ಗಿಣಿವಾಲ: ಸರ್ಕಾರಿ ಶಾಲೆ ಕಾನ್ವೆಂಟ್‌ ಆಗಿ ಬದಲು

KannadaprabhaNewsNetwork |  
Published : Jul 22, 2025, 01:15 AM IST
21ಎಎನ್‌ಟಿ1ಇಪಿ:ಗಿಣಿವಾಲ ಸರ್ಕಾರಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳು. ಗ್ರಾಮಸ್ಥರು ಹಾಗೂ ಶಿಕ್ಷಕರು ಚಿತ್ರದಲ್ಲಿ ಇದ್ದಾರೆ. | Kannada Prabha

ಸಾರಾಂಶ

2025ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಇಲ್ಲದೆ ಮುಚ್ಚುವ ಹಂತ ತಲುಪಿದ್ದ, ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೂಕಿನ ಗಡಿಭಾಗದ ಗಿಣಿವಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು, ಊರಿನ ಗ್ರಾಮಸ್ಥರೆ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿ, ಎಲ್‌ಕೆಜಿ, ಯುಕೆಜಿಗೆ 32, ಒಂದರಿಂದ 7ರ ವರೆಗೆ 50 ವಿದ್ಯಾರ್ಥಿಗಳನ್ನು ತಾವೇ ಮುಂದೆ ನಿಂತು ದಾಖಲಾತಿ ಮಾಡಿಸುವ ಮೂಲಕ ಸರ್ಕಾರಿ ಶಾಲೆಗೆ ಹಳೆಯ ವೈಭವವನ್ನು, ಕಲ್ಪಸಿ ಶಾಲೆಯನ್ನು ಉಳಿಸಿಕೊಂಡಿದ್ದಾರೆ.

ಆನವಟ್ಟಿ: 2025ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಇಲ್ಲದೆ ಮುಚ್ಚುವ ಹಂತ ತಲುಪಿದ್ದ, ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೂಕಿನ ಗಡಿಭಾಗದ ಗಿಣಿವಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು, ಊರಿನ ಗ್ರಾಮಸ್ಥರೆ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿ, ಎಲ್‌ಕೆಜಿ, ಯುಕೆಜಿಗೆ 32, ಒಂದರಿಂದ 7ರ ವರೆಗೆ 50 ವಿದ್ಯಾರ್ಥಿಗಳನ್ನು ತಾವೇ ಮುಂದೆ ನಿಂತು ದಾಖಲಾತಿ ಮಾಡಿಸುವ ಮೂಲಕ ಸರ್ಕಾರಿ ಶಾಲೆಗೆ ಹಳೆಯ ವೈಭವವನ್ನು, ಕಲ್ಪಸಿ ಶಾಲೆಯನ್ನು ಉಳಿಸಿಕೊಂಡಿದ್ದಾರೆ.ಗ್ರಾಮಸ್ಥರು ಸಂಘಟಿತರಾಗಿ ಶಾಲಾ ಕ್ಷೇಮಾಭಿವೃದ್ಧಿ ಸಮಿತಿ ರಚಿಸಿಕೊಂಡು, ಒಬ್ಬೊಬ್ಬರು 2 ರಿಂದ 10 ಸಾವಿರದವರೆಗೆ ದೇಣಿ ಹಾಕಿಕೊಂಡು, 2 ಲಕ್ಷ ರು. ಹಣ ಸಂಗ್ರಹಿಸಿ ಎಲ್‌ಕೆಜಿ, ಯುಕೆಜಿ ತರಗತಿಯನ್ನು ಸರ್ಕಾರಿ ಶಾಲೆಯಲ್ಲೆ, ಕಾನ್ವೆಂಟ್‌ ಮಾದರಿಯಲ್ಲಿ ಪ್ರಾರಂಭಿಸಿದ್ದಾರೆ.

ಎಲ್‌ಕೆಜಿ, ಯುಕೆಜಿ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಿದ್ದು, ತಿಂಗಳಿಗೆ 10 ಸಾವಿರ ಬಾಡಿಗೆ ಹಾಗೂ ಒಬ್ಬ ಶಿಕ್ಷಕಿಯ ಸಂಬಳ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಿಠೋಪಕರಣಗಳನ್ನು ಗ್ರಾಮಸ್ಥರೇ ಕಲ್ಪಿಸಿದ್ದಾರೆ.

ತಿಂಗಳಿಗೆ 6 ಸಾವಿರ ರುಪಾಯಿಯಂತೆ ವರ್ಷದ ಯುಕೆಜಿ ಶಿಕ್ಷಕಿಯ ಸಂಬಳವನ್ನು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಪಿ.ರುದ್ರಗೌಡ ಅವರು ವಹಿಸಿಕೊಂಡಿದ್ದಾರೆ.

ಖಾಸಗಿ ಶಾಲೆಯ ವ್ಯಾಮೋಹ, ಪೂರ್ವ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಶಿಕ್ಷಣದ ಬೇಡಿಕೆಯಿಂದ, ಪ್ರಸಕ್ತ ವರ್ಷದಲ್ಲಿ 6 ವಿದ್ಯಾರ್ಥಿಗಳು ಮಾತ್ರ ಇದ್ದು, ಶಾಲೆ ಮುಚ್ಚುವ ಹಂತ ತಲುಪಿತ್ತು. ಮುಖ್ಯ ಶಿಕ್ಷಕ ಜಿ.ಜಗದೀಶ್‌, ಎಸ್‌ಡಿಎಂಸಿ ಅಧ್ಯಕ್ಷ ಎಸ್‌.ಈರನಗೌಡ, ಸಿಆರ್‌ಪಿ ಎನ್.ವೈ.ಮೋಹನ್‌, ಮುಖಂಡರಾದ ಕೆ.ಪಿ ರುದ್ರಗೌಡ, ಪ್ರವೀಣ ಕೆ.ಬಿ, ಹೋಳಬಸಪ್ಪ ಗೌಡ, ಗುರುಶಾಂತಪ್ಪ, ಪರಮೇಶಪ್ಪ, ಮಂಜಣ್ಣ ಅಂಜೇರ್‌, ಶಾಂತನಗೌಡ, ರಾಜಣ್ಣ ಶಾನಬೋಗ, ಮಲ್ಲನ ಗೌಡ, ಆನಂದಯ್ಯ ಸ್ವಾಮಿ, ನಾಗರಾಜ, ಹನುಮಂತಪ್ಪ ಡಮ್ಮಳೇರ್‌, ಶಿವಕುಮಾರ್‌ ಅವರು ಸಮಿತಿ ರಚಿಸಿಕೊಂಡು ಪೋಷಕರ ಮನವೋಲಿಸಿ, ಶಾಲೆಗೆ ಮಕ್ಕಳನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

2025ರ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದ್ವಿಭಾಷೆ ಪದ್ಧತಿಗೆ (ಕನ್ನಡ ಮತ್ತು ಇಂಗ್ಲಿಷ್) ಅನುಮತಿ ಸಿಕ್ಕಿದೆ. ಆದರೆ 2 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡಬೇಕು. ಹಾಗಿದ್ದರೆ ಮಾತ್ರ ಮಕ್ಕಳನ್ನು ಕಳುಹಿಸುತ್ತೇವೆ ಎಂಬ ಪೋಷಕರ ಬೇಡಿಕೆಗೆ ಸ್ಪಂದಿಸಿರುವ ಶಿಕ್ಷಕರು, ದ್ವಿಭಾಷೆಯಲ್ಲಿ ಪಾಠ ಮಾಡುತ್ತೇವೆ. ಆದರೆ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಬೇಕು. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಹಂತ-ಹಂತವಾಗಿ ಆಂಗ್ಲ ಮಾಧ್ಯಮದಲೇ ಪರೀಕ್ಷೆ ಬರೆಯುವ ಅವಕಾಶ ಸಿಗುತ್ತದೆ ಎಂದು ಶಿಕ್ಷಕರು ಪೋಷಕರಿಗೆ ಭರವಸೆ ನೀಡಿರುವುದರಿಂದ ಖಾಸಗಿ ಶಾಲೆ ಬಿಡಿಸಿ, ಸರ್ಕಾರಿ ಶಾಲೆಗೆ 50 ವಿದ್ಯಾರ್ಥಿಗಳನ್ನು ದಾಖಲು ಮಾಡಿಸಿದ್ದಾರೆ.

ನಾವು ಯೋಜನೆ ಹಾಕಿಕೊಂಡಿದ್ದಕ್ಕಿಂತ, ಖರ್ಚು ಹೆಚ್ಚಾಗುತ್ತಿದೆ. ಎಷ್ಟೇ ಹಣಕಾಸಿನ ಕೊರತೆ ಉಂಟಾದರೂ, ನಾವು ಇನ್ನೂ ಹೆಚ್ಚಿನ ದೇಣಿಗೆ ಹಾಕಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ನಮ್ಮ ಗ್ರಾಮದ ಸರ್ಕಾರಿ ಶಾಲೆಯ ದಾಖಲಾತಿ ಕಡಿಮೆಯಾಗದಂತೆ ನೋಡಿಕೊಳ್ಳತ್ತೇವೆ ಎಂದು ಗ್ರಾಮಸ್ಥರು ಹೆಮ್ಮೆಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.

ಒಂದು ಎಕರೆ ಜಾಗದಲ್ಲಿ ಸರ್ಕಾರಿ ಶಾಲೆ ಇದೆ. 6 ಕೊಠಡಿಗಳು, ಒಂದು ಸ್ಮಾರ್ಟ್‌ ಕ್ಲಾಸ್‌ ಸೇರಿದಂತೆ ಮೂಲ ಸೌಕರ್ಯಗಳನ್ನು ಶಾಲೆ ಒಳಗೊಂಡಿದೆ. ಅಡುಗೆ ಕೊಠಡಿ ಚಿಕ್ಕದಾಗಿರುವುದರಿಂದ, ಅಡುಗೆ ಕೊಠಡಿ ಸೇರಿದಂತೆ ಮೂರು ಕೊಠಡಿಗಳ ಅವಶ್ಯಕತೆ ಇದೆ.

- ಎಸ್‌, ಈರನಗೌಡ, ಎಸ್‌ಡಿಎಂಸಿ ಅಧ್ಯಕ್ಷ.

ಗ್ರಾಮಸ್ಥರು ಒಗ್ಗಟ್ಟಾಗಿ ನಿಂತರೇ, ಯಾವುದು ಅಸಾಧ್ಯವಲ್ಲ ಎಂಬುವುದಕ್ಕೆ ಗಿಣಿವಾಲ ಗ್ರಾಮದ ಸರ್ಕಾರಿ ಶಾಲೆಯನ್ನು ಗ್ರಾಮಸ್ಥರೇ ಉಳಿಸಿಕೊಂಡಿರುವುದು ಸಾಕ್ಷಿ. ಈ ವರ್ಷ ಗ್ರಾಮಸ್ಥರೆ ಪೂರ್ವ ಪ್ರಾಥಮಿಕ ತರಗತಿಯನ್ನು ನಿರ್ವಹಿಸಬೇಕು. ಅನುಮೋದನೆಗೆ ಕಳುಹಿಸಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರದ ಅನುದಾನ ಸಿಗುತ್ತದೆ. ಈಗ ಒಂದನೇ ತರಗತಿಗೆ ದ್ವಿಭಾಷೆ ಕಲಿಕೆಗೆ ಮಾನ್ಯತೆ ಸಿಕ್ಕಿದೆ, ಪ್ರತಿ ವರ್ಷ ಅದು ಮುಂದುವರೆದು 7ನೇ ತರಗತಿ ವರೆಗೂ ದ್ವಿಭಾಷೆ ನೀತಿ ಆಳವಡಿಕೆಯಾಗುತ್ತದೆ. ಎರಡನೇ ಹಂತದಲ್ಲಿ ಅಗತ್ಯ ಶಿಕ್ಷಕರನ್ನು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ

- ಆರ್‌. ಪುಷ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ.

ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. 1941ರಲ್ಲಿ ಆರಂಭವಾದ ಶಾಲೆಯು, ನಾನು ಸೇರಿದಂತೆ ಸುಮಾರು 84 ವರ್ಷದಿಂದ ಗ್ರಾಮದ ಜನರಿಗೆ ಶಿಕ್ಷಣ ನೀಡಿರುವ ನಮ್ಮೂರಿನ ಹೆಮ್ಮೆಯ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಗ್ರಾಮದ ಪ್ರತಿಯೊಬ್ಬರೂ ಕೈಜೋಡಿಸಿ, ಶಾಲೆಗೆ ಅಗತ್ಯ ಸೌಲಭ್ಯ ಕಲ್ಪಸಿ ಈ ವರ್ಷವೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿದ್ದೇವೆ.

- ಕೆ.ಪಿ.ರುದ್ರಗೌಡ, ಜಿಲ್ಲಾ ಡಿಸಿಸಿ ಬ್ಯಾಂಕ್‌ ನಿರ್ದೇಶಕ.

ಎಲ್‌ಕೆಜಿ, ಯುಕೆಜಿಗೆ ಗ್ರಾಮಸ್ಥರೇ ಸಂಬಳ ನೀಡಿ ಶಿಕ್ಷಕರನ್ನು ನೇಮಿಸಿದ್ದಾರೆ. ಈಗ ಇಲಾಖೆಯಿಂದ ಇಬ್ಬರು ಅತಿಥಿ ಶಿಕ್ಷಕರನ್ನು ನೀಡಿದ್ದಾರೆ.

- ಜಿ. ಜಗದೀಶ್‌, ಮುಖ್ಯ ಶಿಕ್ಷಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ