.ಕೈಕೊಟ್ಟ ಶುಂಠಿ, ಕೈ ಹಿಡಿದ ತೋಟಗಾರಿಕೆ ಬೆಳೆ; ಮೈಸೂರು ತಾ. ನುಗ್ಗಹಳ್ಳಿಯ ರೈತ ಶಿವಣ್ಣ ಸಾಧನೆ

KannadaprabhaNewsNetwork | Published : May 5, 2025 12:47 AM

ಶುಂಠಿಗೆ ಉತ್ತಮ ಮಾರುಕಟ್ಟೆ ದರ ಇದ್ದಾಗ ವಾರ್ಷಿಕ ನಾಲ್ಕೈದು ಲಕ್ಷ ರು.ವರೆಗೆ ಲಾಭ ಗಳಿಸುತ್ತಿದ್ದರು. ಆದರೆ ಈಗ ಶುಂಠಿಯ ದರ ಕುಸಿತ ಆಗಿರುವುದರಿಂದ ಇವರ ಆದಾಯವೂ ಕಡಿಮೆಯಾಗಿದೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ನುಗ್ಗಹಳ್ಳಿಯ ಶಿವಣ್ಣ ಅವರಿಗೆ ಶುಂಠಿ ಬೆಳೆ ಕೈಕೊಟ್ಟಿದೆ. ಆದರೆ ತೋಟಗಾರಿಕೆ ಬೆಳೆ ಕೈಹಿಡಿದಿದೆ.

ಇವರಿಗೆ ಸುಮಾರು ನಾಲ್ಕು ಎಕರೆ ಜಮೀನಿದೆ. ಪಂಪ್‌ಸೆಟ್‌ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು, ಮೆಣಸಿನಕಾಯಿ, ಕೋಸು, ಬೀನ್ಸ್‌, ಹೂಕೋಸು, ಸಾಂಬಾರ್‌ ಸೌತೆ, ಬದನೆಕಾಯಿ, ಹೀರೆಕಾಯಿ, ಹಾಗಲಕಾಯಿ ಬೆಳೆಯುತ್ತಿದ್ದಾರೆ. ತರಕಾರಿಯನ್ನು ಮೈಸೂರಿನ ಬಂಡೀಪಾಳ್ಯದಲ್ಲಿರುವ ಕೃಷಿ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಾರಾಟ ಮಾಡುತ್ತಾರೆ.

ಒಂದು ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ತೆಂಗು-50, ಮಾವು-50 ಮರಗಳಿವೆ. ಮಾವಿನ ಹಣ್ಣನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಾರೆ.

ಶುಂಠಿಗೆ ಉತ್ತಮ ಮಾರುಕಟ್ಟೆ ದರ ಇದ್ದಾಗ ವಾರ್ಷಿಕ ನಾಲ್ಕೈದು ಲಕ್ಷ ರು.ವರೆಗೆ ಲಾಭ ಗಳಿಸುತ್ತಿದ್ದರು. ಆದರೆ ಈಗ ಶುಂಠಿಯ ದರ ಕುಸಿತ ಆಗಿರುವುದರಿಂದ ಇವರ ಆದಾಯವೂ ಕಡಿಮೆಯಾಗಿದೆ.

ಇವರಿಗೆ ಹೈನುಗಾರಿಕೆ ಉಪ ಕಸುಬಾಗಿದೆ. ಹಸುಗಳು-2 ಇವೆ. ಡೇರಿಗೆ ಐದಾರು ಲೀಟರ್‌ ಹಾಲು ಪೂರೈಸುತ್ತಾರೆ. ಕುರಿಗಳು-6, ಕೋಳಿಗಳು-400, ಮೀನು ಮರಿಗಳು- 600 ಇವೆ. ಕಾಲಕಾಲಕ್ಕೆ ಮೈಸೂರಿನ ಒಡಿಪಿಯಲ್ಲಿ ಮಣ್ಣು ಪರೀಕ್ಷೆ ಮಾಡಿಸಿ, ಫಲವತ್ತತೆ ಕಾಪಾಡುತ್ತಿದ್ದಾರೆ. ಸಮಗ್ರ ಕೃಷಿ, ಯಾಂತ್ರೀಕರಣ ಅಳವಡಿಸಿಕೊಂಡು ಹನಿ ನೀರಾವರಿ ಮೂಲಕ ನೀರಿನ ಸದ್ಬಳಕೆ ಮಾಡುತ್ತಿದ್ದಾರೆ. ಚಿಪ್ಪು ಅಣಬೆ ಬೇಸಾಯದಿಂದ ಹೆಚ್ಚುವರಿ ಆದಾಯದ ಮೂಲ ಕಂಡು ಕೊಂಡಿದ್ದರು. ಆದರೆ ಈಗ ಮಾಡುತ್ತಿಲ್ಲ.

ಇವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ. ಪುತ್ರಿಯರಿಬ್ಬರದು ಮದುವೆಯಾಗಿದೆ. ಪುತ್ರ ರವಿಚಂದ್ರ ಕೂಡ ತಂದೆಯ ಜೊತೆ ಕೃಷಿಗೆ ಸಾಥ್‌ ನೀಡುತ್ತಿದ್ದಾರೆ.

ಶಿವಣ್ಣ ಅವರನ್ನು 2024ರ ಮೈಸೂರು ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ.

ಸಂಪರ್ಕ ವಿಳಾಸಃ

ಶಿವಣ್ಣ ಬಿನ್‌ ಲೇ. ಕರೀಗೌಡ

ನುಗ್ಗಹಳ್ಳಿ

ಇಲವಾಲ ಹೋಬಳಿ,

ಮೈಸೂರು ತಾಲೂಕು.

ಮೈಸೂರು ಜಿಲ್ಲೆ

ಮೊ.96323 92118

ವ್ಯವಸಾಯ ನಾವೇ ಸ್ವತಃ ದುಡಿದು ಮಾಡಿದರೆ ಸುಲಭ. ಸಾಲ ಮಾಡಿಕೊಂಡು, ಆಳುಕಾಳುಗಳ ಕೈಲಿ ಮಾಡಿಸಲು ಹೋದರೆ ಕಷ್ಟ.

- ಶಿವಣ್ಣ, ನುಗ್ಗಹಳ್ಳಿ