ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ರೈತರು ಕಬ್ಬು ಸೇರಿದಂತೆ ಯಾವುದೇ ಬೆಳೆ ಬೆಳೆಯಬೇಕಾದರೆ ರಸಗೋಬ್ಬರ, ಕಳೆನಾಶಕ ಔಷಧಿ, ಕೃಷಿ ಕಾರ್ಮಿಕರಿಗೆ ಎಕರೆಗೆ ₹75 ರಿಂದ ₹80 ಸಾವಿರ ಖರ್ಚು ಮಾಡುತ್ತಿದ್ದು, ಕಬ್ಬು ಕಟಾವು ಸಮಯದಲ್ಲಿ ಸಕ್ಕರೆ ಕಾರ್ಖಾನೆಯವರು ನ್ಯಾಯಯುತ ಲಾಭದಾಯಕ ಬೆಲೆ ಹಾಗೂ ಉಪ ಉತ್ಪನಗಳ ಲಾಭಾಂಶ ನೀಡಲು ಪ್ರತಿವರ್ಷ ಹಿಂದೇಟು ಹಾಕುತ್ತಿದ್ದು, ತೂಕದಲ್ಲಿ ರಿಕವರಿಯಲ್ಲಿ ಸದಾ ರೈತರಿಗೆ ಮೋಸ ಮಾಡುತ್ತಿದ್ದು, ನ್ಯಾಯಯುತ ಲಾಭದಾಯಕ ಬೆಲೆ ನೀಡಬೇಕೆಂದು ಆಗ್ರಹಿಸಿದರು.
ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷಗಳ ಜನಪ್ರತಿನಿಧಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿದ್ದು, ರೈತರ ಕಷ್ಟಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಬೇಕಾದ ಸೇವಕರೇ ರೈತರ ರಕ್ತ ಹೀರುವ ಪೀಪಾಸುಗಳಾಗಿದ್ದಾರೆ. ಹೀಗಾಗಿ ರೈತರು ನ್ಯಾಯಯುತ ಲಾಭದಾಯಕ ಬೆಲೆ ನೀಡಬೇಕೆಂದು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಪ್ರತಿವರ್ಷ ಬೀದಿಗಿಳಿದು ಪ್ರತಿಭಟಸಿ ನ್ಯಾಯಕ್ಕಾಗಿ ಹೋರಾಟ ಮಾಡುವುದು ನಮ್ಮ ದುರಂತವೇ ಸರಿ ಎಂದು ಆರೋಪಿಸಿದರು.ತಕ್ಷಣ ಸಕ್ಕರೆ ಕಾರ್ಖಾನೆ ಮಾಲೀಕರು ಸಾಗಾಣಿಕೆ ವೆಚ್ಚ ತಾವೇ ಭರಿಸಿ, ತೂಕದಲ್ಲಿ ಹಾಗೂ ರಿಕವರಿಯಲ್ಲಿ ಯಾವುದೇ ರೀತಿಯ ಮೋಸ ಮಾಡುವುದಿಲ್ಲವೆಂದು ಟನ್ ಕಬ್ಬಿಗೆ ₹4000 ಬೆಲೆ ನಿಗದಿಪಡಿಸುವ ಹಾಗೂ ಶೇ.70ರಷ್ಟು ಉಪ ಉತ್ಪನಗಳ ಲಾಭಾಂಶ ತಕ್ಷಣ ನೀಡುವ ಬಗ್ಗೆ ರೈತರಿಗೆ ಲಿಖಿತವಾಗಿ ನೀಡಿ ಕಾರ್ಖಾನೆ ಪ್ರಾರಂಭಿಸಬೇಕು. ಈಗಾಗಲೇ ಸತತವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಶೇ.100 ರೈತರ ಬೆಳೆಗಳು ಹಾನಿಯಾಗಿದ್ದು , ಕಂದಾಯ ಇಲಾಖೆ ಕೆಲವು ಅಧಿಕಾರಿಗಳು ರೈತರ ಜಮೀನಿಗೆ ಸಮೀಕ್ಷೆಗೆ ಹೋಗದೇ ಮೂರನೇ ವ್ಯಕ್ತಿಗಳಿಂದ ಬೆಳೆ ಸಮೀಕ್ಷೆ ಮಾಡಿಸಿದ್ದು ತೋಟಗಾರಿಕೆ ಬೆಳೆ ಬೆಳೆದವರಿಗೆ ಕೃಷಿ ಇಲಾಖೆ ಬೆಳೆಗಳನ್ನು ಹಾಗೂ ಕೃಷಿ ಇಲಾಖೆ ಬೆಳೆ ಬೆಳೆದವರಿಗೆ ತೋಟಗಾರಿಕೆ ಬೆಳೆಗಳನ್ನು ನಮೂದಿಸಿದ್ದು ಇದರಿಂದ ರೈತರಿಗೆ ಭಾರಿ ಅನ್ಯಾಯವಾಗಿದ್ದು ಮರು ಸಮೀಕ್ಷೆ ನಡೆಸಿ ರೈತರಿಗೆ ಶೀಘ್ರದಲ್ಲಿ ಎನ್‌ಡಿಆರ್‌ಎಪ್ ಕಾಯ್ದೆಯಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಎಲ್ಲ ಪ್ರಮಖ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು, ಇಲ್ಲದಿದ್ದಲ್ಲಿ ಭಾರತೀಯ ಕಿಸಾನ ಸಂಘದ ನೇತೃತ್ವದಲ್ಲಿ ರೈತರು 3, 4 ದಿನಗಳ ನಂತರ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆ, ಧರಣಿ, ಉಪವಾಸ ಸತ್ಯಾಗ್ರಹದಂತಹ ಚಳವಳಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.