ತ್ರಿಚಕ್ರ ವಾಹನ ಕೊಟ್ಟು ಪುಣ್ಯಕಟ್ಕೊಳ್ಳಿ..!

KannadaprabhaNewsNetwork | Published : Nov 16, 2024 12:33 AM

ಸಾರಾಂಶ

ಸಾರ್‌, ನಾವು ಮೂವರು ಐಸ್‌ಕ್ರೀಂ ಮಾರಿ ಜೀವನ ಸಾಗಿಸುತ್ತೇವೆ. ಈಗ್ಗೆ ನಾಲ್ಕೈದು ತಿಂಗಳ ಹಿಂದೆ ಸಚಿವರನ್ನು ಭೇಟಿ ಮಾಡಿ ಅಂಗವಿಕಲರಿಗೆ ಕೊಡುವ ತ್ರಿಚಕ್ರ ವಾಹನ ಕೊಡುವಂತೆ ಮನವಿ ಮಾಡಿದ್ದೇವು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ತ್ರಿಚಕ್ರ ವಾಹನ ಕೊಟ್ಟು ಪುಣ್ಯ ಕಟ್ಕೊಳ್ಳಿ.. ಸ್ವಾವಲಂಬಿ ಬದುಕಿಗೆ ನೆರವಾಗಿ...

ಇದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರನ್ನು ಭೇಟಿಯಾಗಲು ಬಂದಿದ್ದ ಮೂವರು ಅಂಗವಿಕಲರ ಅಳಲು. ಆದರೆ, ಈ ಕೂಗು ಮಾತ್ರ ಸಚಿವರಿಗೆ ಕೇಳಲೇ ಇಲ್ಲ!

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆಯಿತ್ತು. ಅದರಲ್ಲಿ ಪಾಲ್ಗೊಳ್ಳಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಾಡ್‌ ಸರ್ಕ್ಯೂಟ್‌ ಹೌಸ್‌ನಿಂದ ಸಾರಿಗೆ ಬಸ್‌ನಲ್ಲಿ ತೆರಳುವವರಿದ್ದರು. ಅಲ್ಲಿ ಲಾಡ್‌ ಅವರನ್ನು ಭೇಟಿಯಾಗಲೆಂದು ನಗರದ ಎಸ್‌.ಎಂ. ಕೃಷ್ಣನಗರದ ಇರ್ಫಾನ್‌ ನಜೀರ್‌ ಅಹ್ಮದ್‌ ಚಂದನಮಟ್ಟಿ, ಜಾಹೀರಖಾನ್ ಪಠಾಣ, ಸದರಸೋಫಾದ ಮಹ್ಮದಗೌಸ್‌ ಹುಲಬಂದಿ ಎಂಬ ಅಂಗವಿಕಲರು ಬಂದಿದ್ದರು.

ನಡೆಯಲು ಬಾರದ ಇವರು ಪ್ರವಾಸಿ ಮಂದಿರದ ಪ್ರಾಂಗಣದ ಹೊರಗೆ ಒಂದು ಮೂಲೆಯಲ್ಲಿ ಸಚಿವರು ಹೊರಬರುವುದನ್ನು ಕಾಯುತ್ತಾ 1 ಗಂಟೆಗೂ ಹೆಚ್ಚು ಕಾಲ ಕುಳಿತಿದ್ದರು.

ಬಳಿಕ ಸಚಿವರು ಪತ್ರಿಕಾಗೋಷ್ಠಿ, ಅಧಿಕಾರಿಗಳೊಂದಿಗೆ ಚರ್ಚೆ ಮುಗಿಸಿ ಹೊರಬಂದರು. ಆದರೆ, ಸಚಿವರ ಸುತ್ತಲು ಹಿಂಬಾಲಕರ ದಂಡು ದೊಡ್ಡದಾಗಿಯೇ ಇತ್ತು. ಜತೆಗೆ ಅಧಿಕಾರಿಗಳು ಗುಂಪು ಇತ್ತು. ಇವರು ಮೂಲೆಯಲ್ಲಿ ಕುಳಿತಿರುವುದು ಸಚಿವರಿಗೆ ಕಾಣಿಸಲಿಲ್ಲ. ಮೂವರು ಅಂಗವಿಕಲರು ಸಾರ್‌ ಸಾರ್‌ ಎಂದು ಕೂಗಿ ತಮ್ಮ ಕಥೆಯನ್ನು ಹೇಳಬೇಕು ಎಂದು ಹಂಬಲಿಸುತ್ತಿದ್ದರು. ಆದರೆ, ಸಚಿವರ ಸುತ್ತಲಿದ್ದವರ ಗದ್ದಲವೇ ಜಾಸ್ತಿ ಇದ್ದುದ್ದರಿಂದ ಇವರ ಧ್ವನಿ ಸಚಿವರ ಕಿವಿಗೆ ಮುಟ್ಟಲೇ ಇಲ್ಲ.

ಸಚಿವರು ಸೇರಿದಂತೆ ಎಲ್ಲರೂ ಹೋದ ಬಳಿಕ ''''ಕನ್ನಡಪ್ರಭ'''' ಎದುರು ತಮ್ಮ ಗೋಳಿನ ಕಥೆ ಹೇಳಿಕೊಂಡರು.

ಸಾರ್‌, ನಾವು ಮೂವರು ಐಸ್‌ಕ್ರೀಂ ಮಾರಿ ಜೀವನ ಸಾಗಿಸುತ್ತೇವೆ. ಈಗ್ಗೆ ನಾಲ್ಕೈದು ತಿಂಗಳ ಹಿಂದೆ ಸಚಿವರನ್ನು ಭೇಟಿ ಮಾಡಿ ಅಂಗವಿಕಲರಿಗೆ ಕೊಡುವ ತ್ರಿಚಕ್ರ ವಾಹನ ಕೊಡುವಂತೆ ಮನವಿ ಮಾಡಿದ್ದೇವು. ಲಾಡ್‌ ಸಾಹೇಬ್ರು ಕೂಡ ಆಗ ಅಧಿಕಾರಿಗಳು, ತಮ್ಮ ಆಪ್ತ ಸಹಾಯಕರನ್ನು ಕರೆದು ಇವರಿಗೆ ತ್ರಿಚಕ್ರ ವಾಹನ ಕೊಡುವಂತೆ ಹೇಳಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಅರ್ಜಿಯನ್ನೂ ಅಂಗವಿಕಲ ಕಲ್ಯಾಣ ಇಲಾಖೆಗೆ ಆನ್‌ಲೈನ್‌ನಲ್ಲೇ ಹಾಕಿದ್ದೇವೆ. ಆದರೂ ಈ ವರೆಗೂ ನಮಗೆ ತ್ರಿಚಕ್ರ ವಾಹನ ಸಂಬಂಧಪಟ್ಟ ಇಲಾಖೆ ಕೊಟ್ಟಿಲ್ಲ. ಅದನ್ನೇ ಲಾಡ್‌ ಸಾಹೇಬ್ರರಿಗೆ ತಿಳಿಸಬೇಕೆಂದು ಬಂದಿದ್ದೇವು. ಆದರೆ ಈ ಗದ್ದಲದ ನಡುವೆ ಅವರಿಗೆ ನಾವು ಹೇಳಿದ್ದು ಕೇಳಲೇ ಇಲ್ಲ ಎಂದು ಇರ್ಫಾನ್‌ ತನ್ನ ಗೋಳನ್ನು ಹೇಳಿಕೊಂಡರು.

ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಲೇ ಇಲ್ಲ. ಲಾಡ್‌ ಸಾಹೇಬ್ರರನ್ನು ಭೇಟಿಯಾಗಬೇಕೆಂದ್ರೆ ನಮಗೆ ನಿಲ್ಲಾಕೂ ಬರಂಗಿಲ್ಲ. ಅವರ ಸುತ್ತಲು ಬರೀ ಹಿಂಬಾಲಕರೇ ಇರುವುದರಿಂದ ಒಂದು ಕಡೆ ಕುಳಿತಿರುವ ನಾವು ಅವರ ಕಣ್ಣಿಗೆ ಕಾಣಿಸುತ್ತಿಲ್ಲ. ಲಾಡ್‌ ಸಾಹೇಬ್ರನ್ನು ಹ್ಯಾಂಗ್‌ ಭೇಟಿಯಾಗಬೇಕೋ ಗೊತ್ತಾಗವಲ್ತು ಎಂದು ನೊಂದು ನುಡಿಯುತ್ತಾರೆ ಜಾಹೀರಖಾನ್‌.

ಅಂಗವಿಕಲತೆ ಇದ್ದರೂ ಸ್ವಾವಲಂಬಿತರಾಗಿ ಬದುಕುತ್ತಿರುವ ಈ ಮೂವರಿಗೆ ಸಚಿವರು ನೆರವು ನೀಡಬೇಕೆಂಬುದು ಅಲ್ಲಿದ್ದ ಪ್ರಜ್ಞಾವಂತರದ್ದು ಆಗ್ರಹವಾಗಿತ್ತು.

ಈಗಲೂ ಐಸ್‌ಕ್ರೀಂ ಮಾರಾಟ ಮಾಡಿ ಬದುಕು ಸಾಗಿಸುತ್ತೇವೆ. ಸ್ವಂತ ತ್ರಿಚಕ್ರ ವಾಹನ ಕೊಡಿಸಿದರೆ ನಿಶ್ಚಿಂತೆಯಿಂದ ಐಸ್‌ಕ್ರೀಂ ಮಾರಾಟ ಮಾಡುತ್ತೇವೆ. ಸಂಬಂಧಪಟ್ಟ ಇಲಾಖೆಗೆ ಅರ್ಜಿ ಹಾಕಿದ್ದೇವೆ. ಆದರೆ ಈ ವರೆಗೂ ಸಿಕ್ಕಿಲ್ಲ. ಆದಷ್ಟು ಬೇಗನೆ ಕೊಡಿಸಿ. ಪುಣ್ಯ ಕಟ್ಕೊಳ್ಳಿ.. ಇಷ್ಟೇ ನಮ್ಮ ಬೇಡಿಕೆ ಎಂದು ಇರ್ಫಾನ ನಜೀರಅಹ್ಮದ ಚಂದನಮಟ್ಟಿ ಹೇಳಿದರು.

Share this article