ಭದ್ರಾ ಡ್ಯಾಂ ಗೇಟ್‌ ದುರಸ್ತಿಗೆ ₹150 ಕೋಟಿ ನೀಡಿ

KannadaprabhaNewsNetwork | Published : Jul 18, 2024 1:31 AM

ಸಾರಾಂಶ

ಭದ್ರಾ ಜಲಾಶಯದ ನದಿ ಗೇಟ್ (ರಿವರ್‌ ಸ್ಲ್ಯೂಯಿಸ್‌)ನಲ್ಲಿ ಶಾಶ್ವತ ಪರಿಹಾರ ಹಾಗೂ ತುರ್ತು ಗೇಟ್‌ನಲ್ಲಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ತುರ್ತಾಗಿ ₹100-₹150 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದಾವಣಗೆರೆಯಲ್ಲಿ ಒತ್ತಾಯಿಸಿದರು.

- ಭದ್ರಾ ಡ್ಯಾಂ ತುಂಬಿದ ನಂತರ ಮೇಲ್ದಂಡೆಗೆ ನೀರುಹರಿಸಿ: ರೇಣುಕಾಚಾರ್ಯ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಭದ್ರಾ ಜಲಾಶಯದ ನದಿ ಗೇಟ್ (ರಿವರ್‌ ಸ್ಲ್ಯೂಯಿಸ್‌)ನಲ್ಲಿ ಶಾಶ್ವತ ಪರಿಹಾರ ಹಾಗೂ ತುರ್ತು ಗೇಟ್‌ನಲ್ಲಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ತುರ್ತಾಗಿ ₹100-₹150 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭದ್ರಾ ಜಲಾಶಯದ ನೀರು ಸೋರಿಕೆ ತಡೆಯದಿದ್ದಲ್ಲಿ ದಾವಣಗೆರೆ, ಶಿವಮೊಗ್ಗ ಸೇರಿದಂತೆ 3 ಜಿಲ್ಲೆಯ ಜನರು, ರೈತರು ಬೀದಿ ಪಾಲಾಗಲಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡುವ ಮೂಲಕ ನೀರು ಸೋರಿಕೆ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದರು.

ರಿವರ್ ಸ್ಲ್ಯೂಯಿಸ್ ದುರಸ್ತಿಗೆ ತೀರ್ಥಹಳ್ಳಿ ಮೂಲದ ಗುತ್ತಿಗೆದಾರರಿಗೆ ₹90 ಲಕ್ಷ ವೆಚ್ಚದ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಗೇಟ್‌ಗೆ ರಬ್ಬರ್ ಹಾಕದೆಯೇ ಬಿಟ್ಟಿದ್ದರಿಂದ ಪ್ರತಿ ದಿನ 5ರಿಂದ 6 ಸಾವಿರ ಕ್ಯುಸೆಕ್ ನೀರು ನದಿಗೆ ಹೋಗುತ್ತಿತ್ತು. ಈಗಲೂ ದಿನಕ್ಕೆ 500- 600 ಕ್ಯುಸೆಕ್ ನೀರು ನದಿಗೆ ಹರಿಯುತ್ತಿದೆ.‌ ಅಧಿಕಾರಿ ವರ್ಗದ ತಪ್ಪಿನಿಂದಾಗಿ ನೀರು ನದಿಗೆ ವ್ಯರ್ಥವಾಗಿ ಹರಿಯುತ್ತಿದೆ ಎಂದು ಕಿಡಿಕಾರಿದರು.

ಉಗ್ರ ಪ್ರತಿಭಟನೆ ಎಚ್ಚರಿಕೆ:

ಬಿಜೆಪಿ ಅವಧಿಯಲ್ಲಿ ಯಡಿಯೂರಪ್ಪ ಉಪ ಮುಖ್ಯಮಂತ್ರಿ ಆಗಿದ್ದಾಗ ಭದ್ರಾ ಜಲಾಶಯ, ನಾಲೆ ಇತರೆ ದುರಸ್ತಿಗೆ 2008-2009ರಲ್ಲಿ ₹900 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಕಾಂಗ್ರೆಸ್‌ ಸರ್ಕಾರ ಒಂದೇ ಒಂದು ರು. ಸಹ ಬಿಡುಗಡೆ ಮಾಡಿಲ್ಲ. ಭದ್ರಾ ತುಂಬಿದ ನಂತರ ಹೆಚ್ಚುವರಿ ನೀರನ್ನು ಭದ್ರಾ ಮೇಲ್ದಂಡೆ ಹರಿಸಬೇಕು. ಆದರೆ, ಅದಕ್ಕಿಂತ ಮುಂಚೆಯೇ ಎರಡು ಬಾರಿ ನೀರು ಹರಿಸಲಾಗಿದೆ. ಭದ್ರಾ ಅಣೆಕಟ್ಟು ಭರ್ತಿ ಆಗುವವರೆಗೆ ಯಾವುದೇ ಕಾರಣಕ್ಕೂ ಮೇಲ್ದಂಡೆ ಯೋಜನೆಗೆ ನೀರು ಹರಿಸಬಾರದು. ಸರ್ಕಾರ ಸ್ಪಂದಿಸದಿದ್ದರೆ ರೈತರ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಒಳಗೊಂಡಂತೆ ಹಂತ ಹಂತವಾಗಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರೇಣುಕಾಚಾರ್ಯ ಎಚ್ಚರಿಸಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಜಿಲ್ಲಾ ಸಚಿವರು ಭದ್ರಾ ಜಲಾಶಯದ ನೀರಿನ ಸೋರಿಕೆ ಬಗ್ಗೆ ಗಮನ ಹರಿಸುತ್ತಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ಧನಂಜಯ ಕಡ್ಲೇಬಾಳು, ರಾಜು, ಬಾತಿ ಶಿವಕುಮಾರ, ‌ಪ್ರವೀಣ ಜಾಧವ್, ಮೋಹನ, ಕುಮಾರಪ್ಪ, ಹಾಲೇಶ್ ನಾಯ್ಕ ದಯಾನಂದ್, ಸಂಗಂ ಇತರರು ಇದ್ದರು.

- - -

ಬಾಕ್ಸ್‌ * "3 ಜಿಲ್ಲೆ ಜನರ ಹಿತಾಸಕ್ತಿ ಕಾಪಾಡಿ "ಬಿಜೆಪಿ ಮುಖಂಡ ಮಾಡಾಳ ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ಜಲಾಶಯದಿಂದ ಸುಮಾರು 1 ಸಾವಿರ ಕೆರೆಗಳಿಗೆ ತುಂಬಿಸುವಷ್ಟು ನೀರು ವೃಥಾ ನದಿಗೆ ಹರಿಯುತ್ತಿತ್ತು. ಹೀಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಜು.8ರಂದು ಜಲಾಶಯಕ್ಕೆ ಭೇಟಿ ನೀಡಿ, ಮಾಹಿತಿ ಪಡೆಯಲು ಹೋಗುವ ಮುನ್ನ ತೇಪೆ ಹಾಕುವ ಕೆಲಸ ಮಾಡಿದ್ದಾರೆ. ರಿವರ್ ಸ್ಲ್ಯೂಯಿಸ್‌ಗೆ ಕೂಡಲೇ ಶಾಶ್ವತ ಪರಿಹಾರ ಕೆಲಸ ಆಗಬೇಕು. ಇಲ್ಲವಾದಲ್ಲಿ 3 ಜಿಲ್ಲೆಗಳ ಜೀವನಾಡಿ ಭದ್ರಾ ಜಲಾಶಯದಲ್ಲಿ ನೀರಿಲ್ಲದಂತಾಗಿ ಜನರ ಸ್ಥಿತಿ ದುಸ್ಥಿತಿಗೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

- - - (-ಫೋಟೋ: ಎಂ.ಪಿ.ರೇಣುಕಾಚಾರ್ಯ)

Share this article