ಕಬ್ಬು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಿ

KannadaprabhaNewsNetwork |  
Published : May 22, 2024, 12:50 AM IST
21ಕೆಡಿವಿಜಿ8, 9-ದಾವಣಗೆರೆಯಲ್ಲಿ ಕಬ್ಬು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ರಿಗೆ ತೇಜಸ್ವಿ ಪಟೇಲ್, ಬಿ.ಎಂ.ಸತೀಶ, ಅಭಿಜಿತ್ ಜಿ.ಶಾಮನೂರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಭದ್ರಾ ಕಾಡಾ ಸಮಿತಿಯ ಅವೈಜ್ಞಾನಿಕ ವೇಳಾಪಟ್ಟಿ, ಅಂತರ್ಜಲ ಕುಸಿತ, ಉಷ್ಣ ಹವೆಯಿಂದಾಗಿ ದಾವಣಗೆರೆ ಸಕ್ಕರೆ ಕಂಪನಿ ನಿಯಮಿತದ ವ್ಯಾಪ್ತಿಯಲ್ಲಿ ಸುಮಾರು 2070 ಎಕರೆ ಕಬ್ಬಿನ ಬೆಳೆ ಸಂಪೂರ್ಣ ಒಣಗಿ ನಾಶವಾಗಿದೆ. ಈ ಹಿನ್ನೆಲೆ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕುಕ್ಕವಾಡ ಗ್ರಾಮದ ದಾವಣಗೆರೆ ಸಕ್ಕರೆ ಕಂಪನಿ ನಿಯಮಿತ, ಜಿಲ್ಲಾ ರೈತರ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು.

- ತೇಜಸ್ವಿ ಪಟೇಲ್‌, ಅಭಿಜಿತ್ ಶಾಮನೂರು, ಬಿ.ಎಂ.ಸತೀಶ ನೇತೃತ್ವದಲ್ಲಿ ಮನವಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಭದ್ರಾ ಕಾಡಾ ಸಮಿತಿಯ ಅವೈಜ್ಞಾನಿಕ ವೇಳಾಪಟ್ಟಿ, ಅಂತರ್ಜಲ ಕುಸಿತ, ಉಷ್ಣ ಹವೆಯಿಂದಾಗಿ ದಾವಣಗೆರೆ ಸಕ್ಕರೆ ಕಂಪನಿ ನಿಯಮಿತದ ವ್ಯಾಪ್ತಿಯಲ್ಲಿ ಸುಮಾರು 2070 ಎಕರೆ ಕಬ್ಬಿನ ಬೆಳೆ ಸಂಪೂರ್ಣ ಒಣಗಿ ನಾಶವಾಗಿದೆ. ಈ ಹಿನ್ನೆಲೆ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕುಕ್ಕವಾಡ ಗ್ರಾಮದ ದಾವಣಗೆರೆ ಸಕ್ಕರೆ ಕಂಪನಿ ನಿಯಮಿತ, ಜಿಲ್ಲಾ ರೈತರ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ, ಸಂಘದ ತೇಜಸ್ವಿ ವಿ.ಪಟೇಲ್‌, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಅಭಿಜಿತ್ ಗಣೇಶ ಶಾಮನೂರು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.

ತೀವ್ರ ಆರ್ಥಿಕ ಸಂಕಷ್ಟ:

ರೈತ ಮುಖಂಡರು ಮಾತನಾಡಿ, ಕಬ್ಬು ವಾರ್ಷಿಕ ಬೆಳೆಯಾಗಿದ್ದು, ರೈತರು ಕಳೆದ ವರ್ಷದ ಜೂನ್‌ನಿಂದ ನವೆಂಬರ್ ಅವಧಿಯಲ್ಲಿ ಕಬ್ಬಿನ ನಾಟಿ ಮಾಡಿದ್ದರು. ಸಾಕಷ್ಟು ಸಾಲ ಮಾಡಿ ರೈತರು ಬೆಳೆ ಬೆಳೆದಿದ್ದರು. ಕಬ್ಬು ಸಂಪೂರ್ಣ ಒಣಗಿಹೋಗಿ, ಗಣ್ಣು ಇಡುವುದಿಲ್ಲ. ಅದನ್ನು ಸುಟ್ಟು ಹೊಲ ಉಳುಮೆ ಮಾಡುವುದು ರೈತನಿಗೆ ಅನಿವಾರ್ಯ. ಆದ್ದರಿಂದ ರೈತ ಕಬ್ಬಿನ ಬೆಳೆ ಬೆಳೆಸಲು ಸುರಿದ ಬಂಡವಾಳದಲ್ಲಿ ನಯಾ ಪೈಸೆಯೂ ಸಿಗುವುದಿಲ್ಲ. ಹಾಗಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ಸಾಲದ ಕೂಪಕ್ಕೆ ಕಬ್ಬುರೈತ:

ದಾವಣಗೆರೆ ಸಕ್ಕರೆ ಕಂಪನಿ ನಿಯಮಿತದವರು ಬಿರು ಬಿಸಿಲಿನ ಬೇಗೆಗೆ ಒಣಗಿ ನಾಶವಾಗಿರುವ ಕಬ್ಬಿನ ಬೆಳೆ ಸಮೀಕ್ಷೆ ಮಾಡಿದ್ದಾರೆ. ಒಟ್ಟು 1069 ರೈತರ ಸುಮಾರು 2070 ಎಕರೆ ಕಬ್ಬಿನ ಬೆಳೆ ನಾಶವಾಗಿರುವ ವರದಿ ಇದೆ. 1 ಎಕರೆ ಕಬ್ಬಿನ ಬೆಳೆ ಬೆಳೆಯಲು ಸುಮಾರು ₹45,000 ಖರ್ಚಾಗುತ್ತದೆ. ಸಕ್ಕರೆ ಕಂಪನಿ ನಿಯಮಿತದವರು 1 ಎಕರೆಗೆ ₹29,200 ಸಾಲ ಕೊಟ್ಟಿದ್ದಾರೆ. ಕಬ್ಬು ಬೆಳೆದ ರೈತ ಸಾಲದ ಕೂಪಕ್ಕೆ ಸಿಲುಕಿದ್ದಾನೆ. ಈ ಹಿನ್ನೆಲೆ ಕಬ್ಬಿನ ಬೆಳೆ ಒಣಗಿ ನಾಶ ಆಗಿರುವುದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ಸಕ್ಕರೆ ಕಂಪನಿ ನಿಯಮಿತದ ಕಾರ್ಯನಿರ್ವಾಹಕ ನಿರ್ದೇಶಕ ಅಭಿಜಿತ್ ಜಿ. ಶಾಮನೂರು, ರೈತ ಒಕ್ಕೂಟದ ಬಿ.ಎಂ. ಸತೀಶ ಕೊಳೇನಹಳ್ಳಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಹದಡಿ ಜಿ.ಸಿ.ನಿಂಗಪ್ಪ, ಚಂದ್ರಶೇಖರ ಪೂಜಾರ, ಕುಕ್ಕುವಾಡದ ಡಿ.ಬಿ.ಶಂಕರ, ಡಿ.ಬಿ.ಅರವಿಂದ, ಕೆ.ಸಿ.ಉಮೇಶ, ಯು.ಸಿ.ನಾಗರಾಜ, ದೂಳಹೊಳೆ ವಾಗೀಶ ಮುಂತಾದವರು ಉಪಸ್ಥಿತರಿದ್ದರು.

- - - -21ಕೆಡಿವಿಜಿ8, 9:

ದಾವಣಗೆರೆಯಲ್ಲಿ ಕಬ್ಬು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ಅವರಿಗೆ ತೇಜಸ್ವಿ ಪಟೇಲ್, ಬಿ.ಎಂ.ಸತೀಶ, ಅಭಿಜಿತ್ ಜಿ. ಶಾಮನೂರು ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ