ಮೆಟ್ರೋದಲ್ಲಿ 3ನೇ ಬಾರಿ ಅಂಗಾಂಗಸಾಗಾಟ : 4 ರೋಗಿಗಳಿಗೆ ಶಸ್ತ್ರಚಿಕಿತ್ಸೆ

| N/A | Published : Oct 31 2025, 04:45 AM IST

Namma Metro
ಮೆಟ್ರೋದಲ್ಲಿ 3ನೇ ಬಾರಿ ಅಂಗಾಂಗಸಾಗಾಟ : 4 ರೋಗಿಗಳಿಗೆ ಶಸ್ತ್ರಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೊದಲ್ಲಿ ಮೂರನೇ ಬಾರಿ ಅಂಗಾಂಗ ರವಾನಿಸಲಾಗಿದ್ದು, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ಸಾಗಾಟ ಮಾಡಲಾಯಿತು.

  ಬೆಂಗಳೂರು :  ನಮ್ಮ ಮೆಟ್ರೊದಲ್ಲಿ ಮೂರನೇ ಬಾರಿ ಅಂಗಾಂಗ ರವಾನಿಸಲಾಗಿದ್ದು, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ಸಾಗಾಟ ಮಾಡಲಾಯಿತು.

ಅತಿಯಾದ ಒತ್ತಡದಿಂದ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮಿದುಳು ನಿಷ್ಕ್ರಿಯಗೊಂಡ 33 ವರ್ಷದ ಯುವಕನಿಂದ ಪಡೆದ ಅಂಗಾಂಗವನ್ನು ‘ನಮ್ಮ ಮೆಟ್ರೊ’ ರೈಲಿನಲ್ಲಿ ರವಾನಿಸುವ ಮೂಲಕ ನಾಲ್ವರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಲಾಗಿದೆ.

ದಾನಿಯು ನಗರದ ಮತ್ತಿಕೆರೆ ನಿವಾಸಿ

ದಾನಿಯು ನಗರದ ಮತ್ತಿಕೆರೆ ನಿವಾಸಿಯಾಗದ್ದು, ಮನೆಯಲ್ಲಿ ಸ್ನಾನ ಮುಗಿಸಿ ಹೊರ ಬಂದವರೇ ತಲೆ ಸುತ್ತಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು. ಆರಂಭದಲ್ಲಿ ನಿಮ್ಹಾನ್ಸ್‌ಗೆ ಸೇರಿಸಲಾಗಿತ್ತು. ಆನಂತರ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ರೋಗಿಯ ಮಿದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ತಿಳಿಸಿದ ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾಗಿ ಜೀವಸಾರ್ಥಕತೆ ಸಿಬ್ಬಂದಿ ತಿಳಿಸಿದ್ದಾರೆ.

ಯುವಕನಿಂದ ಪಡೆದ ಅಂಗಾಂಗಳನ್ನು ಜೆ.ಪಿ.ನಗರದ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಹೃದಯ, ವಿಕ್ಟೋರಿಯಾ ಆವರಣದಲ್ಲಿನ ನೆಫ್ರೋ ಯುರಾಲಜಿ ಸಂಸ್ಥೆಗೆ ಒಂದು ಕಿಡ್ನಿ ಹಾಗೂ ಮಿಂಟೊ ಕಣ್ಣಿನ ಆಸ್ಪತ್ರೆಗೆ ಎರಡು ಕಾರ್ನಿಯಾ ಹಾಗೂ ನಾರಾಯಣ ಹೆಲ್ತ್‌ಗೆ ಶ್ವಾಸಕೋಶ ರವಾನಿಸುವ ಮೂಲಕ ಅಗತ್ಯ ಇರುವ ರೋಗಿಗಳಿಗೆ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಹೃದಯ ಸಾಗಾಟ:

ಹೃದಯವನ್ನು ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಬೆಳಗ್ಗೆ 9.34ಕ್ಕೆ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ 10.15ಕ್ಕೆ ಬನಶಂಕರಿ ಮೆಟ್ರೊ ನಿಲ್ದಾಣದ ಮೂಲಕ ಆಸ್ಟರ್ ಆರ್.ವಿ ಆಸ್ಪತ್ರೆಗೆ ಸಾಗಿಸಲಾಯಿತು.

ಶ್ವಾಸಕೋಶವನ್ನು ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದಿಂದ ಬೆಳಗ್ಗೆ 10.5ಕ್ಕೆ ಹೊರಟು, ಬೊಮ್ಮಸಂದ್ರ ಮೆಟ್ರೊ ನಿಲ್ದಾಣಕ್ಕೆ 11.13ಕ್ಕೆ ತರಲಾಯಿತು. ಅಲ್ಲಿಂದ ನಾರಾಯಣ ಹೆಲ್ತ್‌ಸಿಟಿಗೆ ಸುಮಾರು 33 ಕಿಮೀ ದೂರವನ್ನು 68 ನಿಮಿಷಗಳಲ್ಲಿ ಅಂಗಾಂಗ ರವಾನಿಸಲಾಯಿತು. ಬೊಮ್ಮಸಂದ್ರ ಮೆಟ್ರೊ ನಿಲ್ದಾಣದಿಂದ ನಾರಾಯಣ ಹೆಲ್ತ್ ಸಿಟಿಗೆ ಆಂಬ್ಯುಲೆನ್ಸ್ ಮೂಲಕ ಅಂಗಾಂಗ ಸಾಗಿಸಲಾಯಿತು.

Read more Articles on