ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಅರಣ್ಯ ಒತ್ತುವರಿ, ಅಕ್ರಮ ಬಡಾವಣೆ, ಹೋಂ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಅದಕ್ಕೂ ಮುನ್ನ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅರಣ್ಯ ಮತ್ತು ಕಂದಾಯ ಇಲಾಖೆ ಜಮೀನಿನ ಜಂಟಿ ಸಮೀಕ್ಷೆ ಮಾಡಿ ಗೊಂದಲ ಬಗೆಹರಿಸಬೇಕು ಎಂದು ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.ಅಧಿಕ ಮಳೆಯಿಂದ ಸಂಭವಿಸುತ್ತಿರುವ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಲಾದ ಬಡಾವಣೆ, ತೋಟ ಹೋಂಸ್ಟೇ, ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಹೊರಟ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನಿಲುವನ್ನು ಸ್ವಾಗತಿಸುತ್ತೇವೆ. ಇದೇ ವೇಳೆ ಯಾವುದು ಅರಣ್ಯ, ಯಾವುದು ಕಂದಾಯ ಭೂಮಿ ಎನ್ನುವ ಗೊಂದಲವೇ ಇನ್ನೂ ಬಗೆ ಹರಿಯದ ಸಂದರ್ಭದಲ್ಲಿ ಸರ್ಕಾರದ ಈ ಆದೇಶದಿಂದ ಸಮಸ್ಯೆ ಬಗೆಹರಿಯುವುದು ಅಸಾಧ್ಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಅರಣ್ಯ ಸಚಿವರ ನಿಲುವು ಸ್ವಾಗತಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಆದರೆ ಜಂಟಿ ಸರ್ವೇ ಕಾರ್ಯ ಕೈಗೊಳ್ಳುವ ಜವಾಬ್ದಾರಿ ಈ ಇಬ್ಬರು ಸಚಿವರದ್ದೇ ಆಗಿದೆ. ಮೊದಲು ಜಂಟಿ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.
1985-90 ರ ದಶಕದಲ್ಲಿ ಗೋಮಾಳ ಸೇರಿದಂತೆ ವಿವಿಧ ಸರ್ಕಾರಿ ಜಮೀನುಗಳನ್ನು ಅವೈಜ್ಞಾನಿಕವಾಗಿ ಡೀಮ್ಡ್, ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ. ಅಂತಹ ಜಮೀನಿನಲ್ಲೂ ಹಿಂದಿನಿಂದಲೂ ತೋಟ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಜಂಟಿ ಸರ್ವೇಯಿಂದ ಇದನ್ನು ಇತ್ಯರ್ಥ ಪಡಿಸಿದರೆ ಅಂತಹ ಜಮೀನಿನಲ್ಲಿ ತೋಟ ಮಾಡಿದವರು ಗುತ್ತಿಗೆ ಯೋಜನೆ ಲಾಭ ಪಡೆಯಲು ಅವಕಾಶವಾಗಲಿದೆ ಎಂದು ತಿಳಿಸಿದ್ದಾರೆ.ಅಧಿಕ ಮಳೆಯಿಂದ ಸಂಭವಿಸುವ ವಿಕೋಪಗಳ ಮುಂದಿಟ್ಟುಕೊಂಡು ಪದೇಪದೆ ಹೋಂಸ್ಟೇ, ರೆಸಾರ್ಟ್ ಗಳನ್ನು ಗುರಿ ಯಾಗಿಸಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ ಗಿರೀಶ್, ಅಕ್ರಮ ಸಾಬೀತಾದರೆ ಅಂತಹವರ ವಿರುದ್ಧ ಕ್ರಮಕ್ಕೆ ಯಾವುದೇ ಆಕ್ಷೇಪಗಳಿಲ್ಲ. ಅದನ್ನು ಬಿಟ್ಟು ಪದೇ ಪದೆ ಪ್ರವಾಸೋದ್ಯಮ ಹಾಗೂ ಹೋಂಸ್ಟೇ, ರೆಸಾರ್ಟ್ ಗಳ ಉಲ್ಲೇಖ ಸರ್ಕಾರದ ನೀತಿಯನ್ನೇ ಪ್ರಶ್ನೆ ಮಾಡಿದಂತಾಗುತ್ತದೆ ಎಂದಿದ್ದಾರೆ.ಸರ್ಕಾರದ ನಿಯಮಾವಳಿ ವ್ಯಾಪ್ತಿಯಲ್ಲೇ ಹೋಂಸ್ಟೇ, ರೆಸಾರ್ಟ್ ನಡೆಸುತ್ತಿರುವವರನ್ನೂ ಒಂದು ರೀತಿ ಅಪರಾಧಿ ಭಾವನೆ ಯಲ್ಲಿ ನೋಡುವ ಪ್ರವೃತ್ತಿ ಸರಿಯಲ್ಲ. ಹೋಂಸ್ಟೇ ನಡೆಸುತ್ತಿರುವವರೆಲ್ಲರೂ ಪ್ರಕೃತಿ ಪ್ರಿಯರೇ, ಪರಿಸರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟವರೇ ಆಗಿದ್ದಾರೆ. ಕಾಫಿ ಸೇರಿದಂತೆ ಇತರೆ ತೋಟಗಾರಿಕೆಯಲ್ಲಿ ತೊಡಗಿ ನಷ್ಟ ಅನುಭವಿಸಿ ಅನಿವಾರ್ಯವಾಗಿ ಹೋಂಸ್ಟೇ ಮಾರ್ಗ ಹಿಡಿದಿದ್ದಾರೆ. ಸರ್ಕಾರದ ಪ್ರತಿನಿಧಿಗಳಿಂದಲೇ ಗೊಂದಲದ ಹೇಳಿಕೆ ಬಂದಲ್ಲಿ ಪ್ರವಾಸೋಧ್ಯಮ ಹಾಗೂ ಅದನ್ನು ಅವಲಂಭಿಸಿರುವವರು ತೊಂದರೆಗೆ ಸಿಲುಕುತ್ತಾರೆ. ಈ ಎಲ್ಲಾ ಗೊಂದಲಗಳ ನಿವಾರಣೆಗೆ ಅರಣ್ಯ ಮತ್ತು ಕಂದಾಯ ಇಲಾಖೆ ಜಮೀನಿನ ಜಂಟಿ ಸರ್ವೆಯೇ ಪರಿಹಾರ. ಈ ಹಿನ್ನೆಲೆಯಲ್ಲಿ ಸರ್ಕಾರ ಆಧ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೋಟೋ ಫೈಲ್ ನೇಮ್ 10 ಕೆಸಿಕೆಎಂ 4