- ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ : ಭೂ ಸಂತ್ರಸ್ತರ ಅಳಲು
- ಮೋಸ ಮಾಡಿ ಜಮೀನು ಪಡೆದ ಸರ್ಕಾರ: ರೈತರ ಆರೋಪ
-ಕನ್ನಡಪ್ರಭ ಸರಣಿ ವರದಿ ಭಾಗ - 15ಆನಂದ್ ಎಂ. ಸೌದಿ
"ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡಿದರೆ ನಮಗೆಲ್ಲ ಉದ್ಯೋಗದ ಭರವಸೆ ನೀಡಲಾಗಿತ್ತು. ನೀವು ಅಥವಾ ನಿಮ್ಮ ಮಕ್ಕಳಿಗೆ ಗಾರ್ಮೆಂಟ್ಸ್ ಕಂಪನಿಗಳಲ್ಲಿ ಕೆಲಸ, ಒಳ್ಳೆ ಪಗಾರ ಕೊಡಲಾಗುತ್ತದೆ ಎಂದು ನಮ್ಮನ್ನು ನಂಬಿಸಿ, ನಮ್ಮ ಫಲವತ್ತಾದ ಜಮೀನುಗಳನ್ನು ಕೊಟ್ಟು ಮೋಸ ಹೋದ್ವಿ. ಸದ್ಯಕ್ಕೆ, ಇಲ್ಲಿನ ವಾತಾವರಣ ನೋಡಿದರೆ, ಇಲ್ಲಿರೋ ಕಂಪನಿಗಳಲ್ಲಿ ನೌಕ್ರಿ ಮಾಡೋದು ಹ್ಯಾಂಗರ ಇರಲಿ, ನಮ್ಮೂರಾಗ ನಾವು ಬದುಕಿದರೆ ಸಾಕು ಅನ್ನೋ ಹಂಗಾಗೇದ... "
ಉದ್ಯೋಗ, ಮಕ್ಕಳ ಭವಿಷ್ಯ, ಆರೋಗ್ಯ-ಶಿಕ್ಷಣದ ಭದ್ರತೆ ಮುಂತಾದವುಗಳು ಕೈಗೆಟುಕಿ, ಜೀವನ ಸರಿಯಾಗಬಹುದು ಎಂದು ನಂಬಿದ್ದ ಇಲ್ಲಿನ ಜನರು, ಭರವಸೆಗಳ ಈಡೇರದಿರಲಿ, ಬದುಕು ಸಾಗಿಸಲೂ ಈಗಿಲ್ಲಿ ಬೆಚ್ಚಿ ಬೀಳುವಂತಾಗಿದೆ. ಮೊದಲಿಗೆ ಆರಂಭಗೊಂಡ ರೈಲು ಗಾಲಿಗಳ ಅಚ್ಚು (ರೈಲ್ವೆ ಕೋಚ್) ತಯಾರಿಕಾ ಬೋಗಿ ಕಾರ್ಖಾನೆಯಂತೂ ಇವರ ನೆರಳೂ ಬೀಳದಂತೆ ನಿಗಾವಹಿಸುತ್ತಿದೆ. ಭೂ ಸಂತ್ರಸ್ತರ ಕುಟುಂಬಸ್ಥರಿಗೆ ನೀಡಬೇಕಾದ ಶೈಕ್ಷಣಿಕ ಆಧಾರದ ಮೇಲೆ ಇಲ್ಲಿ ನೀಡಬೇಕಿದ್ದ ಉದ್ಯೋಗ ಬೇರೆಯವರ ಪಾಲಾಗುತ್ತಿದೆ.
ಇನ್ನು, ಭೂಸ್ವಾಧೀನ ವೇಳೆ ಗಾರ್ಮೆಂಟ್ ಫ್ಯಾಕ್ಟರಿಯ ಬಗ್ಗೆ ಕಲ್ಪನೆ, ಭರವಸೆ, ಕನಸುಗಳನ್ನು ಸರ್ಕಾರ ತೋರಿಸಿತ್ತು. ವಿಷಗಾಳಿ ಕಾರುವ ಕೆಮಿಕಲ್- ತ್ಯಾಜ್ಯ ಕಂಪನಿಗಳನ್ನು ಇಲ್ಲಿ ಸ್ಥಾಪಿಸಲಾಗುತ್ತದೆ ಎಂಬುದು ಮೊದಲೇ ಗೊತ್ತಿದ್ದರೆ ನಾವ್ಯಾರೂ ಇಲ್ಲಿನ ಭೂಮಿ ನೀಡುತ್ತಿರಲಿಲ್ಲ ಎನ್ನುವ ಕಡೇಚೂರಿನ ಶರಣಪ್ಪ, ಕೆಮಿಕಲ್ ಕಂಪನಿಗಳಲ್ಲೂ ನಮಗೆ ವಾಚ್ಮೆನ್ ಕೆಲಸ ಸಿಗೋಲ್ಲ. ಅಲ್ಲಿನ ಒಳಗುಟ್ಟು ರಟ್ಟಾದೀತೆಂಬ ಕಾರಣಕ್ಕೆ ಸ್ಥಳೀಯರನ್ನು ಅಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಕೊಟ್ಟರೂ, ಭಾರಿ ದುರ್ನಾತ ಹಾಗೂ ಕೆಮಿಕಲ್ ಘಾಟಿನ ವಿಭಾಗಕ್ಕೆ ಕಳುಹಿಸುತ್ತಾರೆ. ಸಹಜವಾಗಿ ಇದು ಸರಿಹೊಂದದ ಕಾರಣ, ಬದುಕಿದರೆ ಸಾಕು ಎಂಬ ಕಾರಣಕ್ಕೆ ನಮ್ಮವರು ನೌಕರಿ ಬಿಟ್ಟು ಹೊರಬರುತ್ತಾರೆ ಎಂದು ಕಂಪನಿಗಳ ಮರ್ಮ ಹೊರಹಾಕಿದರು.
22ವೈಡಿಆರ್1:ಯಾದಗಿರಿ ರೈಲ್ವೆ ಕೋಚ್ ಫ್ಯಾಕ್ಟರಿ ನೋಟ.