ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ ಬದಲಾವಣೆಯ ಹರಿಕಾರ ಡಾ। ಬಾಬು ಜಗಜೀವನ್ ರಾಮ್ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಬೇಕೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ವಿಶ್ವನಾಥ್ ಆಶಯ ವ್ಯಕ್ತಪಡಿಸಿದರು.ಬೆಂಗಳೂರು ವಿಶ್ವವಿದ್ಯಾಲಯ ಡಾ। ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಜ್ಞಾನಭಾರತಿಯ ಪ್ರೊ.ವೆಂಕಟಗಿರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ। ಬಾಬು ಜಗಜೀವನ ರಾಮ್ ಅವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಸರ್ವಕಾಲಕ್ಕೂ ಸ್ಮರಿಸುವಂತಹ ವ್ಯಕ್ತಿ ಡಾ। ಬಾಬು ಜಗಜೀವನ್ ರಾಮ್. ದೇಶದಲ್ಲಿ ಬರದ ಪರಿಸ್ಥಿತಿ ಉಂಟಾದಾಗ ಆಹಾರದ ಕೊರತೆ ನೀಗಿಸಲು ಅಧ್ಯಯನ ನಡೆಸಿ ಕೃಷಿ ಕ್ರಾಂತಿಗೆ ಕಾರಣರಾದವರು. ಕೇವಲ ಕೃಷಿ ಇಲಾಖೆ ಮಾತ್ರವಲ್ಲದೇ ರೈಲ್ವೆ, ಕಾರ್ಮಿಕ, ಸಂವಹನ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅದೆಷ್ಟೋ ರಾಜಕೀಯ ಹಿನ್ನೆಡೆಗಳನ್ನು ಅನುಭವಿಸಿದರೂ ಸದಾ ಹಿಂದುಳಿದವರ, ದಮನಿತರು, ಅಲ್ಪಸಂಖ್ಯಾತರ ಧ್ವನಿಯಾಗಿದ್ದು ಅವರ ಏಳಿಗೆಗೆ ಜೀವನದುದ್ದಕ್ಕೂ ಶ್ರಮಿಸಿದವರು. ತಮ್ಮ ಅನೇಕ ಯೋಜನೆಗಳ ಮೂಲಕ ಆ ವರ್ಗಗಳಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಬಾಬುಜಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸುವುದು ಅತ್ಯವಶ್ಯವಾಗಿದೆ. ಇದರಿಂದ ಸರ್ಕಾರಕ್ಕೂ ಒಂದು ಗೌರವ ಬರುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ, ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಬಾಬುಜೀ ನಿರಂತರ ಹೋರಾಟ ನಡೆಸಿದವರು. ಇದರ ಜೊತೆಗೆ ದೇಶದ ಅಭಿವೃದ್ಧಿಗೆ ಉಪ ಪ್ರಧಾನಿಯಾಗಿ, ಕೃಷಿ ಸೇರಿದಂತೆ ವಿವಿಧ ಖಾತೆಗಳ ಸಚಿವರಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತ ಸೇರುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಡಾ। ಬಾಬು ಜಗಜೀವನ ರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಬಿ.ಗಂಗಾಧರ ಮಾತನಾಡಿದರು. ಕೆ.ವಿ.ರವೀಂದ್ರ ಅವರ ‘ಆಧುನಿಕ ಭಾರತದ ಹರಿಕಾರ ಡಾ। ಬಾಬು ಜಗಜೀವನರಾಮ್’ ಕೃತಿಯನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕುಲಪತಿ ಡಾ। ಎಸ್.ಎಂ.ಜಯಕರ, ಡಾ। ಬಿ.ಗಂಗಾಧರ, ಡಾ। ಸಿ.ಬಿ.ಹೊನ್ನು ಸಿದ್ದಾರ್ಥ, ಚಂದ್ರನಾಯ್ಕ್ಯು ಉಪಸ್ಥಿತರಿದ್ದರು.