ಅಟ್ರಾಸಿಟಿ ಕೇಸ್‌ ದಾಖಲಾದ ವಾರದೊಳಗೆ ಪರಿಹಾರ ನೀಡಿ: ದಲಿತ ಮುಖಂಡರ ಆಗ್ರಹ

KannadaprabhaNewsNetwork | Published : Dec 15, 2024 2:05 AM

ಸಾರಾಂಶ

ಸಭೆಯಲ್ಲಿ ದಲಿತ ಮುಖಂಡರಿಂದ ಕೇಳಿ ಬಂದ ಸಮಸ್ಯೆ, ದೌರ್ಜನ್ಯ, ದಬ್ಬಾಳಿಕೆಗಳ ಮಾತಿಗೆ ಡಿಎಸ್‌ಪಿ ಲಕ್ಷ್ಮಯ್ಯ ಪ್ರತಿಕ್ರಿಯಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಎಸ್‌ಸಿ ,ಎಸ್‌ಟಿ ಜನರ ಸಮಸ್ಯೆ ಆಲಿಸಿ, ಪರಿಹಾರ ಕಂಡು ಹಿಡಿಯಲಾಗುವುದು ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಸಿ, ಎಸ್‌ಟಿ ಸಭೆಯಲ್ಲಿ ಸಮಸ್ಯೆ, ದೌರ್ಜನ್ಯಗಳ ಸದ್ದು ಕೇಳಿ ಬಂತು.

ಎಸ್‌ಸಿ, ಎಸ್‌ಟಿ ಸಭೆಯಲ್ಲಿ ಅಗತಗೌಡನಹಳ್ಳಿ ಬಳಿ ಪ್ರತಿಭಟನೆಯ ಸ್ಥಳದಲ್ಲಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಫೋಟೋ ಎಸೆದು ಅವಮಾನ ಮಾಡಿದ ಜೊತೆಗೆ ಪ್ರತಿಭಟನಾಕಾರರ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, ಗಡಿ ಪಾರು ಮಾಡಬೇಕು ಎಂಬ ಒತ್ತಾಯ ಕೇಳಿ ಬಂತು.

ತಾಲೂಕಿನಲ್ಲಿ ನಾಲ್ಕು ಅಟ್ರಾಸಿಟಿ ಕೇಸು ದಾಖಲಾಗಿವೆ. ೨ ಕೇಸ್‌ನಲ್ಲಿ ಆರೋಪಿಗಳ ಬಂಧನವಾಗಿದೆ. ಇನ್ನೆರಡು ಪ್ರಕರಣದಲ್ಲೇಕೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ರಂಗಸ್ವಾಮಿ ಪ್ರಶ್ನಿಸಿದರು.

ಎಸ್‌ಸಿ, ಎಸ್‌ಟಿ ಕಾಯಿದೆಯಡಿ ಕೇಸು ದಾಖಲಾದ ವಾರದೊಳಗೆ ಪರಿಹಾರ ವಿತರಿಸಬೇಕು. ಗ್ರಾಮದಲ್ಲಿ ಶಾಂತಿಸಭೆ ನಡೆಸಬೇಕೆಂಬ ನಿಯಮವಿದೆ. ಆದರೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅರಿವು ಮೂಡಿಸಿ:

ನಾಗುಸ್ವಾಮಿ ಮಾತನಾಡಿ, ದಲಿತರ ಮೇಲೆ ಜಾತಿ ನಿಂದಿಸಿ, ದೌರ್ಜನ್ಯ ಎಸಗುವ ಆರೋಪಿಗಳ ಬೀದಿಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಿದರೆ ಕಾನೂನಿನ ಬಗ್ಗೆ ಅರಿವು ಮೂಡುತ್ತದೆ. ಆ ಕೆಲಸ ತಾಲೂಕು ಆಡಳಿತ ಮಾಡಬೇಕು ಎಂದು ಸಲಹೆ ನೀಡಿದರು.

ಪೊಲೀಸರು ಅಧಿಕಾರದ ತಾಳಕ್ಕೆ ಕುಣಿಯುತ್ತಿದ್ದಾರೆ:

ನೊಂದ ಎಸ್‌ಸಿ, ಎಸ್‌ಟಿ ಜನಾಂಗದವರು ದೂರು ನೀಡಿದರೆ ಪ್ರತಿಯಾಗಿ ದೂರು ದಾಖಲಾಗುತ್ತಿವೆ. ಇದು ಸರಿಯಲ್ಲ, ಇದರಿಂದ ಅಟ್ರಾಸಿಟಿ ಕೇಸ್‌ಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಡಿ.೬ ರಂದು ಅಂಬೇಡ್ಕರ್‌ ಪರಿನಿರ್ವಾಣ ದಿನದಂದು ಶಾಸಕರು ತಡವಾಗಿ ಬಂದಿದ್ದಕ್ಕೆ ಪ್ರಶ್ನಿಸಿದ ದಲಿತ ಮುಖಂಡರೊಬ್ಬರನ್ನು ಸಭೆಯಿಂದ ಆಚೆಗೆ ಕಳುಹಿಸಿ ಎಂದು ಶಾಸಕರ ಬೆಂಬಲಿಗನೊಬ್ಬ ಪೊಲೀಸರಿಗೆ ಹೇಳುತ್ತಾನೆಂದರೆ ಪೊಲೀಸರು ಅಧಿಕಾರದ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿ ಕ್ರಮಕ್ಕೆ ಆಗ್ರಹಿಸಿದರು.

‌ಹಿರೀಕಾಟಿ ಬಳಿ ದಲಿತ ಭೂಮಿಯಲ್ಲಿ ಆಸಕ್ತಿ ವಹಿಸಿ ರಸ್ತೆ ಏಕೆ ಮಾಡಿಸಿದ್ದೀರಾ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ವಿರುದ್ಧವೂ ದಲಿತ ಮುಖಂಡರು ಹರಿಹಾಯ್ದರು. ತಾಲೂಕಿನಲ್ಲಿ ಸಾಕಷ್ಟು ರಸ್ತೆಗಳಿವೆ, ಆ ರಸ್ತೆಗಳನ್ನು ಮಾಡಿಸುವಿರಾ ಎಂದು ಪ್ರಶ್ನಿಸಿದರು.

ಅಗತಗೌಡನಹಳ್ಳಿ ಬಳಿ ಕ್ರಷರ್‌ ವಿಚಾರ ಸಂಬಂಧದ ಪ್ರತಿಭಟನೆಯಲ್ಲಿ ಅಂಬೇಡ್ಕರ್‌ ಫೋಟೋ ಎಸೆದು ಅವಮಾನ ಮಾಡಿದರೂ ಪೊಲೀಸರೇಕೆ ಸುಮೋಟೋ ಕೇಸು ದಾಖಲಿಸಲಿಲ್ಲ ಎಂದು ಮುಖಂಡರು ಪೊಲೀಸರ ವಿರುದ್ಧವೂ ಹರಿಹಾಯ್ದರು.

ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೂ ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅಲ್ಲದೆ ಪಟ್ಟಣದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ದಲಿತ ಮುಖಂಡರಿಂದ ಕೇಳಿ ಬಂದ ಸಮಸ್ಯೆ, ದೌರ್ಜನ್ಯ, ದಬ್ಬಾಳಿಕೆಗಳ ಮಾತಿಗೆ ಡಿಎಸ್‌ಪಿ ಲಕ್ಷ್ಮಯ್ಯ ಪ್ರತಿಕ್ರಿಯಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಎಸ್‌ಸಿ ,ಎಸ್‌ಟಿ ಜನರ ಸಮಸ್ಯೆ ಆಲಿಸಿ, ಪರಿಹಾರ ಕಂಡು ಹಿಡಿಯಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್‌ ಟಿ.ರಮೇಶ್‌ ಬಾಬು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ ಕುಮಾರ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಷಣ್ಮುಖ, ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ ,ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ ಆರ್‌.ಬಿ,ಓಂಕಾರ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್ ಇದ್ದರು.

Share this article