ಕುಷ್ಟಗಿ:
ಮನೆಯಲ್ಲಿ ಬಡತನವಿದ್ದರೂ ಪರವಾಗಿಲ್ಲ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಪಂಚಮಸಾಲಿ ಸಮಾಜ ಮುಂದೆ ಬರಬೇಕು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಪಟ್ಟಣದ ಪಂಚಮಸಾಲಿ ಸಮಾಜದ ವಸತಿ ನಿಲಯದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಭೆ ಎನ್ನುವುದು ಒಬ್ಬರ ಸ್ವತ್ತಲ್ಲ, ಅದು ಸಾಧಕರ ಸ್ವತ್ತಾಗಿದ್ದು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ರಾಜ್ಯದಲ್ಲಿರುವ ಲಿಂಗಾಯತ ಸಮುದಾಯದ ಅನೇಕ ಉಪಜಾತಿಗಳ ಪೈಕಿ ಪಂಚಮಸಾಲಿ ಸಮಾಜದವರು ಹೆಚ್ಚು ಶಿಕ್ಷಣವಂತರಾಗಿದ್ದಾರೆ. ನಮಗೆ ಮೀಸಲಾತಿ ಇಲ್ಲದೆಯೂ ಸಹಿತ ಉನ್ನತ ಸ್ಥಾನ ಅಲಂಕರಿಸಿದ್ದೇವೆ. ಸರ್ಕಾರ ಮೀಸಲಾತಿ ನೀಡಿದರೆ ಇನ್ನಷ್ಟು ಸಮಾಜದ ಅಭಿವೃದ್ಧಿಯಾಗಲಿದೆ ಎಂದ ಶ್ರೀಗಳು, ಇಂದು ದುಡ್ಡಿಗಿಂತ ವಿದ್ಯೆ ಮುಖ್ಯವಾಗಿದ್ದು ಮನೆಯಲ್ಲಿ ಬಡತನ ಇದ್ದರು ಸಹಿತ ಇರುವ ಹೊಲವನ್ನಾದರೂ ಮಾರಾಟ ಮಾಡಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.ನಾನು ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಹಾಗೂ ರಾಜ್ಯದ ಎಲ್ಲ ತಾಲೂಕಿನಲ್ಲಿಯೂ ಪಂಚಮಸಾಲಿ ಸಮುದಾಯದವರಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಜೋಳಿಗೆ ಹಿಡಿದುಕೊಂಡು ಬರಲು ಸಿದ್ಧನಿದ್ದೇನೆ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಇಂದು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ನಾಶವಾಗುತ್ತಿದ್ದು ತಂದೆ-ತಾಯಿಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ತುಂಬಬೇಕು. ಮಕ್ಕಳು ಕೇವಲ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ಕೊಡಬೇಕು ಎಂದರು. ಕುಷ್ಟಗಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪಂಚಮಸಾಲಿ ಸಮಾಜದ ವಸತಿ ನಿಲಯ ನಿರ್ಮಾಣಕ್ಕೆ ಅನುದಾನ ನೀಡುವ ಮೂಲಕ ಸಹಕಾರ ನೀಡುತ್ತೇನೆ ಎಂದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಹನೆ ಹಾಗೂ ಸಂಯಮದ ಗುಣಗಳು ಕಡಿಮೆಯಾಗುತ್ತಿದ್ದು ಮನೆಯಲ್ಲಿನ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕಿದೆ. ಆಧುನಿಕತೆಯ ಪರಿಣಾಮವಾಗಿ ಚಿಕ್ಕ ವಯಸ್ಸಿನಿಂದ ದೊಡ್ಡ ವಯಸ್ಸಿನವರೆಗೂ ಮೊಬೈಲ್ ಬಳಕೆ ಮಾಡುತ್ತಿರುವ ಪರಿಣಾಮ ಮಕ್ಕಳಲ್ಲಿನ ಸಂಸ್ಕಾರದ ಪ್ರಜ್ಞೆ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ. ಶರಣಪ್ಪ ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊರತೆ ಕಾಡುತ್ತಿದ್ದು ಹಿರಿಯರು ಮಾರ್ಗದರ್ಶನ ನೀಡಬೇಕಿದೆ. ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಂಡು 371ಜೆ ಕಲಂ ಮೀಸಲಾತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ನೆಲೋಗಿಯ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು, ಈ ವೇಳೆ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಎಸ್.ಜಿ. ಪಾಟೀಲ, ಮಹಾಂತೇಶ ಬುಕನಟ್ಟಿ, ಮಹಾಂತೇಶ ಅಗಸಿಮುಂದಿನ, ದೇವೇಂದ್ರಗೌಡ ಮೇಟಿ, ಬಸವರಾಜ ಹಳ್ಳೂರು, ಸಂಗಮೇಶ ಚಿಟ್ಟಿ, ಶಿವಪ್ಪ ಗೆಜ್ಜಲಗಟ್ಟಿ, ನಾಗರಾಜ ಎಲಿಗಾರ, ನಿಂಗಪ್ಪ ಜಿಗೇರಿ, ಕೆ. ಮಹೇಶ ಸೇರಿದಂತೆ ಪಂಚಮಸಾಲಿ ಸಮಾಜದ ಯುವಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳು, ನಿವೃತ್ತ ನೌಕರರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.