ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚುನ್ನಪ್ಪ ಪೂಜಾರಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಜೀವಂತ ಬಸವಣ್ಣಗಳ ಸಂತತಿ ನಾಶವಾದಂತೆ ಭೂಮಿಯ ಫಲವತ್ತತೆ ನಾಶವಾಗಿ ವಿಷಯುಕ್ತ ಆಹಾರ ಉತ್ಪಾದನೆ ಆಗುತ್ತಿದೆ. ಇನ್ನು ಮುಂದೆ ಸಮಾಜಕ್ಕೆ ಗುಣಮಟ್ಟದ ಆಹಾರ ದೊರೆಯಬೇಕಾದರೆ ಜೀವಂತ ಬಸವಣ್ಣಗಳ ಬಸವ ತತ್ವದ ಪುನಶ್ಚೇತನ ಮಾಡುವ ಅವಶ್ಯಕತೆಯಿದೆ ಎಂದರು.
ಕೀನ್ಯಾ ದೇಶದಲ್ಲಿ ಬೃಹತ್ ಕೃಷಿ ಉದ್ದಿಮೆ ಸ್ಥಾಪಿಸುವುದರ ಜೊತೆಗೆ ನಂದಿ ಸಂತತಿ ರಕ್ಷಣೆಯಲ್ಲಿ ಹೆಸರುವಾಸಿಯಾಗಿರುವ ಮಲ್ಲಿಕಾರ್ಜುನ ಕೋರಿ ಮಾತನಾಡಿ, ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ ನಿರ್ಮಿಸುವ ಕುರಿತು ವಿಶೇಷ ಉಪನ್ಯಾಸ ನೀಡಿ, ತೈಲ ತತ್ವ ಆಧಾರಿತ ಯಾಂತ್ರಿಕ ಕೃಷಿಗೆ ಆದ್ಯತೆ ನೀಡಿ ಬಸವ ತತ್ವ ಆಧಾರಿತ ನೈಸರ್ಗಿಕ ಕೃಷಿಗೆ ಆದ್ಯತೆ ನೀಡದೇ ಇರುವ ಕಾರಣ ನಂದಿ ಕೃಷಿ ಆಧಾರಿತ ಕಾಯಕಗಳಾದ ಬಡಿಗತನ, ಕಂಬಾರಿಕೆ, ಕುಂಬಾರಿಕೆ, ಚಮ್ಮಾರಿಕೆ, ನಾಲ ಬಡಿಯುವುದು, ಹೀಗೆ ಅನೇಕ ಗ್ರಾಮೀಣ ಉದ್ಯೋಗಗಳು ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿ, ಇನ್ನುಮುಂದೆ ಪ್ರತಿ ಗ್ರಾಮಗಳಲ್ಲಿ ನಂದಿ ಸೇನೆ ಸಂಘಟಿಸಲು ಕೃಷಿ ಪದವೀಧರರ ಮುಂದಾಳತ್ವದಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ನಂದಿ ಕೂಗು ಅಭಿಯಾನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿ, ನಾಲ್ಕು ಕಾಲಿನ ಬಸವಣ್ಣಗಳ ಆಧಾರಿತ ಬಸವ ತತ್ವಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ನಂದಿ ಶಕ್ತಿಯಿಂದ ಶ್ರೇಷ್ಠ ಸಾಮ್ರಾಜ್ಯಗಳು ನಿರ್ಮಾಣವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿ ಎಲ್ಲ ಶಿವಾಲಯಗಳಲ್ಲಿ ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಜೋಡೆತ್ತಿನ ಕೃಷಿ ಯಥೇಚ್ಛವಾಗಿ ಇರುವಾಗ ನಮ್ಮ ಗ್ರಾಮಗಳು ಸ್ವಾವಲಂಬಿಯಾಗಿದ್ದವು ಎಂದರು.ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಭೀಮಸೇನ ಕೋಕರೆ ಮಾತನಾಡಿದರು. ಅಶೋಕ ಮಸಳಿ ಸ್ವಾಗತಿಸಿದರು. ರಾಜಕುಮಾರ ಮಸಳಿ ನಿರೂಪಿಸಿದರು.
400ಕ್ಕೂ ಅಧಿಕ ಜೋಡೆತ್ತಿನ ಬಂಡಿಗಳ ಸಮಾಗಮಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ 3ನೇ ಪುಣ್ಯ ಸ್ಮರಣೆ ಅಂಗವಾಗಿ ಕೃಷಿ ಪದವೀಧರರಿಂದ ಪ್ರಾರಂಭವಾದ ನಂದಿ ಉಳಿಸಿ ಕೂಗು ಅಭಿಯಾನವು ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಆಯೊಜಿಸಿದ ಜೋಡೆತ್ತಿನ ಬಂಡಿಗಳ ಐತಿಹಾಸಿಕ ಸಮಾವೇಶಕ್ಕೆ 400ಕ್ಕೂ ಅಧಿಕ ಜೋಡೆತ್ತಿನ ಬಂಡಿಗಳು ಆಗಮಿಸುವ ಮೂಲಕ ರಾಷ್ಟ್ರ ಮಟ್ಟದ ನಂದಿ ಸೇನೆ ಸ್ಥಾಪನೆಗೆ ಬೆಂಬಲ ನೀಡಿದವು. ಶ್ರೀ ಸಿದ್ಧೇಶ್ವರ ಶ್ರೀಗಳ ಸಹೋದರ ಸೋಮಲಿಂಗ ಅಜ್ಜನವರು ನಂದಿ ಗೀತೆ ಹಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.