ಅಪ್ಪಟ ಗ್ರಾಮೀಣ ಸೊಗಡಿನ ರಾಜಕಾರಣಿ ಮೇಟಿ ಇನ್ನಿಲ್ಲ

KannadaprabhaNewsNetwork |  
Published : Nov 05, 2025, 03:15 AM IST
HY Meti

ಸಾರಾಂಶ

ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಮೇಟಿ ಅವರು, 1994ರಲ್ಲಿ ಎರಡನೇ ಬಾರಿಗೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿ ದೇವೇಗೌಡರ ಸಂಪುಟದಲ್ಲಿ ಅರಣ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಈಶ್ವರ್ ಶೆಟ್ಟರ

 ಬಾಗಲಕೋಟೆ :  ಅಪ್ಪಟ ಗ್ರಾಮೀಣ ಸೊಗಡಿನ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಮಾಜಿ ಸಚಿವ, ಬಾಗಲಕೋಟೆ ಕ್ಷೇತ್ರದ ಶಾಸಕ ಎಚ್.ವೈ.ಮೇಟಿ ಅವರು ನಿಜಕ್ಕೂ ಸರಳ, ಸಜ್ಜನಿಕೆಯ ರಾಜಕಾರಣಿ. ಕಳೆದ ಐದು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಕ್ರಿಯ ರಾಜಕೀಯದಲ್ಲಿ ಸದಾಕಾಲ ಜೀವಂತಿಕೆ ಇಟ್ಟುಕೊಂಡಿದ್ದರು.

ಅದು 80ರ ದಶಕದ ಮಧ್ಯ ಭಾಗದಲ್ಲಿ ಗ್ರಾಮೀಣ ಪ್ರದೇಶದ ಜನರ ಪ್ರೀತಿ, ವಿಶ್ವಾಸದೊಂದಿಗೆ ರಾಜಕಾರಣ ಆರಂಭಿಸಿದ್ದ ಹುಲ್ಲಪ್ಪ ಯಮನಪ್ಪ ಮೇಟಿಯವರ ಸಾರ್ವಜನಿಕ ಬದುಕೆ ಒಂದು ರೀತಿಯಲ್ಲಿ ವರ್ಣಮಯ ಮತ್ತು ಅಷ್ಟೇ ಸ್ವಾರಸ್ಯಕರವಾಗಿತ್ತು. ಬಾಗಲಕೋಟೆ ತಾಲೂಕಿನ ತಿಮ್ಮಾಪೂರ ಎಂಬ ಪುಟ್ಟ ಗ್ರಾಮದಿಂದ ಆರಂಭಗೊಂಡ ಸಾರ್ವಜನಿಕ ಜೀವನ ಅವರನ್ನು ಶಾಸಕರನ್ನಾಗಿ, ಸಚಿವರನ್ನಾಗಿ, ಸಂಸದರನ್ನಾಗಿ ಆಯ್ಕೆ ಮಾಡುವಷ್ಟು ಎತ್ತರಕ್ಕೆ ಕರೆದೊಯ್ದಿತ್ತು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬೆಳೆದು ಬಿಲ್ಕೆರೂರ ಮಂಡಳ ಪಂಚಾಯಿತಿ ಸದಸ್ಯನಾಗುವ ಮೂಲಕ ಆರಂಭಗೊಂಡ ಅಧಿಕಾರಯುತ ರಾಜಕಾರಣದ ಪಯಣ ಬಾಗಲಕೋಟೆಯ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನದ ಮೂಲಕ ಹಿರಿಯರ ಸ್ನೇಹಕ್ಕೆ ಕಾರಣವಾಗಿತ್ತು.

ಜನತಾ ಪರಿವಾರದ ನಾಯಕ:

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ತಿಮ್ಮಾಪೂರ ಗ್ರಾಮದ ಎಚ್.ವೈ.ಮೇಟಿ ಅವರಿಗೆ ರಾಜಕಾರಣದ ಗುರುಗಳಾಗಿ ಮೊದಲ ಬಾರಿಗೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಯಶಸ್ಸು ಕಂಡವರು. ಅಂದಿನ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿ.ಜಿ.ವಿ.ಮಂಟೂರ ಅವರು. ಅಂದು ಬಾಗಲಕೋಟೆ ಕ್ಷೇತ್ರಕ್ಕೆ ಬದಲಾಗಿ ಪಕ್ಕದ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರಕ್ಕೆ 1989ರಲ್ಲಿ ಅಭ್ಯರ್ಥಿಯನ್ನಾಗಿ ಜನತಾ ಪರಿವಾರದ ಅಂದಿನ ಮಂಚೂಣಿ ನಾಯಕ ಹಾಗೂ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರನ್ನು ಮನವೊಲಿಸಿದ್ದ ಮಂಟೂರ ಅವರು ಇವರಿಗೆ ರಾಜಕೀಯದ ಆಳವನ್ನು ಪರಿಚಯಿಸಿದ್ದರು.

ಸ್ವ ಕ್ಷೇತ್ರವಲ್ಲದಿದ್ದರು ಸಹ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಮೇಟಿ ಅವರು, 1994ರಲ್ಲಿ ಎರಡನೇ ಬಾರಿಗೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿ ದೇವೇಗೌಡರ ಸಂಪುಟದಲ್ಲಿ ಅರಣ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಚಿವರಾಗಿದ್ದಾಗಲೇ 1996ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಬಾಗಲಕೋಟೆ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಲ್ಲಿ ಲೋಕಸಭೆಗೆ ಮತ್ತೆ ಸ್ಪರ್ಧಿಸಿ ಸೋಲು ಕಂಡ ಮೇಟಿ, 1999ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಸೋಲು ಕಂಡಿದ್ದರು. 2004ರಲ್ಲಿ ಮತ್ತೆ ಗುಳೇದಗುಡ್ಡದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲವು ಕಂಡಿದ್ದ ಮೇಟಿ ಅವರಿಗೆ, 2008ರ ಕ್ಷೇತ್ರ ಪುನರ್ವಿಂಗಡಣೆ ಕಾರಣಕ್ಕೆ ಗುಳೇದಗುಡ್ಡ ಕ್ಷೇತ್ರಕ್ಕೆ ಅಸ್ತಿತ್ವ ಕಳೆದುಕೊಂಡಾಗ ಬಾಗಲಕೋಟೆಗೆ ವಲಸೆ ಬರಬೇಕಾಯಿತು.

ಸಿದ್ದರಾಮಯ್ಯನವರ ಕಟ್ಟಾ ಅನುಯಾಯಿ:

ರಾಜಕಾರಣದಲ್ಲಿ ಸ್ವಾಮಿನಿಷ್ಠೆ, ವಿಶ್ವಾಸ, ಪರಸ್ಪರ ನಂಬಿಕೆಗಳು ವಿರಳವಾಗಿರುವ ಈ ದಿನಗಳಲ್ಲಿ ನಾಲ್ಕು ದಶಕಗಳಿಂದ ಸಿದ್ದರಾಮಯ್ಯನವರ ಕಟ್ಟಾ ಅನುಯಾಯಿಯಾಗಿ ಸ್ವಾಮಿನಿಷ್ಠೆ ಉಳಿಸಿಕೊಂಡವರು ಎಚ್.ವೈ.ಮೇಟಿ. 2008ರ ಸಮಯದಲ್ಲಿ ಸಿದ್ದರಾಮಯ್ಯನವರ ಜೊತೆಯಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಬಾಗಲಕೋಟೆ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಕಂಡ ಮೇಟಿ ಅವರು, 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲವಿನ ನಗೆ ಬೀರಿದ್ದರು. 2016ರಲ್ಲಿ ಸಿದ್ದು ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಇರುವ ಇವರಿಗೆ, 2018ರ ಚುನಾವಣೆಯಲ್ಲಿ ಮತ್ತೆ ಸೋಲು ಅನುಭವಿಬೇಕಾಯಿತು. 2023ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಗೆಲವು ಕಂಡಿದ್ದಾರೆ.

ಸರಳತೆ, ಮಿತಭಾಷಿ, ಮುಗ್ಧತೆಯ ಮೇಟಿ

ಎಲ್ಲರ ಜೊತೆ ಮುಕ್ತವಾಗಿ ಬೆರೆಯುತ್ತಿದ್ದ ಮೇಟಿ ಅವರಲ್ಲಿ ಸರಳತೆ ಜೊತೆಗೆ ಮುಗ್ಧತೆ ಕಾಣುತ್ತಿತ್ತು. ಮಾತಿನ ನಡುವೆ ಎಲ್ಲವನ್ನು ಮುಕ್ತವಾಗಿ ಮಾತನಾಡಿ, ಮುಜುಗರಕ್ಕೆ ಒಳಗಾಗುತ್ತಿದ್ದ ಅವರು ತಮ್ಮ ಮಾತಿನಲ್ಲಿ ಆಗಿರುವ ಲೋಪವನ್ನು ಸರಳತೆಯಿಂದ ಸ್ವೀಕರಿಸುವ ಗುಣ ಅವರದ್ದಾಗಿತ್ತು. ಪಕ್ಕಾ ಜವಾರಿ ಊಟವನ್ನು ಪ್ರೀತಿಸುತ್ತಿದ್ದ ಮೇಟಿ ಅವರ ಮನೆಗೆ ಯಾರೆ ತೆರಳಿದರು ಸಹ ಅಪ್ಪಟ ತರಕಾರಿಯ ವಿವಿಧ ಖಾದ್ಯಗಳ ಬೋಜನ ಸವಿದೇ ಹೊರಬರಬೇಕು. ಅದರಲ್ಲು ಚುರುಮರಿ ಸೂಸಲ, ಮೊಸರು, ಭಜಿ ಅವರ ಪ್ರೀಯವಾದ ತಿಂಡಿಯಾಗಿತ್ತು. ತಿಮ್ಮಾಪೂರ ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ದೆಹಲಿಯ ಲೋಕಸಭೆಯನ್ನು ಪ್ರವೇಶಿಸಿದ್ದ ಅವರ ರಾಜಕೀಯ ಜೀವನ ಒಂದು ರೀತಿಯಲ್ಲಿ ತೆರೆದ ಪುಸ್ತಕವಾಗಿತ್ತು ಎಂದರೆ ತಪ್ಪಾಗಲಾರದು. ಭಾಷೆ ಬಾರದ ಕುರಿತು ತಮಾಷೆ

8ನೇ ತರಗತಿಯವರೆಗೆ ಮಾತ್ರ ಶಾಲೆ ಕಲಿತಿದ್ದ ಮೇಟಿಯವರಿಗೆ ಅಂದು ಮತ್ತಷ್ಟು ಕಲಿಯಬೇಕಾಗಿತ್ತು. ಜೊತೆಗೆ ಇತರ ಭಾಷೆಗಳ ಜ್ಞಾನ ಕಲಿಯಬೇಕಾಗಿತ್ತು ಎಂಬ ನೋವು ಅವರಿಗೆ ಕಾಡುತ್ತಿತ್ತು. ಆ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು ಎಂಬ ಕನಸನ್ನು ಹೊಂದಿದ್ದರು. ಲೋಕಸಭಾ ಸದಸ್ಯರಾದ ಸಂದರ್ಭದಲ್ಲಿ ದೆಹಲಿಯ ಅನುಭವ, ಲೋಕಸಭೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯ ಅನಿವಾರ್ಯತೆ ಮತ್ತು ಸಂದರ್ಭಗಳನ್ನು ತಮಾಷೆಯಾಗಿ ಹೇಳಿಕೊಳ್ಳುವ ಜೊತೆಗೆ ಆಗಿರುವ ಮುಜುಗರವನ್ನು ಸಹ ಹಂಚಿಕೊಳ್ಳುವ ಸ್ವಭಾವ ಅವರದ್ದಾಗಿತ್ತು.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ