ಅಹಿಂದ, ಪಂಚಮಸಾಲಿಗೆ ದಕ್ಷಿಣದ ಟಿಕೆಟ್‌ ನೀಡಿ: ಅಬ್ದುಲ್ ಜಬ್ಬಾರ್

KannadaprabhaNewsNetwork |  
Published : Jan 11, 2026, 01:30 AM IST
10ಕೆಡಿವಿಜಿ4, 5-ದಾವಣಗೆರೆಯಲ್ಲಿ ಶನಿವಾರ ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ, ಲೋಕಿಕೆರೆ ಸಿದ್ದಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಲ್ಪಸಂಖ್ಯಾತ ಮುಸ್ಲಿಂ, ಅಹಿಂದ ವರ್ಗದವರಿಗೆ ಟಿಕೆಟ್ ನೀಡುವ ಮೂಲಕ ಅಹಿಂದಕ್ಕೆ ಪ್ರಾತಿನಿಧ್ಯ ನೀಡಿ, ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಅಹಿಂದ ನಾಯಕರು ಕೆಪಿಸಿಸಿಗೆ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಲ್ಪಸಂಖ್ಯಾತ ಮುಸ್ಲಿಂ, ಅಹಿಂದ ವರ್ಗದವರಿಗೆ ಟಿಕೆಟ್ ನೀಡುವ ಮೂಲಕ ಅಹಿಂದಕ್ಕೆ ಪ್ರಾತಿನಿಧ್ಯ ನೀಡಿ, ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಅಹಿಂದ ನಾಯಕರು ಕೆಪಿಸಿಸಿಗೆ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್, ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗ ದಕ್ಷಿಣ ಕ್ಷೇತ್ರಕ್ಕೆ ಅಹಿಂದ ವರ್ಗಕ್ಕೆ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್‌, ರಾಜ್ಯ ನಾಯಕರಿಗೆ ಒತ್ತಾಯಿಸಿದ್ದೇವೆ ಎಂದರು.

ದಕ್ಷಿಣದಲ್ಲಿ ಶೇ.82ರಿಂದ 85 ಅಹಿಂದ ವರ್ಗದ ಮತದಾರರಿದ್ದಾರೆ. ಅಹಿಂದವೇ ಬಹುಸಂಖ್ಯಾತವಾದ ಕ್ಷೇತ್ರವಾಗಿದ್ದರೂ ಹಿರಿಯರು, ಜಾತ್ಯತೀತ ವ್ಯಕ್ತಿತ್ವದ ಶಾಮನೂರು ಶಿವಶಂಕರಪ್ಪನವರಿಗೆ ನಾವೆಲ್ಲರೂ ಬೆಂಬಲಿಸುತ್ತಾ ಬಂದಿದ್ದೇವೆ. ಶಾಮನೂರು ನಮ್ಮೆಲ್ಲರ ಹಿರಿಯ ನಾಯಕರಾಗಿದ್ದರು. ಈಗ ಎಸ್ಸೆಸ್‌ರ ನಿಧನದಿಂದ ಕ್ಷೇತ್ರವು ಖಾಲಿಯಾಗಿದೆ. ಕುರುಬರು, ನಾಯಕರು, ಪಂಚಮಸಾಲಿ ಲಿಂಗಾಯತ, ಮರಾಠರು, ಅಲ್ಪಸಂಖ್ಯಾತರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಇದೇ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಹೇಳಿದರು.

ದಾವಣಗೆರೆ ಲೋಕಸಭೆ, ದಾವಣಗೆರೆ ಉತ್ತರ, ಹೊನ್ನಾಳಿ, ಚನ್ನಗಿರಿ ಕ್ಷೇತ್ರಗಳಲ್ಲಿ ಒಂದೇ ಜಾತಿಯವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಪರಿಶಿಷ್ಟ ಮೀಸಲು ಕ್ಷೇತ್ರಗಳಲ್ಲಿ ಆಯಾ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಅಲ್ಪಸಂಖ್ಯಾತರು, ಹಿಂದು‍‍ಳಿದ ವರ್ಗಗಳು, ಅಲ್ಪಸಂಖ್ಯಾತರು, ಪಂಚಮಸಾಲಿಗಳು ವಿಧಾನಸಭೆಯಲ್ಲಿ ಕುಳಿತುಕೊಳ್ಳಲು ಅವಕಾಶವನ್ನೇ ಕಾಂಗ್ರೆಸ್ ಪಕ್ಷವು ನೀಡಿಲ್ಲ ಎಂದು ತಿಳಿಸಿದರು.

ಅವಿಭಜಿತ ದಾವಣಗೆರೆ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಿಂದ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಾ ಬಂದಿದ್ದಾರೆ. 2008ರಲ್ಲಿ ಉತ್ತರ-ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಎಸ್ಸೆಸ್ ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಸ್ಪರ್ಧಿಸಿದ್ದಾರೆ. ದಕ್ಷಿಣದಿಂದ ಸತತವಾಗಿ ಶಾಮನೂರು ಗೆದ್ದು ಬಂದ ಸಾಧನೆ ಹೊಂದಿದ್ದಾರೆ. ಹಾಗಾಗಿ ಉಪ ಚುನಾವಣೆಯಲ್ಲಿ ಅಹಿಂದ ವರ್ಗಗಳ ಪೈಕಿ ಯಾರಿಗಾದರೂ ಅಥವಾ ಪಂಚಮಸಾಲಿ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮೆಲ್ಲರ ಒತ್ತಾಯ ಎಂದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ನಾಲ್ಕೂವರೆ ದಶಕದಿಂದ ಹಳೆ ಭಾಗದಲ್ಲಿ ನಾವು ಪಕ್ಷದ ಸೇವೆ ಮಾಡಿದ್ದೇವೆ. ಶಾಮನೂರು ಕುಟುಂಬಕ್ಕಾಗಿ 25-30 ಚುನಾವಣೆ ಕೆಲಸ ಮಾಡಿದ್ದೇವೆ. ಶಿವಶಂಕರಪ್ಪನವರು ಇರುವವರೆಗೂ ನಾವ್ಯಾರೂ ಟಿಕೆಟ್ ಕೇಳಲಿಲ್ಲ ಎಂದರು.

ಪಂಚಮಸಾಲಿ ಸಮಾಜದ ಮುಖಂಡ ಎಂ.ಟಿ.ಸುಭಾಶ್ಚಂದ್ರ ಮಾತನಾಡಿ, ದಕ್ಷಿಣದಲ್ಲಿ ಅಹಿಂದ ವರ್ಗ, ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾಗಿದೆ. ಪಕ್ಷದಲ್ಲಿ ಪ್ರಾಮಾಣಿಕವಾಗಿ ಗುರುತಿಸಿಕೊಂಡವರು, ಅಹಿಂದ ಕಟ್ಟಿದವರು ನಾವೆಲ್ಲಾ. ದಕ್ಷಿಣ ಕ್ಷೇತ್ರದಲ್ಲಿ ಈ ಸಲ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಬೇಕು. ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದರು.

ನಾಯಕ ಸಮಾಜದ ಮುಖಂಡ, ಹಿರಿಯ ವಕೀಲ ಎನ್.ಎಂ.ಆಂಜನೇಯ ಗುರೂಜಿ, ಮುಸ್ಲಿಂ ಮುಖಂಡರಾದ ಎಜಾಜ್ ಅಹಮ್ಮದ್‌, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಕುರುಬ ಸಮಾಜದ ಮುಖಂಡ, ಹಿರಿಯ ವಕೀಲ ಲೋಕಿಕೆರೆ ಸಿದ್ದಪ್ಪ, ಜೆ.ವೀರಭದ್ರಪ್ಪ, ಅಬ್ದುಲ್ ಘನಿ, ಹೊನ್ನಾಳಿ ಸಿದ್ದಣ್ಣ, ಕಡತಿ ತಿಪ್ಪೇಶ, ಸಂತೋಷ, ಎಸ್‌.ಕೆ.ಎಜಾಜ್, ಷಹನವಾಜ್ ಖಾನ್, ಸುರೇಶ, ರಂಗಣ್ಣ ತುಂಬಿಗೆರೆ, ಕೃಷ್ಣ ನಾಯ್ಕ, ಸಂತೋಷ ನಾಯ್ಕ, ಸುರೇಶ ಕೊಡಗನೂರು, ಕೆಟಿಜೆ ನಗರ ಅಬ್ದುಲ್ ಜಬ್ಬಾರ್ ಇತರರು ಇದ್ದರು.

ಎಸ್ಸೆಸ್ ಇದ್ದಿದ್ದರೆ ಟಿಕೆಟ್ ಕೇಳ್ತಿರಲಿಲ್ಲ

ಶಾಮನೂರು ಶಿವಶಂಕರಪ್ಪನವರು ಇದ್ದಿದ್ದರೆ, ಆರೋಗ್ಯವಾಗಿದ್ದಿದ್ದರೆ 2028ರ ಚುನಾವಣೆಯಲ್ಲೂ ನಾವ್ಯಾರೂ ಟಿಕೆಟ್ ಕೇಳುತ್ತಿರಲಿಲ್ಲ. ಈಗ ಎಸ್ಸೆಸ್‌ರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಸ್ಪರ್ಧಿಸಲು ಮುಸ್ಲಿಂ, ನಾಯಕ, ಪಂಚಮಸಾಲಿ, ಕುರುಬ ಹೀಗೆ ಅಹಿಂದ ವರ್ಗದ ಯಾರಿಗೆ ಅವಕಾಶ ನೀಡಿದರೂ ನಾವು ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತೇವೆ. ಶೇ.99ರಷ್ಟು ನಮ್ಮ ಬೇಡಿಕೆಗೆ ಸ್ಪಂದಿಸಿ, ಕೆಪಿಸಿಸಿ, ಎಐಸಿಸಿ ನಾಯಕರು ಅಹಿಂದ ವರ್ಗಕ್ಕೆ ಟಿಕೆಟ್ ನೀಡುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ಅಬ್ದುಲ್‌ ಜಬ್ಬಾರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ