಯಾಪ್ತಿಗೆ ಸೇರಿದ್ದು, ಪರಿಹಾರವನ್ನು ಸಹ ಪಡೆದಿದ್ದಾರೆ. ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಸದ್ಯಕ್ಕೆ 1.9 ಟಿಎಂಸಿ ಹಿನ್ನೀರು ನಿಲುಗಡೆಯಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮುಳುಗಡೆಯಾಗಿರುವ ಗ್ರಾಮಗಳು ಸ್ಥಳಾಂತರವಾದರೆ ಬ್ಯಾರೇಜಿನಲ್ಲಿ 3 ಟಿಎಂಸಿ ನೀರು ಶೇಖರಣೆಯಾಗುತ್ತದೆ. ಆಗ ನಿರ್ಮಿಸಲು ಉದ್ದೇಶಿಸಿರುವ ಸೇತುವೆ ಕೂಡ ಮುಳುಗಡೆ ಹಂತಕ್ಕೆ ಬರುತ್ತದೆ. ಈಗಿರುವ ಸ್ಥಳದಲ್ಲಿ ಸುಮಾರು 1500 ಮೀ. ಸೇತುವೆ ನಿರ್ಮಿಸಬೇಕಾಗುತ್ತದೆ. ಹೊಳೆ ಇಟಗಿ ಮತ್ತು ಕೋಟ್ಯಾಹಾಳು ಮಧ್ಯೆ ನಿರ್ಮಿಸಿದರೆ ಕೇವಲ 600 ಮೀ. ಸೇತುವೆ ಆಗುತ್ತದೆ. ಹೊನ್ನಾಳಿಯಿಂದ ಗದಗ ರಾಜ್ಯ ಹೆದ್ದಾರಿಯು ಕೇವಲ 1 ಕಿ.ಮೀ. ಅಂತರದಲ್ಲಿದೆ. ಇಲ್ಲಿ ಸೇತುವೆ ನಿರ್ಮಿಸಿದರೆ 40 ಗ್ರಾಮಗಳಿಗೆ ಅನುಕೂಲವಾಗುತ್ತದೆ. ಕಾಮಗಾರಿಯ ವೆಚ್ಚ ಕೂಡ ತುಂಬ ಕಡಿಮೆಯಾಗುವುದರಿಂದ ಸರ್ಕಾರಕ್ಕೆ ಅರ್ಥಿಕ ಹೊರೆ ಕೂಡ ಕಡಿಮೆಯಾಗುತ್ತದೆ. ಶಿರಹಟ್ಟಿ ತಾಲೂಕಿನ ಕಲ್ಲಾಗನೂರು ಹಾಗೂ ಮಾಗಳ ಗ್ರಾಮಗಳ ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆಯನ್ನು ಹೊಳೆ ಇಟಗಿ-ಕೋಟ್ಯಾಹಾಳ ಮಧ್ಯೆ ಸ್ಥಳಾಂತರ ಮಾಡಬೇಕೆಂದು ಜಲ ಸಂಪನ್ಮೂಲ ಸಚಿವರಿಗೆ ಪತ್ರ ಬರೆದಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಈ ಕುರಿತು ಮತ್ತೆ ತಜ್ಞರ ತಂಡವು ಸ್ಥಳಕ್ಕೆ ಭೇಟಿ ನೀಡಿ ಮುಂದಿನ 15 ದಿನದೊಳಗೆ ವರದಿ ಸಲ್ಲಿಸಬೇಕು ಎಂದು ರಾಜ್ಯ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಎರಡನೇ ಬಾರಿ ಡಿಪಿಆರ್‌ಗೆ ಟೆಂಡರ್:

ಈ ಹಿಂದೆ ಮಾಗಳ-ಕಲ್ಲಾಗನೂರು ನಡುವೆ ಸೇತುವೆ ನಿರ್ಮಾಣಕ್ಕಾಗಿ ಡಿಪಿಆರ್‌ ಸಿದ್ಧತೆಗೆ ₹40 ಲಕ್ಷ ಬಿಡುಗಡೆ ಮಾಡಿ, ಟೆಂಡರ್‌ ಕರೆಯಲಾಗಿತ್ತು. ಆ ಸಂದರ್ಭದಲ್ಲಿ ಸಚಿವ ಎಚ್‌.ಕೆ.ಪಾಟೀಲ್‌ ಪತ್ರ ಬರೆದಾಗ ಹಿನ್ನೆಡೆಯಾಗಿತ್ತು. ಎರಡು ಭಾಗಗಳಲ್ಲಿ ಹೋರಾಟ ಆರಂಭವಾಗುತ್ತಿದಂತೆಯೇ ಸೇತುವೆ ನಿರ್ಮಾಣಕ್ಕೆ ತಡೆ ಹಿಡಿದಾಗ ತಜ್ಞರ ಸಮಿತಿ ಬಂದು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಮತ್ತೆ ಕಳೆದೊಂದು ತಿಂಗಳ ಹಿಂದೆ ₹39 ಲಕ್ಷ ಬಿಡುಗಡೆ ಮಾಡಿ ಅದೇ ನೀರಾವರಿ ನಿಗಮದಿಂದ ಡಿಪಿಆರ್‌ ಸಿದ್ಧತೆಗೆ ಹಾಗೂ ಟೆಂಡರ್‌ ಕರೆಯಲಾಗಿದೆ. ಈ ಸಂದರ್ಭದಲ್ಲಿ ಶಿರಹಟ್ಟಿಯ ಆನಂದಸ್ವಾಮಿ ಗಡ್ಡದೇವರ ಮಠ ಪತ್ರ ಬರೆದಿದ್ದಾರೆ.

ಸೇತುವೆಗಾಗಿ ಹೊಳೆಇಟಗಿ ಭಾಗದ ಜನರ ಬೇಡಿಕೆ ಹೆಚ್ಚಾಗಿದೆ. ಜತೆಗೆ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ, ಮತ್ತೆ ತಜ್ಞರ ಸಮಿತಿ ಕಳಿಸಿ ಸೂಕ್ತ ಸ್ಥಳವನ್ನು ಸೇತುವೆ ನಿರ್ಮಾಣಕ್ಕೆ ಆಯ್ಕೆ ಮಾಡಲಿ ಎಂದು ಪತ್ರ ಬರೆದಿದ್ದೇನೆ ಎನ್ನುತ್ತಾರೆ ಶಿರಹಟ್ಟಿಯ ಆನಂದಸ್ವಾಮಿ ಗಡ್ಡದೇವರ ಮಠ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ