ಮಂಜುನಾಥ ಕೆ.ಎಂ.
ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಳಗೊಳಿಸಲು ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಂದೆರಡು ತಿಂಗಳು ವಿಶೇಷ ತರಗತಿ ಮೂಲಕ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸುವುದು ಪ್ರತಿವರ್ಷ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಆದರೆ, ಸಿರುಗುಪ್ಪ ನಗರದ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಏಳು ತಿಂಗಳು ಮೊದಲೇ ವಿಶೇಷ ತರಗತಿ ಶುರುಗೊಳಿಸುವ ಮೂಲಕ ಇಲ್ಲಿನ ಶಿಕ್ಷಕರು ಮಾದಿಯಾಗಿದ್ದಾರೆ.ಸಂಜೆ 4.30ರಿಂದ 5.45ರವರೆಗೆ ವಿಶೇಷ ತರಗತಿ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರನ್ನು ಪರೀಕ್ಷೆಗೆ ಅಣಿಗೊಳಿಸುತ್ತಾರೆ. ಕಳೆದ 18 ವರ್ಷಗಳಿಂದ ಇಲ್ಲಿನ ಶಿಕ್ಷಕರ ಬೋಧನೆಯ ಕೈಂಕರ್ಯ ನಿರಂತರವಾಗಿ ನಡೆದಿದೆ. ಮಕ್ಕಳಿಗೆ ಒಂದಷ್ಟು ವಿಶ್ರಾಂತಿ ನೀಡಲು ಮಂಡಕ್ಕಿ-ಮಿರ್ಚಿ, ಟೀ- ಬಿಸ್ಕತ್ ಶಿಕ್ಷಕರು ಸ್ವಂತ ಹಣದಿಂದಲೇ ನೀಡುತ್ತಾರೆ. ಈ ಮೂಲಕ ವಿದ್ಯಾರ್ಥಿನಿಯರು ಓದಿನ ಆಸಕ್ತಿ ಕಳೆದುಕೊಳ್ಳದಂತೆ ಪ್ರೋತ್ಸಾಹಿಸುತ್ತಾರೆ.
8ನೇ ತರಗತಿಯಿಂದಲೇ ನಿಗಾ: ವಿದ್ಯಾರ್ಥಿಗಳ ಪೈಕಿ ಬಹುತೇಕರು ಗ್ರಾಮೀಣ ಭಾಗದವರು. ಕೆಲವರು ಸ್ಥಳೀಯ ಹಾಸ್ಟೆಲ್‌ನಲ್ಲಿದ್ದರೆ ಮತ್ತೆ ಕೆಲವರು ಹಳ್ಳಿಗಳಿಂದ ಬಸ್‌ಗಳಲ್ಲಿ ಓಡಾಡುತ್ತಾರೆ. ಸಿರುಗುಪ್ಪ ತಾಲೂಕಿನ ಕರ್ಚಿಗನೂರು, ಚಾಣಿಕನೂರು, ರಾರಾವಿ, ಬೆಳಗಲ್ಲು, ಕುಡದರಹಾಳು, ಕೆಂಚನಗುಡ್ಡ, ತೆಕ್ಕಲಕೋಟೆ, ಹಳೇಕೋಟೆ, ನಡವಿ, ನಿಟ್ಟೂರು, ಉಡೇಗೋಳ ಸೇರಿದಂತೆ 25ಕ್ಕೂ ಹೆಚ್ಚು ಹಳ್ಳಿಗಳಿಂದ ವಿದ್ಯಾರ್ಥಿಗಳು ಇಲ್ಲಿನ ಪ್ರೌಢಶಾಲೆಗೆ ಆಗಮಿಸುತ್ತಾರೆ. ಬಸ್ ಓಡಾಟದ ಸಮಸ್ಯೆಯ ನಡುವೆ ಮಕ್ಕಳಲ್ಲಿರುವ ಆಸಕ್ತಿ ಉತ್ತೇಜಿಸಲು ಹಾಗೂ ಹಳ್ಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಲ್ಲಿನ ಶಿಕ್ಷಕರು ನಿತ್ಯ ವಿಶೇಷ ಬೋಧನೆ ಜೊತೆಗೆ ತಮ್ಮಿಂದಾದ ಸಹಾಯ ಮಾಡುತ್ತಾರೆ.ಉತ್ತಮ ಫಲಿತಾಂಶ: ಪ್ರೌಢಶಾಲೆಯಲ್ಲಿ 372 ವಿದ್ಯಾರ್ಥಿನಿಯರಿದ್ದು, ಈ ಪೈಕಿ ಎಸ್ಸೆಸ್ಸೆಲ್ಸಿಯ 108 ವಿದ್ಯಾರ್ಥಿನಿಯರಿದ್ದಾರೆ. ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ಕಾಯಂ ಶಿಕ್ಷಕರಿಲ್ಲ. ಏಳು ಸಿಬ್ಬಂದಿ ಪೈಕಿ ಮುಖ್ಯಗುರು ಸೇರಿ ನಾಲ್ವರು ಮಾತ್ರ ಕಾಯಂ ಶಿಕ್ಷಕರಿದ್ದು, ಉಳಿದ ಮೂವರು ಅತಿಥಿ ಶಿಕ್ಷಕರನ್ನೇ ಅವಲಂಬಿಸಬೇಕಾಗಿದೆ. ನಿತ್ಯ ಪಠ್ಯದ ಜೊತೆಗೆ ಬಿಸಿಯೂಟ ನಿರ್ವಹಣೆ, ಮೊಟ್ಟೆ ವಿತರಣೆ ನಡುವೆಯೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಡೆ ಗಮನ ನೀಡಬೇಕಾಗಿದೆ. ಇದ್ದ ವ್ಯವಸ್ಥೆ ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸುತ್ತಿದ್ದಾರೆ.
ಕಲಿಕೆಯಲ್ಲಿ ಹಿಂದುಳಿವಿಕೆ: 8ನೇ ತರಗತಿಯಿಂದಲೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಡೆ ಕಣ್ಣಾಯಿಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಗಮನ ಹರಿಸಬೇಕು. ಶೈಕ್ಷಣಿಕ ವರ್ಷ ಶುರುಗೊಳ್ಳುತ್ತಿದ್ದಂತೆಯೇ ಮಕ್ಕಳ ಕಲಿಕೆ ಕಡೆ ವಿಶೇಷ ನಿಗಾ ಇಡುತ್ತೇವೆ ಎನ್ನುತ್ತಾರೆ ಶಾಲೆಯ ಮುಖ್ಯಗುರು ವೆಂಕಟೇಶ್ ಯಾದವ್.ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಶೌಚಾಲಯ, ಶುದ್ಧ ನೀರು, ಅಡುಗೆ ಕೋಣೆ ಹೀಗೆ ಅಗತ್ಯ ಸೌಕರ್ಯಗಳಿವೆ. ಲ್ಯಾಬ್‌ನಲ್ಲಿ 21 ಕಂಪ್ಯೂಟರ್‌ಗಳಿದ್ದು, ಪ್ರಾಜೆಕ್ಟರ್ ಮೂಲಕ ತರಗತಿ ನಡೆಸಲಾಗುತ್ತದೆ. ಕಂಪ್ಯೂಟರ್ ಬಳಕೆಯಿಂದ ಬೋಧನೆಗೆ ಒತ್ತು ನೀಡಲಾಗುತ್ತಿದೆ. ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಈ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕುರಿತು ಕೋರ್ಸ್ ಆರಂಭಿಸಲಾಗಿದೆ ಎಂದು ಎನ್ನುತ್ತಾರೆ ಮುಖ್ಯಗುರು ವೆಂಕಟೇಶ್ ಯಾದವ್.
ಗ್ರಾಮೀಣ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣಗೊಂಡು ಶಿಕ್ಷಣ ಮೊಟುಕಾಗಬಾರದು ಎಂಬ ಉದ್ದೇಶದಿಂದ ಶಿಕ್ಷಕರು ಸ್ವ-ಆಸಕ್ತಿಯಿಂದ ಮಕ್ಕಳಿಗೆ ವಿಶೇಷ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುತ್ತಾರೆ ಸಿರುಗುಪ್ಪ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಗುರು ವೆಂಕಟೇಶ್ ಯಾದವ್.