ಕನ್ನಡಪ್ರಭ ವಾರ್ತೆ ಸಾಗರ
ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣ ೫ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮನವಿ ಮಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ತಾಲ್ಲೂಕಿನಲ್ಲಿ ೪೮, ಹೊಸನಗರ ವ್ಯಾಪ್ತಿಯಲ್ಲಿ ೨೭ಮನೆಗಳಿಗೆ ಹಾನಿಯಾಗಿದೆ. ಅಧಿಕಾರಿಗಳು ಮನೆ ಕಳೆದು ಕೊಂಡವರಿಂದ ಹಕ್ಕುಪತ್ರ, ದಾಖಲೆ ಕೇಳುವ ಬದಲು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ವ್ಯಾಪಿ ಮಳೆಯಿಂದ ದೊಡ್ಡಮಟ್ಟದ ಅನಾಹುತವಾಗಿದೆ. ಸಾಗರ ಕ್ಷೇತ್ರದಲ್ಲಿಯೂ ಮನೆ, ರಸ್ತೆ, ಚರಂಡಿ, ಸೇತುವೆಗಳಿಗೆ ಹಾನಿಯಾಗಿದೆ. ಪರಿಹಾರ ನೀಡಲು ರಾಜ್ಯ ಸರ್ಕಾರದ ಸೂಚನೆ ಸ್ಪಷ್ಟವಾಗಿಲ್ಲ. ಮನೆ ಬಿದ್ದವರ ಹತ್ತಿರ ಬೇರೆ ಬೇರೆ ದಾಖಲೆ ಕೇಳಲಾಗುತ್ತಿದೆ. ಮಳೆಯಿಂದ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರು ಎಲ್ಲಿ ದಾಖಲೆ ಹುಡುಕುತ್ತಾ ಕುಳಿತುಕೊಳ್ಳುತ್ತಾರೆ. ಮಲೆನಾಡು ಭಾಗದಲ್ಲಿ ವಾಸ ಮಾಡುವವರು ಅನಧಿಕೃತವಾಗಿ ಇರುವುದಿಲ್ಲ. ತಕ್ಷಣ ಅಧಿಕಾರಿಗಳು ಸ್ಥಳದಲ್ಲಿ ೨೫ ಸಾವಿರ ರೂ. ನಂತರ ಹೊಸ ಮನೆ ಕಟ್ಟಿಕೊಳ್ಳಲು ೫ ಲಕ್ಷ ರು. ನೀಡಬೇಕು. ನೆರೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಎನ್ನುತ್ತಿದ್ದಾರೆ. ಖಾತೆಯಲ್ಲಿ ಹಣವಿದ್ದರೆ ಏನು ಪ್ರಯೋಜನ. ಅದನ್ನು ಪರಿಹಾರ ಕಾರ್ಯಕ್ಕೆ ಉಪಯೋಗಿಸಬೇಕು ಎಂದು ಆಗ್ರಹಿಸಿದರು.ಡೆಂಘೀ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗೌತಮಪುರದಲ್ಲಿ ಇಂಜಿನಿಯರಿಂಗ್ ಅಂತಿಮ ವರ್ಷ ಓದುತ್ತಿದ್ದ ವಿದ್ಯಾರ್ಥಿಯೋರ್ವ ಡೆಂಘೀವಿಗೆ ಬಲಿಯಾಗಿದ್ದಾರೆ. ಡೆಂಘೀ ರಾಜ್ಯವ್ಯಾಪಿ ಹೆಚ್ಚುತ್ತಿದೆ. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿಯಂತ್ರಣ ಸಂಬಂಧ ಸೂಚನೆ ನೀಡಿದ್ದರೂ ಅದು ಪರಿಣಾಮಕಾರಿಯಾಗಿಲ್ಲ. ಡೆಂಘೀ ನಿಯಂತ್ರಣಕ್ಕೆ ಇನ್ನಷ್ಟು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ನೆರೆಪೀಡಿತ ಪ್ರದೇಶಕ್ಕೆ ನೆಪಮಾತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಸಂಕಷ್ಟದಲ್ಲಿರುವ ಜನರ ನೋವು ಆಲಿಸಿಲ್ಲ. ಬಿಜೆಪಿ ಸಂಸದರು, ಶಾಸಕರು, ಮಾಜಿ ಮಂತ್ರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ ಎಂದು ಹೇಳಿದರು.ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ ಪ್ರಸಾದ್, ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ಕೆ.ಜಿ.ಪ್ರಶಾಂತ್, ಭರ್ಮಪ್ಪ ಅಂದಾಸುರ, ವಿ.ಮಹೇಶ್, ಗಿರೀಶ್ ಗೌಡ, ಸತೀಶ್ ಕೆ., ಸುವರ್ಣ ಟೀಕಪ್ಪ, ಜಿ.ಕೆ.ಭೈರಪ್ಪ, ಬಿ.ಟಿ.ರವೀಂದ್ರ, ಸತೀಶ್ ಕೆ., ರಾಯಲ್ ಸಂತೋಷ್ ಹಾಜರಿದ್ದರು.ನಮ್ಮ ಕುಟುಂಬ ಒಡೆದಿಲ್ಲ, ಅಪ್ಪ-ಮಗಳು ಜೊತೆಗಿದ್ದೇವೆ: ನಂದಿನಿ
ಡಾ.ರಾಜನಂದಿನಿ ಕಾಗೋಡು ಮಾತನಾಡಿ, ನಮ್ಮ ಕುಟುಂಬ ಒಡೆದಿದೆ. ಇದಕ್ಕೆ ಹಾಲಪ್ಪ ಕಾರಣವೆಂದು ಕಾಂಗ್ರೆಸ್ಸಿನ ಕೆಲವರು ಅನಗತ್ಯವಾದ ಹುಟ್ಟುಹಾಕು ತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ ಎಂದು ನಾನು ಬಿಜೆಪಿ ಸೇರಿ ೧೫ ತಿಂಗಳು ಕಳೆದಿದೆ. ಕಾಂಗ್ರೇಸ್‌ನವರಿಗೆ ಟೀಕೆ ಮಾಡಲು ಏನೂ ವಿಷಯ ಇಲ್ಲ ಎಂದು ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮನೆ ಇಬ್ಭಾಗವಾಗಿದ್ದರೆ ಅಪ್ಪ-ಮಗಳು ಒಂದೇ ಮನೆಯಲ್ಲಿ ಇರಲು ಸಾಧ್ಯವಿತ್ತಾ ಎಂದು ಪ್ರಶ್ನಿಸಿದ ಅವರು, ನಮ್ಮ ಮನೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಕಾಂಗ್ರೆಸ್‌ನವರು ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಸಲಹೆ ನೀಡಿದರು.