ಸಂಡೂರು: ಅಂಗವಿಕಲರಿಗೆ ಅವಕಾಶಗಳನ್ನು ಕಲ್ಪಿಸಿ, ಅವರ ಸಾಧನೆಗೆ ಸೂಕ್ತ ಸಹಕಾರ ಹಾಗೂ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಸಂಡೂರಿನ ಜೆಎಂಎಫ್ ನ್ಯಾಯಾಯಲಯದ ನ್ಯಾಯಾಧೀಶ ದೇವರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಶಿಶು ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ನಡೆದ ವಿಶ್ವ ಅಂಗವಿಕಲರ ಹಾಗೂ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಂಗವಿಕಲರು ಉತ್ತಮ ಸಾಧಕರಾಗಿದ್ದಾರೆ. ಅವರ ಘನತೆಗೆ ಚ್ಯುತಿ ಬಾರದ ಹಾಗೆ ನೋಡಿಕೊಳ್ಳಬೇಕಾಗಿದೆ. ನಮ್ಮ ಆಲೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಪಾಲಕರು ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲು ಶ್ರಮಿಸಬೇಕು ಎಂದರು.
ಮಾನವ ಹಕ್ಕುಗಳ ದಿನದ ಕುರಿತು ಉಪನ್ಯಾಸ ನೀಡಿದ ವಕೀಲರಾದ ಜಿ.ಕೆ. ರೇಖಾ, ಮಾನವ ಘನತೆ, ಗೌರವದಿಂದ ಶೋಷಣೆ ರಹಿತವಾಗಿ, ಸ್ವತಂತ್ರವಾಗಿ ಜೀವಿಸಲು ಅಗತ್ಯವಾದ ಎಲ್ಲ ರೀತಿಯ ಹಕ್ಕುಗಳನ್ನು ನೀಡಲಾಗಿದೆ. ಮಾನವ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.ವಕೀಲರಾದ ಎಚ್. ಕುಮಾರಸ್ವಾಮಿಯವರು ವಿಶ್ವ ಅಂಗವಿಕಲರ ದಿನದ ಮಹತ್ವ, ಹಲವು ಅಂಗವಿಕಲ ಸಾಧಕರ ಕುರಿತು ವಿವರಿಸಿ, ಅಂಗವಿಕಲರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಅಧಿಕಾರಿ ರವಿಕುಮಾರ್ ಮಾತನಾಡಿದರು. ಸಿಡಿಪಿಒ ಎಳೆನಾಗಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಅಂಗವಿಕಲ ಸಾಧಕರಾದ ತಾಳೂರಿನ ದೇವೀರಮ್ಮ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ರವಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು, ೧೦ ಜನ ಅಂಗವಿಕಲರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.ಶೃತಿ ಸ್ವಾಗತಿಸಿದರು. ವಕೀಲ ಎಂ. ಅಂಜಿನಪ್ಪ ಸ್ವಾಗತಿಸಿದರು. ಉಜ್ಜಿನಪ್ಪ ನಿರೂಪಿಸಿದರು. ಎಸ್. ರಾಜಶೇಖರ ವಂದಿಸಿದರು. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದುರುಗಪ್ಪ, ವಕೀಲರ ಸಂಘದ ಕಾರ್ಯದರ್ಶಿ ಎನ್.ಎಂ. ನಟರಾಜಶರ್ಮ, ಹಲವು ವಕೀಲರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.