ಸಾರ್ವಜನಿಕ ಸ್ಥಳಗಳಲ್ಲಿ ನಾಯಿ ಮರಿಗಳನ್ನು ತಂದು ಬಿಟ್ಟರೆ ನಗರಸಭೆ ಶಿಸ್ತು ಕ್ರಮ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ, ಕಾಟ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಉಡುಪಿ ನಗರಸಭಾ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.ಮುಖ್ಯವಾಗಿ ನಗರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಶ್ವಾನಪ್ರಿಯರು ಬೀದಿನಾಯಿಗಳಿಗೆ ಆಹಾರ ಕೊಡುತ್ತಿರುವ ಬಗ್ಗೆ ದೂರು ಬಂದಿದ್ದು, ಅನಧಿಕೃತವಾಗಿ ರಸ್ತೆಯ ಚರಂಡಿಗಳ ಮೇಲೆ, ಶಾಲಾ ವಠಾರದಲ್ಲಿ, ಜನ ನಿಬಿಡ ಪ್ರದೇಶಗಳಲ್ಲಿ, ಬಸ್ ನಿಲ್ದಾಣ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಾರ್ವಜನಿಕರು ಆಹಾರ ಹಾಕುವುದನ್ನು ನಿಷೇಧಿಸಲಾಗಿದೆ.ನಗರಸಭೆಯಿಂದ ಈಗಾಗಲೇ ಪ್ರಾಥಮಿಕ ಹಂತದಲ್ಲಿ ಬೀಡಿನ ಗುಡ್ಡೆ ಹಿಂದೂ ರುದ್ರಭೂಮಿ ಎದುರುಗಡೆ, ಆದಿ ಉಡುಪಿ ಮಾರುಕಟ್ಟೆ ಹಿಂಬದಿ, ಇಂದ್ರಾಳಿ ಹಿಂದೂ ರುದ್ರಭೂಮಿ ಎದುರುಗಡೆ, ಪರ್ಕಳ ಸ್ವಾಗತ ಗೋಪುರದ ಹತ್ತಿರ, ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕದ ಎದುರುಗಡೆ, ಪೆರಂಪಳ್ಳಿ ಮುಖ್ಯ ರಸ್ತೆಯ ಭಾರತೀಯ ವಿಕಾಸ ಟ್ರಸ್ಟ್ ಕೆಳಗಡೆ, ರಾಜ್ ಫಿಶ್ ಮಿಲ್ ಹತ್ತಿರ, ಆದಿ ಉಡುಪಿ ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ, ಕಕ್ಕುಂಜೆ ನಾರಾಯಣ ನಗರ ಹೋಗುವ ರಸ್ತೆಯ ತಿರುವು ಬಳಿ ಹಾಗೂ ಬೈಲೂರು ಹನುಮಾನ್ ಗ್ಯಾರೇಜ್ ಡಯಾನ ರಸ್ತೆ ವಿಜಯ ವೀರ ಸಂಘದ ಹತ್ತಿರ ನಿಯಮಾನುಸಾರ ಷರತ್ತು ವಿಧಿಸಿ, ಬೀದಿ ನಾಯಿಗಳಿಗೆ ಆಹಾರ ಹಾಕಲು ಅನುಮತಿಯನ್ನು ನೀಡಲು ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಮಾತ್ರ ಆಹಾರವನ್ನು ಹಾಕಬಹುದಾಗಿದೆ.ಬೇರೆ ಯಾವುದೇ ಸ್ಥಳದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಲು ಸಾರ್ವಜನಿಕರು ಮುಂದೆ ಬಂದಲ್ಲಿ ನಗರಸಭಾ ಕಚೇರಿಗೆ ಲಿಖಿತ ಮೂಲಕ ಮನವಿ ಸಲ್ಲಿಸಬೇಕು. ಆಹಾರವನ್ನು ಹಾಕುವವರೂ ನಗರಸಭೆಯಿಂದ ಗುರುತಿನ ಚೀಟಿ ಪಡೆದುಕೊಳ್ಳಬೇಕು.ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಅಂತಹ ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕು. ಮನೆಗಳಲ್ಲಿ ನಾಯಿಯ ಮರಿಗಳನ್ನು ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ತಂದು ಬಿಡುತ್ತಿರುವುದು ಕಂಡು ಬಂದಿದ್ದು, ಇದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕು. ಜೊತೆಗೆ ಸಾಕು ನಾಯಿಗಳಿಗೆ ಬೆಲ್ಟ್ ಅಳವಡಿಸಬೇಕು.
ಸಾಕು ನಾಯಿಗೆ ಅಥವಾ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತಂದು ಬಿಟ್ಟಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.