ಮಕ್ಕಳಿಗಾಗಿ ಯೋಜನೆ । ಪ್ರಗತಿ ಪರಿಶೀಲಿಸಿದ ಶಾಸಕ
ಅರಕಲಗೂಡು: ಅಂಗನವಾಡಿ ಹಾಗೂ ಇತರೆ ಮಕ್ಕಳಿಗೆಂದೇ ವಿನೂತನವಾಗಿ ಆರಂಭಿಸಿದ ‘ಮಕ್ಕಳ ಮನೆ’ ಯಶಸ್ವಿಯಾಗಿ ಹೊರಹೊಮ್ಮಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಶಾಸಕ ಎ.ಮಂಜು ಹರ್ಷ ವ್ಯಕ್ತಪಡಿಸಿದರು.ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಕ್ಕಳ ಮನೆ’ ರೂಪುರೇಷೆ ಸಭೆಯಲ್ಲಿ ಮಾತನಾಡಿ, ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 12 ‘ಮಕ್ಕಳ ಮನೆ’ ಪ್ರಾರಂಭ ಮಾಡಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದ ಮಕ್ಕಳಿಗೆ ಸೂಕ್ತ ಸೌಲಭ್ಯ, ಉತ್ತಮ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಮನೆ ತೆರೆಯುವ ಸಂಬಂಧ ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ, ಮುಖ್ಯ ಶಿಕ್ಷಕರು ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಸಭೆ ಕರೆದು ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ತಾಲೂಕಿನ ರೈತರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗೆ ಸೇರಿಸಲು ವರ್ಷಕ್ಕೆ 35 ಸಾವಿರ ರು. ಖರ್ಚು ಆಗುತ್ತಿರುವುದನ್ನು ಮನಗಂಡು ನಾನು, ಧರ್ಮಪತ್ನಿ ಮತ್ತು ನಮ್ಮೂರಿನ ಹಳೇ ವಿದ್ಯಾರ್ಥಿಗಳು ಸೇರಿ ‘ಮಕ್ಕಳ ಮನೆ’ಯನ್ನು ಆರಂಭಿಸಿದ್ದು, ಇಲ್ಲಿ ಒಂದು ಮಗುವಿಗೆ 1000 ಸಾವಿರ ರು. ಶುಲ್ಕ, ಪ್ರತಿ ತಿಂಗಳು 500 ರು. ಒಟ್ಟು ವರ್ಷಕ್ಕೆ 7000 ಸಾವಿರ ರು. ಖರ್ಚಾಗಲಿದೆ. ಈ ಮಕ್ಕಳ ಮನೆಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ತಾಲೂಕು ರಾಜ್ಯಕ್ಕೆ ಮಾದರಿಯಾಗಲಿ ಎಂದರು.ಕಾನ್ವೆಂಟ್‌ಗಳಲ್ಲಿ ನೀಡುವ ಶಿಕ್ಷಣವನ್ನು ‘ಮಕ್ಕಳ ಮನೆ’ಯಲ್ಲಿ ನೀಡಲಾಗುತ್ತಿದೆ. ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ನೋಟ್ ಬುಕ್, ಆಟಿಕೆಗಳನ್ನು ನೀಡಲಾಗಿದೆ. ಆದರೂ ಪೋಷಕರಿಗೆ ಇನ್ನೂ ಕಾನ್ವೆಂಟ್ ವ್ಯಾಮೋಹ ಹೋಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
80 ರಷ್ಟು ಶಾಲೆ ಖಾತೆಯಾಗಿಲ್ಲ:ತಾಲೂಕಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶೇ. 80 ರಷ್ಟು ಶಾಲೆಯ ಹೆಸರಿಗೆ ಖಾತೆಯೇ ಆಗಿಲ್ಲ. ಶಾಲೆ ಹೆಸರಿಗೆ ಖಾತೆ ಮಾಡಿಕೊಡುವಂತೆ ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ತಹಸೀಲ್ದಾರ್ ಸೌಮ್ಯ, ಬಿಇಒ ನಾರಾಯಣ್, ಇಒ ಪ್ರಕಾಶ್, ಇತರರು ಇದ್ದರು.