ಕನ್ನಡಪ್ರಭ ವಾರ್ತೆ ಮಡಿಕೇರಿ
ಸಾಂಕ್ರಾಮಿಕ ರೋಗಗಳು ಹರಡದಂತೆ ಮತ್ತು ಉಲ್ಭಣಗೊಳ್ಳದಂತೆ ತೆಗೆದುಕೊಳ್ಳಬಹುದಾದ ಅಗತ್ಯ ಮುಂಜಾಗ್ರತಾ ಕ್ರಮಗಳು: ಜಾತ್ರೆ, ಊರ ಹಬ್ಬ ಮತ್ತಿತರ ಸಾಮಾಜಿಕ ಉತ್ಸವಗಳ ಸಂದರ್ಭಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ವಿಶೇಷ ಎಚ್ಚರಿಕೆ ವಹಿಸುವುದು ಹಾಗೂ ಹೋಟೆಲ್‌ಗಳಲ್ಲಿ ಸಾರ್ವಜನಿಕರಿಗೆ ಶುದ್ಧವಾದ ಬಿಸಿ ಆಹಾರ ಮತ್ತು ಕುಡಿಯಲು ಬಿಸಿ ನೀರನ್ನು ಉಪಯೋಗಿಸುವಂತೆ ಮತ್ತು ಹೋಟೆಲ್‌ಗಳಲ್ಲಿನ ಘನ ತ್ಯಾಜ್ಯ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು.
ಸಂಬಂಧಪಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಮೂಲಗಳ ಮಾಹಿತಿ ಕಲೆ ಹಾಕಿ, ಎಲ್ಲ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವುದು. ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಪರೀಕ್ಷೆ ನಡೆಸಿದ ನೀರಿನ ಮೂಲಗಳ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಯೋಗಶಾಲೆಯಲ್ಲಿ ನಿರ್ವಹಣೆ ಮಾಡುವುದು. ಕುಡಿಯಲು ಯೋಗ್ಯವಲ್ಲವೆಂದು ದೃಢಪಟ್ಟ ನೀರಿನ ಮೂಲಗಳನ್ನು ಕೂಡಲೇ ಸಂಬಂಧಪಟ್ಟ ಪಂಚಾಯತ್ ಪಿಡಿಒ ಗಳ ಸಹಕಾರದೊಂದಿಗೆ ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಕ್ರಮವಹಿಸುವುದು.ಕುಡಿಯುವ ನೀರಿನ ಪೈಪ್ ಲೈನ್ ಒಡೆದುಹೋಗಿದ್ದರೆ ತಕ್ಷಣ ಸಂಬಂದಪಟ್ಟ ನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವುದು ಮತ್ತು ವಾಟರ್ ಮ್ಯಾನ್‌ರವರಿಗೆ ಕ್ಲೋರಿನೇಷನ್ ಮಾರ್ಗಸೂಚಿಯನ್ನು ಆರೋಗ್ಯ ಇಲಾಖಾ ವತಿಯಿಂದ ನೀಡುವುದು.
ಮನೆ ಭೇಟಿ ಸಮೀಕ್ಷೆಯಲ್ಲಿ ವೈಯುಕ್ತಿಕ ಶುಚಿತ್ವ, ಪರಿಸರ ನೈರ್ಮಲ್ಯ, ಶುದ್ಧ ಕುಡಿಯುವ ನೀರು, ಬಿಸಿಯಾದ ಆಹಾರ ಸೇವನೆ, ರಸ್ತೆ/ಬೀದಿ ಬದಿಯಲ್ಲಿ ಕತ್ತರಿಸಿ ಮಾರಾಟ ಮಾಡುವ ಹಣ್ಣು-ಹಂಪಲುಗಳನ್ನು ತೆರೆದ ಆಹಾರ ಪದಾರ್ಥಗಳನ್ನು ಸೇವಿಸದಂತೆ ಸಾರ್ವಜನಿಕರು ಎಚ್ಚರ ವಹಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ ಮತ್ತು ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
ನಿರ್ದಿಷ್ಟವಾದ ರೋಗ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗದಂತೆ ಹಾಗೂ ಸಾವು-ನೋವುಗಳು ಉಂಟಾಗದಂತೆ ಕ್ರಮವಹಿಸುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಎಂ. ಸತೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.