ಕನ್ನಡಪ್ರಭ ವಾರ್ತೆ ಮಂಡ್ಯ
ಅವಧಿ ಮೀರಿರುವ ಕಬ್ಬನ್ನು ಕಟಾವು ಮಾಡದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ ಉದ್ರಿಕ್ತ ರೈತರು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರಿಗೆ ಘೇರಾವ್ ಹಾಕಿದ ಘಟನೆ ಮಂಗಳವಾರ ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆಯಿತು.೧೮ ತಿಂಗಳು ಕಳೆದಿರುವ ಕಬ್ಬನ್ನು ಮೈಷುಗರ್ ಕಾರ್ಖಾನೆ ಆಡಳಿತ ಮಂಡಳಿಯವರು ಇದುವರೆಗೂ ಕಟಾವು ಮಾಡಿರಲಿಲ್ಲ. ಇದರಿಂದ ರೈತರು ಸಹಜವಾಗಿಯೇ ರೈತರು ಉದ್ರಿಕ್ತಗೊಂಡಿದ್ದರು.
ಮಂಗಳವಾರ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಫೀಲ್ಡ್ ವಿಸಿಟ್‌ಗಾಗಿ ಮಂಗಲ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ರೈತರು ಅಧ್ಯಕ್ಷರಿಗೆ ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡರು. ೧೮ ತಿಂಗಳಾಗಿದೆ. ಇದುವರೆಗೂ ಕಬ್ಬು ಕಟಾವು ಮಾಡಿಲ್ಲ. ಹೀಗಾದರೆ ನಮ್ಮ ಗತಿ ಏನಾಗಬೇಕು. ಸಕಾಲದಲ್ಲಿ ಕಬ್ಬು ಕಟಾವು ಮಾಡಲು ಸಾಧ್ಯವಾಗದಿದ್ದ ಮೇಲೆ ಕಾರ್ಖಾನೆ ಏಕೆ ನಡೆಸುತ್ತೀರಿ. ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವುದಕ್ಕೆ ನಮಗೆ ಅನುಮತಿ ನೀಡುವಂತೆ ಆಕ್ರೋಶದಿಂದ ನುಡಿದರು.ಕಬ್ಬು ಕಟಾವು ಮಾಡಿ ಎಂದರೆ ಆಳುಗಳ ಸಮಸ್ಯೆ ಎನ್ನುತ್ತೀರಿ. ಕೂಲಿ ಕಾರ್ಮಿಕರನ್ನು ಕರೆತಂದು ಕಬ್ಬು ಕಟಾವು ಮಾಡಿಸಲಾಗದಿದ್ದ ಮೇಲೆ ರೈತರನ್ನು ಏಕೆ ತೊಂದರೆ ಕೊಡುತ್ತೀರಿ. ೧೪ ತಿಂಗಳಿಗೆ ಕಟಾವಾಗಬೇಕಾದ ಕಬ್ಬು ೧೮ ತಿಂಗಳಾಗಿದೆ. ಇನ್ಯಾವಾಗ ನೀವು ಕಟಾವು ಮಾಡಿಸೋದು. ನೀವು ಕೂಲಿ ಕಾರ್ಮಿಕರನ್ನು ಕರೆತರುವವರೆಗೆ ಕಬ್ಬನ್ನು ಗದ್ದೆಯಲ್ಲೇ ಉಳಿಸಿಕೊಂಡಿರಬೇಕಾ ಎಂದೆಲ್ಲಾ ಪ್ರಶ್ನಿಸಿದರು.
ಮೈಷುಗರ್ ವ್ಯಾಪ್ತಿಯ ರೈತರು ಕಾರ್ಖಾನೆ ಬಿಟ್ಟು ಬೇರೆ ಕಡೆಗೆ ಕಬ್ಬು ಕಳಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತೀರಿ. ಹಾಗಿದ್ದ ಮೇಲೆ ಸಕಾಲದಲ್ಲಿ ಕಬ್ಬು ಕಟಾವು ಮಾಡಿ ಅರೆಯಬೇಕು. ಕಾರ್ಖಾನೆಯನ್ನು ನಂಬಿ ಕಷ್ಟಪಟ್ಟು ಬೆಳದ ಕಬ್ಬು ಗದ್ದೆಯಲ್ಲೇ ಒಣಗುತ್ತಿದೆ. ಇದನ್ನು ನೋಡುತ್ತಾ ನಾವು ಬಾಯಿಗೆ ಮಣ್ಣು ಹಾಕೋಳೋದಾ. ನಮಗೆ ನ್ಯಾಯ ಬೇಕು ಎಂದು ರೈತರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕೂಲಿ ಕಾರ್ಮಿಕರನ್ನು ಎಲ್ಲೆಡೆ ನಿಯೋಜಿಸಲಾಗಿದೆ. ಆದ್ಯತೆಯ ಮೇರೆಗೆ ಕಬ್ಬನ್ನು ಕಡಿಯುತ್ತಿರುವುದರಿಂದ ವಿಳಂಬವಾಗುತ್ತಿದೆ. ಇನ್ನೂ ಹಲವು ಕೂಲಿ ಕಾರ್ಮಿಕರು ಬರಲಿದ್ದಾರೆ. ಆದಷ್ಟು ಬೇಗ ಕಬ್ಬನ್ನು ಕಟಾವು ಮಾಡಿಸುವುದಾಗಿ ಭರವಸೆ ನೀಡಿದರೂ ರೈತರು ಸುಮ್ಮನಾಗಲೇ ಇಲ್ಲ.
ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಬ್ಬಿಬ್ಬಾದರು. ಪರಿಸ್ಥಿತಿ ಕೈ ಮೀರುತ್ತಿರುವ ಮಾಹಿತಿಯನ್ನರಿತು ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಪೊಲೀಸರ ಎದುರಿನಲ್ಲೇ ಅಧ್ಯಕ್ಷರ ವಿರುದ್ಧ ಆಕ್ರೋಶವನ್ನು ರೈತರು ಹೊರಹಾಕಿದರು. ಬಳಿಕ ಪೊಲೀಸರ ರಕ್ಷಣೆಯಲ್ಲಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಅಲ್ಲಿಂದ ನಿರ್ಗಮಿಸಿದರು.ಐದು ಬ್ಯಾಚ್ ಕಾರ್ಮಿಕರ ಒದಗಿಸಿ ಕಬ್ಬು ಕಟಾವು:
ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿಕೆಕನ್ನಡಪ್ರಭ ವಾರ್ತೆ ಮಂಡ್ಯ
ಕಬ್ಬು ಕಟಾವು ಮಾಡದಿರುವ ಬಗ್ಗೆ ತಮ್ಮ ನೋವನ್ನು ರೈತರು ಹೇಳಿಕೊಂಡಿದ್ದಾರೆ. ನಾಳೆಯೊಳಗೆ ಕಾರ್ಮಿಕರ ಒದಗಿಸಿ ಕಬ್ಬು ಕಟಾವು ಮಾಡುವ ಬಗ್ಗೆ ತಿಳಿಸಿರುವುದಾಗಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸದರು.ಕಬ್ಬು ಕಟಾವಿಗೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ರೈತರ ಮುತ್ತಿಗೆ ಹಾಕಿದ ವಿಚಾರವಾಗಿ ಕೇಳಿದಾಗ, ನೊಂದ ರೈತರು ತಮ್ಮ ನೋವು, ಸಂಕಟ ಪ್ರದರ್ಶನ ಮಾಡಿದ್ದಾರೆ. ಜುಲೈ ತಿಂಗಳಲ್ಲೇ ಕಾರ್ಖಾನೆ ಪ್ರಾರಂಭಿಸಲು ಸಕ್ಕರೆ ಆಯುಕ್ತರಿಗೆ ಮನವಿ ಮಾಡಿದ್ದೆವು. ಆದರೆ, ಹಳೆ ಮೈಸೂರು ಭಾಗದಲ್ಲಿ ಆ.1ರಿಂದ ಪ್ರಾರಂಭಿಸಲು ಆದೇಶ ಮಾಡಿದ್ದರು. ಹೀಗಾಗಿ ಒಂದು ತಿಂಗಳ ಕಬ್ಬು ಸಕಲ ಕಾಲದಲ್ಲಿ ಕಟಾವು ಮಾಡಲಾಗಲಿಲ್ಲವೆಂದು ಸ್ಪಷ್ಟನೆ ನೀಡಿದರು.
ಕಬ್ಬು ಕಟಾವು ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಕೀಯ ಬೆರಿಸೋಲ್ಲ. ನೊಂದ ರೈತರು ಕಬ್ಬು ಕಟಾವಾಗದ ನೋವಿನಲ್ಲಿ ಮಾತನಾಡಿದ್ದಾರೆ ಅಷ್ಟೆ. ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಕಟಾವಿಗೂ ಸಂಬಂಧ ಇಲ್ಲ. ಕಬ್ಬು ಕಟಾವಿಗೆ ಫೀಲ್ಡ್‌ಮನ್‌ಗಳು ಜವಾಬ್ದಾರಿ ಇರುತ್ತಾರೆ. ಕಬ್ಬು ಕಟಾವು ವಿಚಾರದಲ್ಲಿ ಪಕ್ಷಪಾತ ಮಾಡದಂತೆ ಸೂಚನೆ ಕೊಟ್ಟಿದ್ದೇನೆ. ನಾಳೆಯೇ 5 ಬ್ಯಾಚ್ ಕಬ್ಬು ಕಟಾವು ಕಾರ್ಮಿಕರ ಕೊಡುತ್ತಿದ್ದೇವೆ. 14 ತಿಂಗಳ ಕಬ್ಬು ಮಾತ್ರ ಬಾಕಿ ಇದೆ ಅಷ್ಟೆ. ಕಳೆದ ಬಾರಿ ಕಷ್ಟಪಟ್ಟು ಕಾರ್ಖಾನೆ ನಡೆಸಿದ್ದೇವೆ. ಈ ಬಾರಿ 50 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. 61 ಸಾವಿರ ಟನ್ ಕಬ್ಬು ಅರೆಸಿದ್ದೇವೆ. ರೈತರಿಗೆ ತೊಂದರೆ ಆಗದ ರೀತಿ ಕ್ತಮ ವಹಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.