ಜಿಲ್ಲೆಯ 185 ವ್ಯಾಪಾರಿಗಳಿಗೆ ಜಿಎಸ್‌ಟಿ ತೆರಿಗೆ ಪಾವತಿಗೆ ನೋಟಿಸ್

KannadaprabhaNewsNetwork |  
Published : Jul 22, 2025, 01:15 AM IST
21ಕೆಆರ್ ಎಂಎನ್ 4.ಜೆಪಿಜಿರಾಮನಗರದ ವ್ಯಾಪಾರಿಯೊಬ್ಬರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಯಾಗಿರುವುದು. | Kannada Prabha

ಸಾರಾಂಶ

ರಾಮನಗರ: ವಾಣಿಜ್ಯ ತೆರಿಗೆ ಇಲಾಖೆ ಯುಪಿಐ ಮೂಲಕ 40 ಲಕ್ಷ ರುಪಾಯಿಗಳಿಗೂ ಹೆಚ್ಚಿನ ವಹಿವಾಟು ನಡೆಸಿರುವ 185 ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ರಾಮನಗರ: ವಾಣಿಜ್ಯ ತೆರಿಗೆ ಇಲಾಖೆ ಯುಪಿಐ ಮೂಲಕ 40 ಲಕ್ಷ ರುಪಾಯಿಗಳಿಗೂ ಹೆಚ್ಚಿನ ವಹಿವಾಟು ನಡೆಸಿರುವ 185 ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಡಾಬಾ, ಬೇಕರಿ, ಕಾಂಡಿಮೆಂಟ್ಸ್, ಟೀ -ಕಾಫಿ, ತರಕಾರಿ ಅಂಗಡಿಗಳ ಮಾಲೀಕರಿಗೆ ಈ ನೋಟಿಸ್ ಜಾರಿಯಾಗಿದೆ. ಇವರೆಲ್ಲರು ಫೋನ್ ಪೇ, ಜೀಪೇ ಮುಂತಾದ ಆಪ್‌ಗಳ ಮೂಲಕ 40 ಲಕ್ಷಕ್ಕೂ ಅಧಿಕ ಮೊತ್ತದ ವಹಿವಾಟು ನಡೆಸಿದವರು ಆಗಿದ್ದಾರೆ.

ಈಗ ನೋಟಿಸ್ ಪಡೆದಿರುವ 185 ವ್ಯಾಪಾರಿಗಳ ಪೈಕಿ ಚನ್ನಪಟ್ಟಣ-ಮಾಗಡಿ ತಾಲೂಕುಗಳಲ್ಲಿ 55 ಮಂದಿ ಮತ್ತು ರಾಮನಗರ-ಕನಕಪುರದಲ್ಲಿ 130 ವಹಿವಾಟುದಾರರು ಸೇರಿದ್ದಾರೆ. ಇವರೆಲ್ಲರು ತೆರಿಗೆ ನೋಟಿಸ್ ಏನೆಂದು ಉತ್ತರ ಕೊಡಬೇಕೆಂದು ಚಿಂತೆಗೀಡಾಗಿದ್ದಾರೆ.

ಫೋನ್‌ಪೇ, ಗೂಗಲ್ ಪೇ ಮುಂತಾದ ಆಪ್‌ಗಳ ಮೂಲಕ ಗ್ರಾಹಕರು ತಾವು ಕೊಂಡ ವಸ್ತುಗಳು ಅಥವಾ ಸೇವೆಗಳಿಗೆ ಹಣ ಪಾವತಿಸುವುದು ಇತ್ತೀಚಿನ ದಿನಗಳಲ್ಲಿ ವಾಡಿಕೆ. ಚಿಲ್ಲರೆ ಸಮಸ್ಯೆ, ನಗದು ರಕ್ಷಣಾ ಸಮಸ್ಯೆಗಾಗಿ ಬಹುತೇಕ ಗ್ರಾಹಕರು ಈ ಆಪ್‌ಗಳ ಮೂಲಕ ಹಣ ಪಾವತಿಸುತ್ತಾರೆ.

ಜಿಎಸ್ಟಿ ವ್ಯವಸ್ಥೆಯಡಿ ನೋಂದಣಿ ಕಡ್ಡಾಯ:

ಈ ರೀತಿ 2023-24ನೇ ಆರ್ಥಿಕ ಸಾಲಿನಲ್ಲಿ 40,00,358 ರು. ವಹಿವಾಟು, 2024-25ನೇ ಆರ್ಥಿಕ ಸಾಲಿನಲ್ಲಿ

40,22,095 ರು.ವಹಿವಾಟು ನಡೆಸಿದ ವ್ಯಾಪಾರಿಯೊಬ್ಬರಿಗೆ ನೋಟಿಸ್ ಜಾರಿಯಾಗಿದೆ. ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗೆ ವಾರ್ಷಿಕ 40 ಲಕ್ಷ ರುಪಾಯಿಗಳಿಗೂ ಹೆಚ್ಚು ವಹಿವಾಟು ಮಾಡಿದರೆ, ಜಿಎಸ್ಟಿ ವ್ಯವಸ್ಥೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆದರೆ, ಸದರಿ ವ್ಯಕ್ತಿ ಜಿಎಸ್ಟಿ ಅಡಿ ನೋಂದಾಯಿಸಿಕೊಂಡಿಲ್ಲ. ಹೀಗಾಗಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಕೆಜಿಎಸ್‌ಟಿ/ಸಿಜಿಎಸ್‌ಟಿ ಕಾಯ್ದೆ 2017ರ ಸೆಕ್ಷನ್ 22(1)ರ ಪ್ರಕಾರ ಆರ್ಥಿಕ ವರ್ಷದಲ್ಲಿ 40 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆದಲ್ಲಿ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ. ಈ ನೋಟಿಸ್ ಜಾರಿಯಾದ 7 ದಿನಗಳ ಒಳಗಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ವಹಿವಾಟಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ.

ಹಾಗೊಮ್ಮೆ ಜಿಎಸ್‌ಟಿ ಕಾಯ್ದೆಯಡಿ ವ್ಯಾಪಾರವನ್ನು ನೋಂದಣಿ ಮಾಡಿಕೊಂಡಿದ್ದರೆ, ನೋಂದಣಿ ಪ್ರಮಾಣ ಪತ್ರವನ್ನು ಕಚೇರಿಗೆ ತಲುಪಿಸುವಂತೆ ಸೂಚಿಸಲಾಗಿದೆ. ಕಾಯ್ದೆ ಪ್ರಕಾರ ನೋಂದಣಿ ಅಗತ್ಯವಿಲ್ಲ ಎಂದು ವ್ಯಾಪಾರಿ ಅಭಿಪ್ರಾಯಪಟ್ಟಲ್ಲಿ ಅಥವಾ 40 ಲಕ್ಷ ರುಪಾಯಿ ವಹಿವಾಟು ದಾಟಿಲ್ಲ ಎಂದು ಅಭಿಪ್ರಾಯವಾದರೆ ಅಗತ್ಯ ಪುರಾವೆಗಳನ್ನು ಒದಗಿಸಬೇಕಾಗಿದೆ. ನಿಗದಿತ ಸಮಯದೊಳಗೆ ಸಮಜಾಯಿಷಿ ನೀಡದಿದ್ದರೆ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 122(1)(ಎಕ್ಸ್ ಐ) ಮತ್ತು 122(1ಎ) ರೀತ್ಯ ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಬಾಕ್ಸ್ ....................

ಯಾರ್ಯಾರು ಜಿಎಸ್ಟಿ ವ್ಯಾಪ್ತಿಗೆ ಬರಲ್ಲ:

ಹಸಿರು ಸೊಪ್ಪು, ತಾಜಾ ಹೂವು, ಎಳೆನೀರು, ತಾಜಾ ಹಾಲು(ಪ್ಯಾಕ್ ಮಾಡಿದ್ದು ಸೇರಿ), ತಾಜಾ ಮಾಂಸ, ಕೋಳಿ, ಮೀನು, ಮೊಟ್ಟೆಗಳು(ಬ್ರಾಂಡ್ ಅಲ್ಲದ್ದು), ಅಕ್ಕಿ, ಗೋದಿ, ಜೋಳ (ಪ್ಯಾಕ್ ಮಾಡದೆ ಇರುವುದು ಮತ್ತು ಬ್ರಾಂಡ್ ಅಲ್ಲದಿರುವುದು), ಪೂಜಾ ಸಾಮಗ್ರಿ, ಪ್ರಸಾದ, ಉಪ್ಪು ಈ ವಸ್ತುಗಳಿಗೆ ಜಿಎಸ್‌ಟಿ ಶೂನ್ಯ ತೆರಿಗೆ ದರ. ಹೀಗಾಗಿ ಈ ವಸ್ತುಗಳ ಮಾರಾಟಗಾರರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಈ ವ್ಯಾಪಾರಿಗಳಿಗೆ ನೋಟಿಸ್ ಜಾರಿಯಾಗಿದ್ದರೆ, ಅವರು ತಪ್ಪದೆ ವಾಣಿಜ್ಯ ತೆರಿಗೆ ಇಲಾಖೆಗೆ ತೆರಳಿ ತಾವು ನಡೆಸುತ್ತಿರುವ ವ್ಯಾಪಾರದ ಸೂಕ್ತ ದಾಖಲೆಗಳನ್ನು ಒದಗಿಸಬೇಕಿದೆ. ಜಿಎಸ್‌ಟಿ ಕಾಯ್ದೆ ಪ್ರಕಾರ ಕೆಲವು ವಸ್ತುಗಳು ಜಿಎಸ್‌ಟಿ ತೆರಿಗೆ ದರದಿಂದ ವಿನಾಯಿತಿಯೂ ಇದೆ. ಪೆಟ್ರೋಲ್, ಡೀಸೆಲ್, ಮದ್ಯ ಮುಂತಾದವು ಜಿಎಸ್‌ಟಿ ತೆರಿಗೆಗಳು ಅನ್ವಯವಾಗುವುದಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಬಾಕ್ಸ್ ...........

ಆನ್‌ಲೈನ್‌ ಪೇಮೆಂಟ್‌ ಬ್ಯಾಡ ಕ್ಯಾಶ್ ಕೊಡಿ :

ಸಣ್ಣ ವ್ಯಾಪಾರಿಗಳ ಜಿಎಸ್‌ಟಿ ತಪಾಸಣೆ ಮತ್ತು ನೋಟಿಸ್‌ಗಳು ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ. ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಬೇಕೋ ಅಥವಾ ದೊಡ್ಡ ತೆರಿಗೆ ಕಟ್ಟಬೇಕೋ ಎಂದು ತಿಳಿಯದೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಹುತೇಕರು ಆನ್‌ಲೈನ್‌ ಪೇಮೆಂಟ್‌ ಬೇಡ ನಮಗೆ ಕ್ಯಾಶ್‌ ನೀಡಿ ಎಂದು ಗ್ರಾಹಕರ ಬಳಿ ಕೇಳುತ್ತಿದ್ದಾರೆ.

21ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ವ್ಯಾಪಾರಿಯೊಬ್ಬರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಯಾಗಿರುವುದು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ