ಬಾಲಕಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ, ಆಸ್ಪತ್ರೆಯ ಎದುರು ಶವವಿಟ್ಟು ಪೋಷಕರ ಪ್ರತಿಭಟನೆ

KannadaprabhaNewsNetwork | Published : Apr 30, 2025 12:32 AM

ಸಾರಾಂಶ

ಇಂಜೆಕ್ಷನ್ ಬಳಿಕ ರಿಯಾಕ್ಷನ್ ಆಗಿ ಮೈ ಕೆರೆತ, ಬಾಯಲ್ಲಿ ನೊರೆ ಬಂದು ಕ್ಷಣಾರ್ಧದಲ್ಲೇ ಯುವತಿ ಸಾವಿಗೀಡಾಗಿದ್ದಾಳೆ.

ಹಾವೇರಿ: ಕೈ ಮೇಲೆ ಗುಳ್ಳೆ ಎದ್ದಿದೆ ಎಂದು ಖಾಸಗಿ ಆಸ್ಪತ್ರೆಗೆ ಬಂದ ಯುವತಿಗೆ ವೈದ್ಯರು ನೀಡಿದ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದಾಗಿ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ ಆಸ್ಪತ್ರೆಯ ಎದುರು ಪೋಷಕರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಬ್ಯಾಡಗಿ ತಾಲೂಕಿನ ಹೆಡ್ಡಿಗೊಂಡ ಗ್ರಾಮದ ವಂದನಾ ಶಿವಪ್ಪ ತುಪ್ಪದ(17) ಮೃತ ಯುವತಿ.ಕೈ ಮೇಲೆ ಗುಳ್ಳೆ ಎದ್ದಿದೆ ಎಂದು ನಗರದ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ಕುಟುಂಬಸ್ಥರು ಕರೆತಂದಿದ್ದರು. ಅದಕ್ಕೆ ಸಣ್ಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದ ವೈದ್ಯರು, ಸಲಾಯಿನ್ ಹಚ್ಚಿ ಅದರಲ್ಲೇ ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ಬಳಿಕ ರಿಯಾಕ್ಷನ್ ಆಗಿ ಮೈ ಕೆರೆತ, ಬಾಯಲ್ಲಿ ನೊರೆ ಬಂದು ಕ್ಷಣಾರ್ಧದಲ್ಲೇ ಯುವತಿ ಸಾವಿಗೀಡಾಗಿದ್ದಾಳೆ. ಇವಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ, ಪ್ರತಿಭಟನೆ ನಡೆಸಿದರು. ಘಟನೆ ಬಳಿಕ ಆಸ್ಪತ್ರೆ ವೈದ್ಯರು ನಾಪತ್ತೆಯಾಗಿದ್ದಾರೆ.ಬೆಳಗ್ಗೆಯಿಂದ ಆರೋಗ್ಯವಾಗಿ ಲವಲವಿಕೆಯಿಂದ ಇದ್ದ ಬಾಲಕಿ ವಂದನಾ ಕೈಯ ಮಣಿಕಟ್ಟಿನ ಭಾಗದಲ್ಲಿ ಸಣ್ಣ ಗುಳ್ಳೆ ಎದ್ದಿದೆ ಎಂದು ಆಸ್ಪತ್ರೆಗೆ ದಾಖಸಿಲಿದ್ದೆವು. ವೈದ್ಯರು ಚುಚ್ಚುಮದ್ದು ನೀಡುತ್ತಿದ್ದಂತೆ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ಆರೋಪಿಸಿದರು.

ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ತಾಲೂಕು ವೈದ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಆಸ್ಪತ್ರೆಗೆ ಆಗಮಿಸಿ ಪರಿಶೀಲಿಸಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿ, ಈ ಕುರಿತು ಸಮಗ್ರ ಮಾಹಿತಿ ಪಡೆದಿದ್ದು, ಆಸ್ಪತ್ರೆಯನ್ನು ಸದ್ಯಕ್ಕೆ ಸೀಜ್ ಮಾಡಲಾಗುತ್ತದೆ. ಸಮಗ್ರ ವರದಿ ನಂತರ ಹಿರಿಯ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.ಬಾಲಕಿ ಸಾವಿಗೀಡಾದ ಬೆನ್ನಲ್ಲೇ ಆಸ್ಪತ್ರೆಯ ಮುಂಭಾಗದಲ್ಲಿ ಪೋಷಕರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಹೆಚ್ಚುವರಿ ಪೊಲೀಸ್ ನಿರೀಕ್ಷಕ ಎಲ್.ಎಸ್. ಶಿರಕೋಳ ಭೇಟಿ ನೀಡಿದ್ದರು. ನಗರ ಸಿಪಿಐ ಮೋತಿಲಾಲ್ ಪವಾರ ಹಾಗೂ ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದರು.ಮೇ 8ರಂದು ನೂತನ ದೇವಸ್ಥಾನ ಉದ್ಘಾಟನೆ

ರಾಣಿಬೆನ್ನೂರು: ತಾಲೂಕಿನ ಪದ್ಮಾವತಿಪುರ(ಬಸಲಿಕಟ್ಟಿ) ತಾಂಡಾದಲ್ಲಿ ಮೇ 5ರಿಂದ 8ರ ವರೆಗೆ ಸಂತ ಸೇವಾಲಾಲ್ ಮಹಾರಾಜ ಹಾಗೂ ಮರಿಯಮ್ಮದೇವಿ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ಶಿಬಾರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆದರಹಳ್ಳಿ ಗವಿಮಠ ಮತ್ತು ಕೃಷ್ಣಾಪುರ ಮಠದ ಡಾ. ಕುಮಾರ ಮಹಾರಾಜ, ಚಿತ್ರದುರ್ಗ ಬಂಜಾರ ಗುರುಪೀಠದ ಸರದಾರ ಸೇವಾಲಾಲ್ ಸ್ವಾಮೀಜಿ, ಮೇದಾರ ಗುರುಪೀಠದ ಇಮ್ಮಡಿ ಕೇತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮೇ 5ರರಂದು ಮರಿಯಮ್ಮ ಮತ್ತು ಸೇವಾಲಾಲ್ ನೂತನ ವಿಗ್ರಹಗಳ ಉತ್ಸವವು ಪೂರ್ಣ ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ. ಮೇ 5ರಿಂದ 7ರ ವರೆಗೆ ದೇವಸ್ಥಾನದ ಆವರಣದಲ್ಲಿ ಜಲಾಧಿವಾಸ, ಧಾನ್ಯಾದಿವಾಸ, ಪುಷ್ಪಫಲಾಧಿವಾಸ ನೆರವೇರುವುದು.

ಮೇ 7ರ ಸಂಜೆ 5ರಿಂದ ಗಣ ಹೋಮ, ರಾಕ್ಷೋಘ್ನ ಹೋಮ, ಉಮಾ ಮಹೇಶ್ವರ ಸಮೇತ ಆದಿತ್ಯಾದಿ ನವಗ್ರಹ ಕಳಸ ಸ್ಥಾಪನೆ ಪೂಜೆ ಜರುಗುವುದು. ನಂತರ ಪಂಚ ಆಚಾರ್ಯರ ಆವಾಹನ ಪೂಜಾ, ಪುಣ್ಯವಾಚನ ಪೂಜೆ ಹಾಗೂ ರಾತ್ರಿ 10 ಗಂಟೆಯಿಂದ ಕಾಲಭೈರವ ಸಮೇತ ಪ್ರತ್ಯಂಗೀತ ಭಗವತಿ ಹೋಮ, ಗ್ರಾಮದ ಒಳಿತಿಗಾಗಿ ದಶದಿಗ್ಬಂಧನ ಹೋಮವು ನಾಗ ಚೌಡೇಶ್ವರಿ ಅಮ್ಮನವರ ಉಪಸ್ಥಿತಿಯಲ್ಲಿ ನೆರವೇರಲಿದೆ.

ಮೇ 8ರಂದು ಬೆಳಗ್ಗೆ 7.31ಕ್ಕೆ ಕುಮಾರ ಮಹಾರಾಜರ ಮತ್ತು ಸರದಾರ್ ಸೇವಾಲಾಲ್ ಮಹಾರಾಜರ ಸಾನ್ನಿಧ್ಯದಲ್ಲಿ ನೂತನ ವಿಗ್ರಹಗಳಿಗೆ ಪ್ರಾಣ ಪತಿಷ್ಠಾಪನೆ ನಂತರ ಪೂರ್ಣ ಪ್ರತಿ ಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಮಧ್ಯಾಹ್ನ ಧರ್ಮಸಭೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Share this article