ಕನ್ನಡಪ್ರಭ ವಾರ್ತೆ ಉಡುಪಿ
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿಯಲ್ಲಿ ನ್ಯಾಯಾಲಯದ ಆದೇಶವನ್ನೂ ಮೀರಿ ಅನಧಿಕೃತ ಕಟ್ಟಡದಲ್ಲಿ ಘನ ತ್ಯಾಜ್ಯ ಘಟಕವನ್ನು ಉದ್ಘಾಟಿಸಲಾಗಿದೆ. ಇದರಿಂದ ಸುಮಾರು 1.80 ಕೋಟಿ ರು.ಗೂ ಮಿಕ್ಕಿ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ ಪೂಜಾರಿ ಪಾರಂಪಳ್ಳಿ, ಸ್ಥಳೀಯರ 4-5 ವರ್ಷಗಳ ವಿರೋಧದ ನಡುವೆಯೇ ಕಳೆದ ವಾರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಘಟಕವನ್ನು ಉದ್ಘಾಟಿಸಿದ್ದಾರೆ ಎಂದು ಆರೋಪಿಸಿದರು.ಈ ಘಟಕ ಸ್ಥಾಪಿಸಿರುವ 104- 24, 25 ಸರ್ವೆ ನಂಬರ್ ಭೂಪರಿವರ್ತನೆಯಾಗಿಲ್ಲ, ಇ ಖಾತಾವೂ ಆಗಿಲ್ಲ. ಆದರೂ ಸಾಲಿಗ್ರಾಮ ಪ.ಪಂ. ಈ ಭೂಮಿಯನ್ನು ಖರೀದಿಸಿದ್ದು, ಭೂಕಂದಾಯ ಕಾಯ್ದೆ 1964ರಡಿ ಅಕ್ರಮವಾಗಿದೆ. ಈ ಘಟಕವು ನದಿ ಪಕ್ಕದಿಂದ 50 ಮೀ. ವ್ಯಾಪ್ತಿಯೊಳಗಿದ್ದು, ಸಿಆರ್‌ಝಡ್ ನಿಮಯ ಉಲ್ಲಂಘನೆಯಾಗಿದೆ. ಘಟಕಕ್ಕೆ ಸಿಆರ್‌ಝಡ್ ಅನುಮತಿ ಇಲ್ಲದೇ ನಿರ್ಮಿಸಿದ್ದು, ಕಾನೂನು ಪ್ರಕಾರ ಅಪರಾಧವಾಗಿದೆ. ಈ ಜಮೀನಿಗೆ ತೆರಳುವ ರಸ್ತೆ ಕೂಡ ಪಂಚಾಯಿತಿ ಅಥವಾ ಸರ್ಕಾರಿ ರಸ್ತೆಯಲ್ಲ ಎಂದವರು ಆರೋಪಿಸಿದರು.2013ರಲ್ಲಿಯೇ ಜಿಲ್ಲಾಧಿಕಾರಿ ರೇಜು ಈ ಕಟ್ಟಡವನ್ನು ಅನಧಿಕೃತ ಎಂದು ಘೋಷಿಸಿದ್ದಾರೆ. ಈ ಕಟ್ಟಡವನ್ನು ಕಾನೂನುಬಾಹಿರ ಎಂದು ಕುಂದಾಪುರ ಜೆಎಂಸಿ ನ್ಯಾಯಾಲಯ ತೀರ್ಪು ನೀಡಿ, ಮಾಲಕನಿಗೆ 15 ಸಾವಿರ ರು. ದಂಡ ವಿಧಿಸಿದೆ. ಈ ಘಟಕ ಸ್ಥಾಪನೆಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಪರವಾನಗಿ ಪಡೆಯಲಾಗಿಲ್ಲ, ಈ ಸರ್ವೆ ನಂಬರಿನ ಭೂಮಿ ಖರೀದಿಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದವರು ದಾಖಲೆಗಳನ್ನು ಬಿಡುಗಡೆ ಮಾಡಿದರು.ಹೋರಾಟಗಾರ ನಾಗೇಂದ್ರ ಪುತ್ರನ್, ಸ್ಥಳೀಯರಾದ ಅಶೋಕ್ ಪೂಜಾರಿ, ಗಣಪತಿ, ಗಣೇಶ ಸಾಲಿಗ್ರಾಮ ಸುದ್ದಿಗೋಷ್ಠಿಯಲ್ಲಿದ್ದರು.