ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಿಲೋಮೀಟರ್ 74 ಮತ್ತು 75ರ ಅರೆಬೆಟ್ಟ-ಯಡಕುಮಾರಿ ವಿಭಾಗದಲ್ಲಿ ಈ ಘಟನೆಯಿಂದ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ರೈಲುಗಳ ಸಂಚಾರ ಸ್ಥಗಿತಗೊಂಡಿತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲೊಂದು ಬಂಡೆ ಬಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿತು. ಬಂಡೆಗಳ ಉರುಳಿಕೆಯಿಂದ ರೈಲ್ವೆ ಹಳಿಗೆ ಹಾನಿಯಾಗಿದ್ದು, ಸಕಲೇಶಪುರ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿಯಿಂದ ರೈಲುಗಳು ನಿಲುಗಡೆಗೊಂಡವು. ನೂರಾರು ಪ್ರಯಾಣಿಕರು ನಿಲ್ದಾಣದಲ್ಲಿ ಕಾಲಕಳೆದರೆ, ಕೆಲವರು ಬೇರೆ ವಾಹನಗಳಲ್ಲಿ ತೆರಳಿದರು. ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಕಾಫಿ, ತಿಂಡಿ, ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳನ್ನು ಒದಗಿಸಿದರು.
ರೈಲ್ವೆ ಇಲಾಖೆಯ ರಕ್ಷಣಾ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ, ಬಿದ್ದ ಬಂಡೆಗಳನ್ನು ತೆರವುಗೊಳಿಸಿದ ನಂತರ, ಸಕಲೇಶಪುರ ನಿಲ್ದಾಣದಲ್ಲಿ ನಿಂತಿದ್ದ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಮತ್ತು ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಸಂಚಾರವನ್ನು ಮುಂದುವರಿಸಿವೆ. ಸುಮಾರು ಆರು ಗಂಟೆಗಳ ಕಾಲ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ರೈಲ್ವೆ ಸಿಬ್ಬಂದಿಯ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.