ಕಾರ್ಖಾನೆ ತೊಲಗಿಸಿ ನಿಮ್ಮ ದಮ್ಮು, ತಾಕತ್ತು ತೋರಿಸಿ

KannadaprabhaNewsNetwork |  
Published : Jul 27, 2025, 12:01 AM IST
ಪೋಟೊ26ಕೆಪಿಎಲ್: ಸಿ ವಿ ಚಂದ್ರಶೇಖರ | Kannada Prabha

ಸಾರಾಂಶ

15 ವರ್ಷ ಶಾಸಕರಾಗಿ ಆಯ್ಕೆಯಾದರೂ ಅಭಿವೃದ್ಧಿಯಲ್ಲಿ ಕೊಪ್ಪಳ ತೀರಾ ಹಿಂದುಳಿದಿದೆ. ರಸ್ತೆಗಳು ಮಾಯವಾಗಿ ಜನ ನಿಮಗೆ ಇಡಿ ಶಾಪ ಹಾಕುತ್ತಿದ್ದಾರೆ. ಕೊಪ್ಪಳವನ್ನು ಮಲಿನಗೊಳಿಸುತ್ತಿರುವ ಕಾರ್ಖಾನೆ ತೊಲಗಿಸುವ ಮೂಲಕ ನಿಜವಾದ ದಮ್ಮು, ತಾಕತ್ತು ತೋರಿಸಿ.

ಕೊಪ್ಪಳ:

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪರಿಸರ ಉಳಿಸಿ ಹಾಗೂ ಅಭಿವೃದ್ಧಿ ಮಾಡಿ ನಿಮ್ಮ ದಮ್ಮು, ತಾಕತ್ತು ತೋರಿಸಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸವಾಲು ಹಾಕಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದೀರಿ. ಅದಕ್ಕಾಗಿ ನನ್ನ ಅಭಿನಂದನೆಗಳು. ಆದರೆ, ಹಿಂದಿನ ಅಧ್ಯಕ್ಷರಿಗೆ ದಮ್ಮು-ತಾಕತ್ತು ಸವಾಲು ತೋರಿಸುವ ಸಲುವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂಬ ನಿಮ್ಮ ಹೇಳಿಕೆ ಅಹಂಕಾರದ ಪರಮಾವಧಿಯಾಗಿದೆ. ಅಧಿಕಾರ ಇರುವುದು ಅಹಂಕಾರ ಪ್ರದರ್ಶನಕ್ಕೆ ಅಲ್ಲ, ಅಭಿವೃದ್ಧಿ ಮಾಡಲು ಎಂದು ತಿರುಗೇಟು ನೀಡಿದ್ದಾರೆ.

15 ವರ್ಷ ಶಾಸಕರಾಗಿ ಆಯ್ಕೆಯಾದರೂ ಅಭಿವೃದ್ಧಿಯಲ್ಲಿ ಕೊಪ್ಪಳ ತೀರಾ ಹಿಂದುಳಿದಿದೆ. ರಸ್ತೆಗಳು ಮಾಯವಾಗಿ ಜನ ನಿಮಗೆ ಇಡಿ ಶಾಪ ಹಾಕುತ್ತಿದ್ದಾರೆ. ಕೊಪ್ಪಳವನ್ನು ಮಲಿನಗೊಳಿಸುತ್ತಿರುವ ಕಾರ್ಖಾನೆ ತೊಲಗಿಸುವ ಮೂಲಕ ನಿಜವಾದ ದಮ್ಮು, ತಾಕತ್ತು ತೋರಿಸಿ. ಕೊಪ್ಪಳದ ಜನತೆ 4 ತಿಂಗಳಗಳಿಂದಲೂ ಮಾಲಿನ್ಯಕಾರಕ ಕಾರ್ಖಾನೆಗಳನ್ನು ಕೊನೆಗೊಳಿಸಿ ಎಂದು ನಿಮಗೆ ದುಂಬಾಲು ಬಿದ್ದಿದ್ದಾರೆ. ನೀವು ಮೌನವಾಗಿದ್ದೀರಿ. ಕ್ರಮಕೈಗೊಳ್ಳಲು ನಿಮಗೆ ದಮ್ಮು- ತಾಕತ್ತು ಇಲ್ಲವೇ? ನೀವು ಮೌನವಾಗಿರುವುದು ಏತಕ್ಕಾಗಿ ಎಂದು ಪ್ರಶ್ನಿಸಿದ್ದಾರೆ.

ನಿಯಮ ಉಲ್ಲಂಘನೆಯಲ್ಲಿ ತೊಡಗಿರುವ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಂಡು ನೀವು ನಿಜವಾದ ದಮ್ಮು, ತಾಕತ್ತು ಇರುವ ಶಾಸಕ ಎಂದು ಸಾಬೀತುಪಡಿಸಿ. ಇಲ್ಲದಿದ್ದರೆ ಶಾಸಕನಾಗಲು ನಿಮಗೆ ತಾಕತ್ತೂ ಇಲ್ಲವೆಂದು ಒಪ್ಪಿಕೊಂಡು ಅಧಿಕಾರದಿಂದ ಕೆಳಗಿಳಿಯಿರಿ ಎಂದು ವಾಗ್ದಾಳಿ ನಡೆಸಿದರು.

ಅಭಿವೃದ್ಧಿ ಮರೆತಿರುವ ಹಾಗೂ ಜನರಿಗೆ ನಿಮ್ಮ ಅಹಂಕಾರ ಪ್ರದರ್ಶಿಸುವ ಸಮಯ ಕೊನೆಗೊಳ್ಳುತ್ತಿದೆ. ಜನರು ನಿಮ್ಮನ್ನು ಕಿತ್ತೊಗೆಯುವ ದಿನ ದೂರವಿಲ್ಲ. ಉಳಿದ ಅವಧಿಯಲ್ಲಾದರೂ ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ಋಣ ತೀರಿಸಿ ಎಂದು ಬುದ್ಧಿ ಮಾತು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''