ಕನ್ನಡಪ್ರಭ ವಾರ್ತೆ ಮದ್ದೂರು
ಕೆಆರ್ ಎಸ್ ಅಣೆಕಟ್ಟೆಯಿಂದ ತಾಲೂಕಿನ ಕೆರೆ- ಕಟ್ಟೆಗಳನ್ನು ತುಂಬಿಸಿ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಗೃಹ ಸಚಿವ ಜಿ.ಪರಮೇಶ್ವರ್ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಸೂಚನೆ ನೀಡಿದರು.ತಾಲೂಕಿನ ಮಾಲಗಾರನಹಳ್ಳಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ನಿವಾಸಕ್ಕೆ ಗೃಹಸಚಿವರು ಭೇಟಿ ನೀಡಿದ್ದ ವೇಳೆ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದ ಬಗ್ಗೆ ರೈತರು ಅಳಲು ತೋಡಿಕೊಂಡರು.
ಕಳೆದ 2 ವರ್ಷಗಳಿಂದ ಕಾಡಿದ ಬರಗಾಲದಿಂದಾಗಿ ಬೆಳೆ ಬೆಳೆಯಲಾಗದೆ ಬ್ಯಾಂಕ್ ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳ ಸಾಲ ತೀರಿಸಲಾಗದೆ ತೀವ್ರ ಸಂಕಷ್ಟಕ್ಕೆ ಒಳಾಗಿದ್ದೇವೆ. ಈ ಪರಿಸ್ಥಿತಿಯಲ್ಲಿ ತುಂಬಿರುವ ಕೆಆರ್ ಎಸ್ ಜಲಾಶಯದಿಂದ ತಾಲೂಕಿನ ಕೆರೆ,ಕಟ್ಟೆಗಳನ್ನು ತುಂಬಿಸಿ ಕೊನೆಭಾಗದ ಜಮೀನುಗಳಿಗೆ ನೀರು ಹರಿಸುವಲ್ಲಿ ಜನಪ್ರತಿನಿಧಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.ಮಾಲಗಾರನಹಳ್ಳಿ, ನಗರಕೆರೆ, ಚನ್ನಸಂದ್ರ, ಹುಲಿಗೆರೆಪುರ, ಉಪ್ಪಿನಕೆರೆ, ಸೋಂಪುರ ಸೇರಿದಂತೆ ಕೊನೆಭಾಗದ ಜಮೀನುಗಳಿಗೆ ನೀರು ಹರಿದು ಹೋಗುತ್ತಿಲ್ಲ. ಬೆಳೆ ಬೆಳೆಯಲು ನೀರಿನ ಸಮಸ್ಯೆ ಎದುರಾಗಿದೆ ಎಂದು ರೈತರು ಸಚಿವ ಪರಮೇಶ್ವರ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
ನಂತರ ಸಚಿವರು ಸ್ಥಳದಿಂದಲೇ ದೂರವಾಣಿ ಮೂಲಕ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಕೂಡಲೇ ಮದ್ದೂರು ಕೆರೆಗೆ ನೀರು ತುಂಬಿಸಿ ಕೊನೆ ಭಾಗದ ಜಮೀನುಗಳಿಗೆ ಬೆಳೆ ಬೆಳೆಯಲು ಅನುಕೂಲವಾಗುವಂತೆ ನೀರು ಹರಿಸಬೇಕು ಎಂದು ತಾಕೀತು ಮಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಕೆ.ಎಂ.ಉದಯ್ ಅವರನ್ನು ದೂರವಾಣಿ ಮೂಲಕ ಸಂರ್ಪಕಿಸಿದ ಸಚಿವರು, ರೈತರ ಸಮಸ್ಯೆ ಬಗ್ಗೆ ಕ್ರಮ ಕೈಗೊಂಡು ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸುವ ಬಗ್ಗೆ ತಾವು ಉಸ್ತುವಾರಿ ವಹಿಸುವಂತೆ ಸಲಹೆ ನೀಡಿದರು.
ಗ್ರಾಪಂ ಸದಸ್ಯರಾದ ರವಿ, ಚನ್ನಯ್ಯ, ಮುಖಂಡರಾದ ಸುರೇಶ್, ಅಭಿ, ಸೋಮಶೇಖರಗೌಡ, ಹುಚ್ಚೇಗೌಡ, ನಾರಾಯಣ ಹಾಗೂ ನಾಲಾ ಕೊನೆ ಭಾಗದ ನೂರಾರು ರೈತರು ಇದ್ದರು.