ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಸಂಭ್ರಮ

KannadaprabhaNewsNetwork |  
Published : Jul 06, 2025, 11:48 PM IST
64 | Kannada Prabha

ಸಾರಾಂಶ

ಮೈಸೂರು ಒಡೆಯರು ಹಾಗೂ ಟಿಪ್ಪು ಸುಲ್ತಾನ್ ನೀಡಿರುವ 44 ಬಗೆಯ ಜವಹಾರಿ ಅಭರಣಗಳಿಂದ ಉತ್ಸವಮೂರ್ತಿಗಳ ಅಲಂಕರಿಸುವುದು ಗಿರಿಜಾ ಕಲ್ಯಾಣದ ವಿಶೇಷ

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಶ್ರೀಕಂಠೇಶ್ವರ ದೇವಾಲಯದಲ್ಲಿ ಶಿವ ಪಾರ್ವತಿಯರ ಗಿರಿಜಾ ಕಲ್ಯಾಣ ಮಹೋತ್ಸವ ದೇವಾಲಯದ ವಸಂತ ಮಂಟಪದಲ್ಲಿ ಶುಕ್ರವಾರ ಸಂಜೆ 6.20 ರಿಂದ 7ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಆಗಮಿಕ ನಾಗಚಂದ್ರ ದೀಕ್ಷಿತ್ ಅವರ ಆಚಾರ್ಯತ್ವದಲ್ಲಿ ನಡೆಯಿತು.

ಮಹೋತ್ಸವದ ಅಂಗವಾಗಿ ಬೆಳಗ್ಗೆ ಸ್ವಾಮಿಗೆ ಅನುಜ್ಞಾಪೂರ್ವಕ ಕನ್ನಡಿ ಕಳಶ ಅಂಕುರಾರ್ಪಣ ಪೂರ್ವಕ ಮಂಗಳ ಸ್ನಾನ, ಮಧ್ಯಾಹ್ನ ನಾಂದಿ ಗೃಹಯಜ್ಞ ನಡೆಯಿತು. ನಂತರ ದೇವಾಲಯದಿಂದ ಸರ್ವ ಅಲಂಕಾರ ಭೂಷಿತವಾದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಪ್ರಾಂಗಣದ ಸುತ್ತ ಮೆರವಣಿಗೆ ಮಾಡುವ ಮೂಲಕ ಕಾಶಿ ಯಾತ್ರೆ ನಡೆಯಿತು.

ಮೆರವಣಿಗೆಯಲ್ಲಿ ಪಂಚ ವೀರಗಾಸೆ, ಪೂಜಾಕುಣಿತ, ಗಾರುಡಿಗೊಂಬೆ, ನಂದಿ ಧ್ವಜ, ಬೀಸು ಕಂಸಾಳೆ, ಮಂಗಳ ವಾದ್ಯ ತಂಡಗಳು ಉತ್ಸವಕ್ಕೆ ರಂಗು ತಂದವು.

ನಂತರ ಪಾರ್ವತಿ ಅಮ್ಮನವರು ಹಾಗೂ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಕಲ್ಯಾಣ ಮಹೋತ್ಸವಕ್ಕಾಗಿ ಸಿದ್ದಗೊಂಡಿದ್ದ ಮಂಟಪದಲ್ಲಿ ಇರಿಸಿ ಸಂಬಂಧ ಮಾಲಾ ನಿರೀಕ್ಷಣಾ ಪೂರ್ವಕ ಕಲ್ಯಾಣ ಮಂಟಪ ಪ್ರವೇಶ ನಂತರ ಧಾರಾಮಹೋತ್ಸವ, ಅಕ್ಷತಾರೋಹಣ ಕಾರ್ಯಗಳು ಜರುಗಿದವು, ದೇವಾಲಯದ ವಸಂತ ಮಂಟಪದಲ್ಲಿ ಕಿಕ್ಕಿರಿದು ನೆರೆದಿದ್ದ ಭಕ್ತರು ಜಯಕಾರ ಮಾಡುತ್ತಾ ಗಿರಿಜಾಕಲ್ಯಾಣ ಮಹೋತ್ಸವವನ್ನು ಕಣ್ತುಂಬಿಕೊಂಡರು.

ಗಿರಿಜಾ ಕಲ್ಯಾಣದ ವಿಶೇಷ

ಮೈಸೂರು ಒಡೆಯರು ಹಾಗೂ ಟಿಪ್ಪು ಸುಲ್ತಾನ್ ನೀಡಿರುವ 44 ಬಗೆಯ ಜವಹಾರಿ ಅಭರಣಗಳಿಂದ ಉತ್ಸವಮೂರ್ತಿಗಳ ಅಲಂಕರಿಸುವುದು ಗಿರಿಜಾ ಕಲ್ಯಾಣದ ವಿಶೇಷಗಳಲ್ಲೊಂದಾಗಿದೆ, ಇಮ್ಮಡಿ ಕೃಷ್ಣರಾಜ ಒಡೆಯರ್ ಅವರು ನೀಡಿರುವ ಚಿನ್ನದ ರುದ್ರಾಕ್ಷಿ, ಬಿಲ್ವಪತ್ರೆ ಸರ, ತಂಗಮಣಿ, ರತ್ನ ಖಚಿತವಾದ ಉತ್ಸವ ಕವಚ, ಕೆಂಪಿನ ಕವಚ, ಪದಕದ ಸರಗಳು ಮುತ್ತಿನ ಸರಗಳು, ಸೂರ್ಯ ಬಪಟ್ಟು, ಚಂದ್ರ ಬೊಟ್ಟು, ಹಣೆ ಬೊಟ್ಟು, ತುರಾಯಿ, ಕಡಗ, ಕಾಲು ಕಡಗ, ಹವಣದ ಉಡುದಾರಗಳಿಂದ ಶ್ರೀಕಂಠೇಶ್ವರ ಸ್ವಾಮಿ ಮತ್ತು ಅಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದ ಖುತ್ವಿಕರು ಕ್ರಮಬದ್ದವಾಗಿ ಸಿಂಗರಿಸಿ ಕಲ್ಯಾಣ ಮಹೋತ್ಸವಕ್ಕೆ ಅಣಿಗೊಳಿಸುತ್ತಾರೆ, ಸರ್ಕಾರ ಖಜಾನೆಯಲ್ಲಿ ವಿಶೇಷ ಭದ್ರತೆಯಲ್ಲಿ ಇರಿಸಲಾದ ಈ ಅಮೂಲ್ಯವಾದ ಮುತ್ತು, ಪಚ್ಚೆ, ವಜ್ರ, ಹವಳ, ಹಾಗೂ ನವರತ್ನಗಳಿಂದ ಕೂಡಿದ ಆಭರಣಗಳನ್ನು ದೇವಾಲಯದ ಸುಪರ್ದಿಗೆ ಪಡೆದು ಅಲಂಕಾರ ಮಾಡಲಾಗುವುದು.

ಸರ್ವ ಅಲಂಕಾರ ಭೂಷಿತ ಶ್ರೀಕಂಠೇಶ್ವರ ಮತ್ತು ಪಾರ್ವತಮ್ಮನವರ ಗಿರಿಜಾ ಕಲ್ಯಾಣ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರುವ ಮೂಲಕ ಸಂಪನ್ನಗೊಂಡಿತು.

ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಜು.7ರ ಮಂಗಳವಾರ, ಬುಧವಾರ ಮತ್ತು ಗುರುವಾರ ಮೂರು ದಿನಗಳ ಕಾಲ ಕಪಿಲಾ ನದಿಯ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ಜರಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ