ಯಲ್ಲಾಪುರ: ಭಾರತೀಯ ಮೂಲ ಪರಂಪರೆ ಇರುವುದೇ ಸಂಸ್ಕೃತದಲ್ಲಿ. ಸಂಸ್ಕೃತದ ಹಿರಿಮೆಯನ್ನು ವಿಶ್ವವೇ ಮಾನ್ಯ ಮಾಡಿದೆ. ಅಂತಹ ಶ್ರೇಷ್ಠ ಭಾಷೆಯನ್ನು ಕಲಿಯಬೇಕು ಎಂದು ಉಮ್ಮಚಗಿ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೇಶ್ ಭಟ್ಟ ತಿಳಿಸಿದರು.
ಸೆ. ೧೧ರಂದು ವಿಶ್ವದರ್ಶನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಶ್ರೀ ಶಾರದಾಂಬಾ ಸಂಸ್ಕೃತ ಪಾಠಶಾಲೆ ಹಮ್ಮಿಕೊಂಡ ಅಸ್ಮಾಕಂ ಸಂಸ್ಕೃತಂ ಸರಣಿ ಕಾರ್ಯಕ್ರಮದಲ್ಲಿ ವಿಶ್ವದರ್ಶನ ಕನ್ನಡ ಪ್ರೌಢಶಾಲಾ ಸಹಯೋಗದಲ್ಲಿ ಉಪನ್ಯಾಸ ನೀಡಿದರು.ಹಸಿವಿಗೆ ಊಟ ಬೇಕು. ಸಂಪೂರ್ಣ ಜ್ಞಾನಕ್ಕೆ ಸಂಸ್ಕೃತ ಬೇಕು. ಯಾಕೆಂದರೆ ವೇದ, ಭಗವದ್ಗೀತೆ, ಉಪನಿಷತ್ತುಗಳು, ಪುರಾಣಗಳೆಲ್ಲವೂ ಸಂಸ್ಕೃತದಲ್ಲಿದೆ. ಅವುಗಳ ಜ್ಞಾನಕ್ಕೆ ಸಂಸ್ಕೃತ ಅನಿವಾರ್ಯ. ಗೀತೆ ವಿಶ್ವದಲ್ಲೇ ಅತಿ ಹೆಚ್ಚು ಭಾಷೆಗೆ ಅನುವಾದಗೊಂಡ ಗ್ರಂಥ. ವ್ಯಾಪಕ ಚರ್ಚೆಯ ಗ್ರಂಥ. ಹೀಗೆ ಇಂತಹ ಗ್ರಂಥಗಳನ್ನು ತಿಳಿಯಲು ಸಂಸ್ಕೃತದ ಅರಿವು ಅಗತ್ಯ ಎಂದರು.
ಸಂಸ್ಕೃತ ವಿಶ್ವವಿದ್ಯಾಲಯ ಪರಿವೀಕ್ಷಕ ವಿ. ಗಣಪತಿ ಗಾಂವ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸ್ಕೃತ ನಮ್ಮ ಅಸ್ಮಿತೆಯಾಗಿದೆ. ಅದನ್ನು ದೂರ ಮಾಡಿ ಮೆಕಾಲೆ ಶಿಕ್ಷಣದ ಪ್ರಭಾವಕ್ಕೆ ಬಲಿಯಾಗುತ್ತಿದ್ದೇವೆ. ನಮ್ಮ ಸಂಸ್ಕೃತಿಯ ಉಳಿವಿಗೆ ಸಂಸ್ಕೃತ ಅನಿವಾರ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಉಮೇಶ್ ಭಾಗ್ವತ್ ಮಾತನಾಡಿ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಂಸ್ಕೃತ ಸಹಕಾರಿಯಾಗಿದೆ. ಸಂಸ್ಕೃತ ಭಾಷೆ ಜಾತಿ, ಧರ್ಮ ಮೀರಿದ ಭಾಷೆಯಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಶಂಕರ ಭಟ್ಟ ತಾರೀಮಕ್ಕಿ, ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಶುಭ ಹಾರೈಸಿದರು. ಶಿವಮೂರ್ತಿ ಹೆಗಡೆ, ಶ್ರೀಹರಿ ಭಟ್ಟ ವೇದಘೋಷ ಮಾಡಿದರು. ಆದಿತ್ಯ ಭಟ್ಟ ನಿರ್ವಹಿಸಿದರು. ಮುಖ್ಯಾಧ್ಯಾಪಕ ಡಾ. ನರಸಿಂಹ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಡಾ. ಶಿವರಾಮ್ ಭಾಗ್ವತ ವಂದಿಸಿದರು.