ಗಿಗ್ ಕಾರ್ಮಿಕರ ವಿಮಾ ಯೋಜನೆ ನೋಂದಣಿ ಕುಂಠಿತ

KannadaprabhaNewsNetwork |  
Published : Jun 18, 2025, 01:13 AM IST
17ಕೆಆರ್ ಎಂಎನ್ 1.ಜೆಪಿಜಿಸಾಂದರ್ಬಿಕ ಚಿತ್ರ | Kannada Prabha

ಸಾರಾಂಶ

ಅಸಂಘಟಿತ ಕಾರ್ಮಿಕರಿಗೆ ಸಹಾಯಹಸ್ತ ಚಾಚಲು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಗಿಗ್‌ ಕಾರ್ಮಿಕರ ವಿಮಾ ಯೋಜನೆ’ ಜಾರಿಗೊಳಿಸಲಾಗಿದೆ.

ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರಕಾರ್ಮಿಕ ಇಲಾಖೆ ನಿರಂತರ ಪ್ರಯತ್ನ ನಡೆಸಿದರೂ ಗಿಗ್ ಕಾರ್ಮಿಕರ ನಿರುತ್ಸಾಹದ ಕಾರಣ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ವಿಮಾ ಯೋಜನೆಯ ನೋಂದಣಿ ಜಿಲ್ಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ.ಅಸಂಘಟಿತ ಕಾರ್ಮಿಕರಿಗೆ ಸಹಾಯಹಸ್ತ ಚಾಚಲು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಗಿಗ್‌ ಕಾರ್ಮಿಕರ ವಿಮಾ ಯೋಜನೆ’ ಜಾರಿಗೊಳಿಸಲಾಗಿದೆ. ಈ ಯೋಜನೆ ಬಂದು 20 ತಿಂಗಳಾದರೂ ಇಲ್ಲಿವರೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕೇವಲ 101 ಮಂದಿ ಕಾರ್ಮಿಕರು ಮಾತ್ರ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಗಿಗ್ ಕಾರ್ಮಿಕರಿದ್ದಾರೆ. ಆದರೆ, ಕಾರ್ಮಿಕ ಇಲಾಖೆಯ ಪ್ರಯತ್ನದ ಫಲವಾಗಿ ಈವರೆಗೆ 101 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು ಕಾರ್ಮಿಕರ ಪೈಕಿ ನೋಂದಣಿ ಮಾಡಿಸಿಕೊಂಡವರ ಪ್ರಮಾಣ ತೀರಾ ಕಡಿಮೆ ಇದೆ.ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಸರ್ಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿತ್ತು. ಅಧಿಕೃತವಾಗಿ ಯೋಜನೆಯನ್ನು 2023ರ ಸೆ.7ರಿಂದ ಜಾರಿ ತರಲಾಯಿತು. ಆ ದಿನದಿಂದಲೇ ನೋಂದಣಿ ಆರಂಭಿಸಲಾಗಿತ್ತು. ಇ-ಶ್ರಮ ಹಾಗೂ ಸೇವಾ ಸಿಂಧು ಪೋರ್ಟಲ್‌ಗಳಲ್ಲಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಕಾರ್ಮಿಕ ಇಲಾಖೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಾಕಷ್ಟು ಪ್ರಚಾರ ಕೈಗೊಂಡರು ಕಾರ್ಮಿಕರು ಮಾತ್ರ ನೋಂದಣಿಗೆ ಮನಸ್ಸು ಮಾಡುತ್ತಿಲ್ಲ.ಮಂದಗತಿಗೆ ಕಾರಣವೇನು?ಯೋಜನೆ ಗಿಗ್ ಕಾರ್ಮಿಕರಿಗೆ ತುಂಬ ಪ್ರಯೋಜನಕಾರಿಯಾಗಿದೆ. ಇದು ವಿಮೆ ಯೋಜನೆ ಆಗಿರುವುದರಿಂದ ತಕ್ಷಣಕ್ಕೆ ಪರಿಹಾರ, ಆರ್ಥಿಕ ನೆರವು ಕಾಣುವುದಿಲ್ಲ. ಇದು ನೋಂದಣಿಯ ನಿರುತ್ಸಾಹಕ್ಕೆ ಕಾರಣವಾಗಿರಬಹುದು. ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಈ ವೃತ್ತಿಗೆ ಬಂದಿರುತ್ತಾರೆ. ಇದಲ್ಲದೇ ಹೆಚ್ಚಿನವರು ಅರ್ಧಕ್ಕೆ ಉದ್ಯೋಗ ಬಿಡುತ್ತಾರೆ. ದೀರ್ಘಾವಧಿಯಲ್ಲಿ ಮುಂದುವರಿಯಲು ಬಯಸುವುದಿಲ್ಲ. ಹೊರ ರಾಜ್ಯದವರಿಗೂ ನೋಂದಣಿಗೆ ಅವಕಾಶ ಇದೆ. ಗಿಗ್ ಕಾರ್ಮಿಕರಲ್ಲಿ ಬಹುತೇಕರು ಹೊರ ರಾಜ್ಯದವರಾಗಿದ್ದರಿಂದ ಮಾಹಿತಿ ಕೊರತೆ, ಉದ್ಯೋಗದ ಅನಿಶ್ಚಿತತೆ ಇತ್ಯಾದಿ ಸಮಸ್ಯೆಗಳೂ ನೋಂದಣಿ ನಿರುತ್ಸಾಹಕ್ಕೆ ಕಾರಣವಾಗಿರಬಹುದು ಎನ್ನುತ್ತಾರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು.

ಏನಿದು ಯೋಜನೆ?

ಪ್ಲಾಟ್‌ಫಾರ್ಮ್ ಆಧಾರಿತ ಸೇವೆಗಳಾದ ಅಮೆಜಾನ್, ಫಿಪ್‌ಕಾರ್ಟ್, ಸ್ವಿಗ್ಗಿ, ಜೊಮ್ಯಾಟೋ, ಅಗ್ರಿಗೇಟರ್‌ಗಳಾದ ಓಲಾ, ಊಬರ್ ಸೇರಿ ರೈಡ್‌ ಶೇರಿಂಗ್ ಸರ್ವಿಸಸ್, ಫುಡ್ ಆ್ಯಂಡ್ ಗ್ರಾಸರಿ ಡಿಲೆವರಿ ಸರ್ವಿಸಸ್, ಲಾಜಿಸ್ಟಿಕ್ ಸರ್ವಿಸಸ್, ಇ-ಮಾರ್ಕೆಟ್, ಪ್ರೊಫೆಷನಲ್ ಆ್ಯಕ್ಟಿವಿಟಿ ಪ್ರೊವೈಡರ್, ಹೆಲ್ತ್ ಕೇರ್ , ಟ್ರಾವೆಲ್ ಆ್ಯಂಡ್ ಹಾಸ್ಪಿಟಾಲಿಟಿ, ಕಂಟೆಂಟ್ ಆ್ಯಂಡ್ ಮೀಡಿಯಾ ಸರ್ವಿಸ್‌ಗಳಲ್ಲಿ ತೊಡಗಿಸಿಕೊಂಡವರು ನಿಗದಿತ ಅಧಿಕೃತ ದಾಖಲೆಗಳನ್ನು ಒದಗಿಸಿ ನೋಂದಣಿ ಮಾಡಿಸಿಕೊಂಡ ಗಿಗ್ ಕಾರ್ಮಿಕರು ವಿಮೆ ಯೋಜನೆಗೆ ಅರ್ಹರಾಗಿರುತ್ತಾರೆ.

ಫಲಾನುಭವಿಯ ಮರಣದ ಬಳಿಕ ಕಾನೂನು ಬದ್ದ ವಾರಸುದಾರರಿಗೆ 2 ಲಕ್ಷ ರು. ವಿಮೆ ಪರಿಹಾರ, ಅಪಘಾತ ಮರಣ ಪ್ರಕರಣದಲ್ಲಿ 2 ಲಕ್ಷ ರು. ವಿಮೆ ಪರಿಹಾರ. ಶಾಶ್ವತ, ಸಂಪೂರ್ಣ/ಭಾಗಶಃ ದೈಹಿಕ ದುರ್ಬಲತೆ ಪರಿಹಾರವಾಗಿ, ಶೇಕಡವಾರು ದುರ್ಬಲತೆ ಆಧಾರದ ಮೇಲೆ 2 ಲಕ್ಷ ರು. ಪರಿಹಾರ, 1 ಲಕ್ಷ ರು.ವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ಸೌಲಭ್ಯ ದೊರೆಯಲಿದೆ ಎಂದು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಡಾಟಾ ಎಂಟ್ರಿ ಆಪರೇಟರ್ (ಡಿಇಒ) ಅರ್ಪಿತಾ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

...ಕೋಟ್ ...

ಗಿಗ್ ವಿಮಾ ಯೋಜನೆಯು ಅತ್ಯಂತ ಮಹತ್ವದ್ದಾಗಿದ್ದು, ಜಾಗೃತಿ ಮೂಡಿಸಲಾಗುತ್ತಿದೆ. ನೋಂದಣಿ ಮಾಡಿಸಲೆಂದು ಶಿಬಿರಗಳನ್ನೂ ಆಯೋಜಿಸುತ್ತಿದ್ದೇವೆ. ಅಸಂಘಟಿತ ಕಾರ್ಮಿಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಈ ಯೋಜನೆಯ ನೋಂದಣಿಗೆ ಇಲಾಖೆಯಿಂದ ಪ್ರಯತ್ನ ಹಾಗೂ ಪ್ರಚಾರ ಮಾಡಲಾಗಿದೆ. - ಎಚ್.ಆರ್. ನಾಗೇಂದ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ.17ಕೆಆರ್ ಎಂಎನ್ 1.ಜೆಪಿಜಿಸಾಂದರ್ಬಿಕ ಚಿತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ