ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕನ್ನಡ ಕೇವಲ ರಾಜ್ಯೋತ್ಸವ ಆಚರಣೆಗೆ ಸೀಮಿತವಾಗದೇ ಕನ್ನಡವನ್ನು ಉಸಿರಾಗಿಸಿ, ಪ್ರೀತಿಸಿ, ಗೌರವಿಸಿ, ಉಳಿಸಿ ಬೆಳೆಸಲು ಅನ್ಯಭಾಷೆಯ ಬಳಕೆ ಕೈಬಿಟ್ಟು ಕನ್ನಡ ಪ್ರಮುಖ ಭಾಷೆಯನ್ನಾಗಿ ಬಳಸುವಂತಾಗಬೇಕು. ಅಂದಾಗ ಮಾತ್ರ ಕನ್ನಡ ಹಿರಿಮೆ ಸಾರಲು ಸಾಧ್ಯ ಎಂದು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶರಣು ಪಾಟೀಲ ಹೇಳಿದರು.ಪಟ್ಟಣದ ಬೆಂಗಳೂರು ಬೇಕರಿ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಆಯ್ದ ಕವಿಗಳಿಂದ ಕವನ ವಾಚನ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯೋತ್ಸವವು ನಮ್ಮ ನಾಡಿನ ಗೌರವದ ದಿನ.
ಇಂದು ಅನ್ಯ ಭಾಷೆಯ ವೈಭವಿಕರಿಸುವ ಮೂಲಕ ಮಾತೃಭಾಷೆಯನ್ನೇ ಮರೆತುಬಿಟ್ಟಿದ್ದೇವೆ. ಎಲ್ಲ ರಂಗದಲ್ಲೂ ಕನ್ನಡ ಭಾಷೆ ಕಡ್ಡಾಯಗೊಳಿಸಿದ ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಇಳಿಯುವ ಪ್ರಸಂಗಳನ್ನು ಕಾಣುತ್ತಿದ್ದೇವೆ. ಆಂಗ್ಲ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತಮ್ಮ ಭಾಷೆಯ್ನು ಬಿಟ್ಟು ಬೇರೆಯಾವ ಭಾಷೆಗೂ ಮಾನ್ಯತೆ ನೀಡುವುದಿಲ್ಲ. ವ್ಯವಹಾರಿಕವಾಗಿಯೂ ಅವರು ತಮ್ಮ ಭಾಷೆಯನ್ನೇ ಬಳಸುತ್ತಿದ್ದಾರೆ ಎಂದು ತಿಳಿಸಿದರು.ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿ, ಈ ದಿನ ಕನ್ನಡ ಸಾಹಿತ್ಯ, ನಾಡು-ನುಡಿ, ಕಥೆ-ಕಾವ್ಯ, ನೃತ್ಯ-ಸಂಗೀತ ಮತ್ತು ಜನಪದ ಪರಂಪರೆಯ ಕೃಷಿ ಬದುಕಿನ ಎಲ್ಲ ರೂಪಗಳನ್ನು ಸ್ಮರಿಸುವ ದಿನವಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾಮ್ರಾಟ ಭಾಷೆಯಾಗಿದೆ. ನಾಡಿನಾದ್ಯಂತ ಪ್ರತಿಯೊಬ್ಬರು ವ್ಯವಹಾರಿಕ ಭಾಷೆಯಾಗಿ ಕನ್ನಡವನ್ನೇ ಬಳಸುವುದು ಕರ್ತವ್ಯವಾಗಿದೆ. ನಮ್ಮ ಜನರ ನಡತೆ, ಮಾತು, ಸಂಸ್ಕಾರ ಇವೆಲ್ಲವೂ ಕನ್ನಡದ ನಿಜವಾದ ಆತ್ಮವನ್ನು ಪ್ರತಿಬಿಂಬಿಸುತ್ತವೆ ಎಂದರು.ಕಸಾಪ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ ಹಾಗೂ ಗೌರವ ಕಾರ್ಯದರ್ಶಿ ವೈ.ಎಚ್.ವಿಜಯಕರ ಪ್ರಾಸ್ತಾವಿಕ ಮಾತನಾಡಿದರು. ಕಾಳಮ್ಮ ಪತ್ತಾರ ಗಾಯನ ಹಾಗೂ ಕುಂಟೋಜಿಯ ಮರೇಪ್ಪ ವಾಳದವರ ಹಂತಿ ಪದ, ದೇವರಹುಲಗಬಾಳದ ಮಮತಾಜ.ಬಿ. ತಂಡ ಸಂಪ್ರಾಯ ಪದಗಳನ್ನು ಹಾಡಿ ರಂಜಿಸಿದರು. ಕವಿಗಳು ಕವನ ವಾಚನ ಮಾಡಿದರು. ಕಾರ್ಯದರ್ಶಿ ಸಿದ್ದನಗೌಡ ಬಿಜ್ಜೂರ ನಿರೂಪಿಸಿದರು. ಸಿಆರ್‌ಪಿ ಗುಂಡು ಚವ್ಹಾಣ ಸ್ವಾಗತಿಸಿದರು.ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಾಹಿತಿಗಳಾದ ಸಿ.ಬಿ.ಇಟಗಿ, ಅಶೋಕ ಮಣಿ, ಬಸವರಾಜ ಕೋರಿ, ಬಸವರಾಜ ನಾಲತವಾಡ, ಬಿ.ಪಿ.ಪಾಟೀಲ, ಎಂ.ಎಸ್.ಬಿರಾದಾರ, ಮಹಾದೇವಿ ನಾಲತವಾಡ, ಶಾಂತಲಾ ಪಾಟೀಲ, ಬಸಲಿಂಗಪ್ಪ ರಕ್ಕಸಗಿ, ಅಮರೇಶ ಗೂಳಿ, ಸಂಗಪ್ಪ ಮೇಲಿನಮನಿ, ಶ್ರೀ ಶೈಲ ಪೂಜಾರಿ, ಎ.ಆರ್.ಮುಲ್ಲಾ, ಎಂ.ಎಂ.ಬೆಳಗಲ್ಲ ಸೇರಿದಂತೆ ಹಲವರು ಇದ್ದರು.