ಕನ್ನಡಪ್ರಭ ವಾರ್ತೆ ಬೆಳಗಾವಿ
ಕಲ್ಲಿನ ನಾಗರಕ್ಕೆ, ಹುತ್ತಕ್ಕೆ ಹಾಲು ಹಾಕಿ ಮಣ್ಣು ಪಾಲು ಮಾಡುವ ಬದಲು ಆ ಹಾಲನ್ನು ಮಕ್ಕಳಿಗೆ, ಹಸಿದವರಿಗೆ ನೀಡಿ ಎಂದು ಸತೀಶ್ ಶುಗರ್ಸ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ಕಣಬರಗಿಯ ಮಹೇಶ ಫೌಂಡೇಶನ್‌ನಲ್ಲಿ ಶುಕ್ರವಾರ ಮಾನವ ಬಂಧುತ್ವ ವೇದಿಕೆ ಹಾಗೂ ಬಸವಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ರಾಷ್ಟ್ರೀಯ ಬಸವದಳ ಮತ್ತು ಬಸವ ಕಾಯಕ ಜೀವಿಗಳ ಸಂಘ ಹಾಗೂ ಮಹೇಶ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಸಾವಿರಾರು ಮಕ್ಕಳು ಹಸಿವಿನಿಂದ ನರಳುತ್ತಿದ್ದಾರೆ. ಹಾವಿಗೆ ಹಾಲೆರೆಯುವ ಬದಲು ಬಡ ಮಕ್ಕಳಿಗೆ ನೀಡಿದಾಗ ಸಮಾಜ ಪರಿವರ್ತನೆ ಆಗಲಿದೆ. ಹಾಲನ್ನು ವ್ಯರ್ಥ ಮಾಡದೇ ಅವಶ್ಯಕವಿರುವ ಬಡ ಮಕ್ಕಳಿಗೆ ನೀಡಿ ಎಂದು ಸಲಹೆ ನೀಡಿದರು.
ಬುದ್ಧ, ಬಸವ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜವನ್ನು ಎಚ್ಚರಿಸಿದ ಮಹಾನ್ ಪುರುಷರು. ಸಮ ಸಮಾಜ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಆದ್ದರಿಂದ ಸಮ ಸಮಾಜ ನಿರ್ಮಾಣವಾಗಬೇಕೆಂದರೆ ಯುವ ಪೀಳಿಗೆ ಮಹಾನ್ ಪುರುಷರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಹೇಳಿದರು.ಯಮಕನಮರಡಿ ಹುಣಸಿಕೊಳ ಮಠದ ಶ್ರೀ ಸಿದ್ಧಬಸವ ದೇವರು ಮಾತನಾಡಿ, ಜನರಲ್ಲಿರುವ ಮೂಢನಂಬಿಕೆ ಪ್ರಶ್ನಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ನಮ್ಮನ್ನು ದೇವರು, ಧರ್ಮದ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ಇದರ ನಡುವೆಯೂ ಮೂಢನಂಬಿಕೆ ವಿರುದ್ಧ ಜಾಗೃತಿ ಕಾರ್ಯ ಮಾಡುತ್ತಿರುವ ಸಚಿವ ಸತೀಶ್ ಜಾರಕಿಹೊಳಿಯವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಯಮಕನಮರಡಿ ಹುಣಸಿಕೊಳ ಮಠದ ಶ್ರೀ ಸಿದ್ಧಬಸವ ದೇವರು ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು ಕಣಬರಗಿಯ ಮಹೇಶ ಫೌಂಡೇಶನ್ ಶಾಲೆಯ ಮಕ್ಕಳಿಗೆ ಕುಡಿಯಲು ಬಾದಾಮಿ ಹಾಲು ನೀಡಿ, ಮಕ್ಕಳೊಂದಿಗೆ ಬಸವ ಪಂಚಮಿ ಹಬ್ಬವನ್ನು ಆಚರಿಸಿದರು.ಬಳಿಕ, ರಾಮತೀರ್ಥ ನಗರದ ಮಕ್ಕಳ ತೆರೆದ ತಂಗುದಾಣ, ಗಂಗಮ್ಮ ಚಿಕ್ಕಂಬಿಮಠ ಬಾಲಕಲ್ಯಾಣ ಕೇಂದ್ರ ಹಾಗೂ ದೇವರಾಜ್ ಅರಸ್ ಕಾಲೋನಿ ಬಸವನ -ಕುಡಚಿಯಲ್ಲಿರುವ ನಾಗನೂರು ಶ್ರೀ ಸಿದ್ಧರಾಮೇಶ್ವರ ಟ್ರಸ್ಟ್, ಚಿನ್ನಮ್ಮ ಬಸವಂತಯ್ಯ ಹೀರೆಮಠ ವೃದ್ಧಾಶ್ರಮ ಭೇಟಿ ನೀಡಿ, ಬಸವ ಪಂಚಮಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹೇಶ ಫೌಂಡೇಶನ್ ಸಂಸ್ಥಾಪಕ ಮಹೇಶ ಜಾಧವ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಶಂಕರ ಗುಡಸ, ಸಂತೋಷ ಗುಡದ್, ಪ್ರಶಾಂತ ಪೂಜಾರಿ, ಪ್ರಕಾಶ ಬೋಮ್ಮನ್ನವರ, ಅಂಕುಶ ಪಾಟೀಲ, ಸಂತೋಷ ಪಾಟೀಲ್, ರಾಷ್ಟ್ರೀಯ ಬಸವದಳ ಮತ್ತು ಬಸವ ಕಾಯಕ ಜೀವಿಗಳ ಸಂಘ ಪದಾದಿಕಾರಿಗಳು, ಮಹೇಶ ಫೌಂಡೇಶನ್ ಸಿಬ್ಬಂದಿ ಹಾಗೂ ಇತರರು ಇದ್ದರು.