ಚಿತ್ತಾಪುರ ದಂಗಲ್‌ ಮತ್ತೆ ಮುಂದೂಡಿಕೆ

| N/A | Published : Oct 31 2025, 04:45 AM IST / Updated: Oct 31 2025, 05:50 AM IST

RSS pathasanchalan

ಸಾರಾಂಶ

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ನ.2ರಂದು ನಡೆಸಲು ಉದ್ದೇಶಿಸಿದ್ದ ಬಹುನಿರೀಕ್ಷಿತ ಪಥ ಸಂಚಲನ ಮತ್ತೆ ಮುಂದಕ್ಕೆ ಹೋಗಿದೆ. ಪಥ ಸಂಚಲನ ಕುರಿತ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ನ.7ಕ್ಕೆ ಮುಂದೂಡಿದೆ 

  ಕಲಬುರಗಿ :  ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನ.2ರಂದು ನಡೆಸಲು ಉದ್ದೇಶಿಸಿದ್ದ ಬಹುನಿರೀಕ್ಷಿತ ಪಥ ಸಂಚಲನ ಮತ್ತೆ ಮುಂದಕ್ಕೆ ಹೋಗಿದೆ. ಪಥ ಸಂಚಲನ ಕುರಿತ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ನ.7ಕ್ಕೆ ಮುಂದೂಡಿದೆ. ಜತೆಗೆ ನ.5ರಂದು ಮತ್ತೆ ಶಾಂತಿ ಸಭೆ ನಡೆಸುವಂತೆ ನಿರ್ದೇಶನ ನೀಡಿದೆ.

ನ.2ರಂದು ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಆರ್‌ಎಸ್‌ಎಸ್‌ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿತ್ತು. ಅಂದೇ ನಮಗೂ ಮೆರವಣಿಗೆ ನಡೆಸಲು ಅನುಮತಿಸಿ ಎಂದು 10 ಸಂಘಟನೆಗಳು ಕೋರಿದ್ದವು. ಈ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್‌ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಅ.28ರಂದು ಸಭೆ ನಡೆಸಿದ್ದ ಜಿಲ್ಲಾಡಳಿತ ಇದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಗುರುವಾರ ಮಧ್ಯಾಹ್ನ ಹೈಕೋರ್ಟ್‌ನ ಕಲಬುರಗಿ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್‌ ಅವರಿದ್ದ ಪೀಠ ವಿಚಾರಣೆ ನಡೆಸಿತು. ಬಳಿಕ ವರದಿಯಲ್ಲಿ ಒಮ್ಮತಕ್ಕೆ ಬಾರದಿರುವ ವಿಚಾರ ತಿಳಿದು, ಮತ್ತೊಮ್ಮೆ ಸಭೆ ನಡೆಸಿ ಎಂದು ಸೂಚಿಸಿತು. ಜಿಲ್ಲಾಡಳಿತದ ಅಧಿಕಾರಿಗಳು, ಆರೆಸ್ಸೆಸ್‌ ಪರ ಅರ್ಜಿದಾರರೊಂದಿಗೆ ಸಭೆ ನಡೆಸಿ ವಿಸ್ತೃತ ವರದಿಯೊಂದಿಗೆ ಬನ್ನಿ ಎಂದು ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು. ಅಲ್ಲದೆ ಪ್ರಕರಣದ ವಿಚಾರಣೆಯನ್ನು ನ.7ಕ್ಕೆ ಮುಂದೂಡಿತು.

ನ.5ರಂದು ರಾಜ್ಯದ ಅಡ್ವೋಕೆಟ್‌ ಜನರಲ್ ಕಚೇರಿಯಲ್ಲಿ (ಕಲಬುರಗಿ ಅಥವಾ ಬೆಂಗಳೂರು) ಜಿಲ್ಲಾ ಅಧಿಕಾರಿಗಳು ಮತ್ತು ಆರೆಸ್ಸೆಸ್‌ ಸಂಘಟಕರೊಂದಿಗೆ ಸಭೆ ನಡೆಸಿ, ಪಥಸಂಚಲನದ ಕುರಿತು ಚರ್ಚಿಸುವಂತೆ ಏಕಸದಸ್ಯ ಪೀಠವು ನಿರ್ದೇಶನ ನೀಡಿತು. ಈ ಸಭೆಯಲ್ಲಿ ಅಧಿಕಾರಿಗಳು, ಅರ್ಜಿದಾರರ ಜೊತೆಗೇ ಅಡ್ವೋಕೆಟ್‌ ಜನರಲ್‌, ಅರ್ಜಿದಾರರ ಪರ ವಕೀಲರು ಇದ್ದು ಸಭೆಗೆ ಮಾರ್ಗದರ್ಶನ ನೀಡುವಂತೆ ನಿರ್ದೇಶನ ನೀಡಿತು.

ವಾದ-ಪ್ರತಿವಾದ ಆಲಿಸಿದ ಪೀಠವು, ಚಿತ್ತಾಪುರ ಆರೆಸ್ಸೆಸ್‌ ಪಥ ಸಂಚಲನ ಹಾಗೂ ಅದರ ಸುತ್ತಲಿನ ಬೆಳವಣಿಗೆಗಳ ವಿಷಯ ಗಂಭೀರ ಹಾಗೂ ಸೂಕ್ಷ್ಮವಾಗಿದೆ. ಎಲ್ಲರಿಗೂ ಮಾದರಿ ಆಗುವಂತಹ ತೀರ್ಪು ನೀಡುವ ಮೂಲಕ ಎಲ್ಲರೂ ಸೇರಿ ಈ ಪ್ರಕರಣ ಬಗೆಹರಿಸಬೇಕಿದೆ. ರಾಜ್ಯದ ಅಡ್ವೋಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ಅವರು ಬೆಳವಣಿಗೆಗೆ ಸೂಕ್ತ ಪರಿಹಾರ ಹುಡುಕಲು, ಸಮಂಜಸ ನಿರ್ಣಯಕ್ಕೆ ಬರಲು ಕಾಲಾವಕಾಶ ಕೋರಿದ್ದಾರೆ. ಸೂಕ್ತ ಪರಿಹಾರ ಹುಡುಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಭೇಷ್‌ ಎನ್ನುವಂತೆ ಪರಿಹಾರ ಕಂಡುಕೊಳ್ಳೋಣ ಎಂದು ಅಡ್ವೋಕೆಟ್ ಜನರಲ್‌ ಶಶಿಕಿರಣ ಶೆಟ್ಟಿಯವರಿಗೆ ಸೂಚಿಸಿತು.

ಚಿತ್ತಾಪುರದ ಆರೆಸ್ಸೆಸ್‌ ಪಥ ಸಂಚಲನ ಪ್ರಕರಣ, ಸುತ್ತಲಿನ ಬೆಳವಣಿಗೆಗಳನ್ನು ತಾಳ್ಮೆಯಿಂದ, ಗಂಭೀರತೆಯಿಂದ ಅವಲೋಕಿಸಬೇಕಿದೆ. ಈ ಪ್ರಕರಣ ತುಂಬ ಸೂಕ್ಷ್ಮವಾಗಿದೆ. ಮುಂದೆ ಇಂತಹ ಪ್ರಕರಣ ಉದ್ಭವವಾದಲ್ಲಿ ಚಿತ್ತಾಪುರ ಪ್ರಕರಣದ ತೀರ್ಪು ಮಾದರಿ ಆಗುವಂತಾಗಬೇಕು, ಹಾಗೇ ಈ ಪ್ರಕರಣವನ್ನು ಪರಿಹರಿಸಲು ಪ್ರಯತ್ನಿಸೋಣ ಎಂದು ನ್ಯಾಯಪೀಠ ಹೇಳಿತು.

ವಿಡಿಯೋ ಕಾನ್ಫರೆನ್ಸ್‌

ಇಂದಿನ ವಿಚಾರಣೆಯಲ್ಲಿ ಬೆಂಗಳೂರಿನಿಂದಲೇ ಸರ್ಕಾರದ ಪರ ಅಡ್ವೋಕೆಟ್‌ ಜನರಲ್‌ ಶಶಿಕಿರಣ ಶಟ್ಟಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದರು. ಈ ಬಿಕ್ಕಟ್ಟಿನ ಪ್ರಸಂಗಕ್ಕೆ ಸೂಕ್ತ ಪರಿಹಾರ ದಾರಿ ಹುಡುಕುವ ಪ್ರಯತ್ನ ಮಾಡುವುದಾಗಿ ಹೇಳುತ್ತಲೇ ತಮ್ಮ ವಾದ ಮಂಡಿಸಿದರು. ಅರ್ಜಿದಾರ ಸಂಘಟನೆ ಆರೆಸ್ಸೆಸ್ ಪರವಾಗಿ ಹಿರಿಯ ವಕೀಲರಾದ ಅರುಣ ಶ್ಯಾಮ್‌, ಸತ್ಯನಾರಾಯಣಾಚಾರ್ಯ ಕಾಡ್ಲೂರ್‌ ಕೋರ್ಟ್‌ ಹಾಲ್‌ನಲ್ಲಿ ಖುದ್ದು ಹಾಜರಿದ್ದು ವಾದ ಮಂಡಿಸಿದರು.ಸದರಿ ಪ್ರಕರಣದ ವಿಚಾರಣೆಯ ಆರಂಭದಲ್ಲಿ ನ್ಯಾಯಮೂರ್ತಿಗಳು, ಚಿತ್ತಾಪುರ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಅಲ್ಲಿನ ತಹಸೀಲ್ದಾರ್‌ ಅವರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸಂಘದ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್‌ ಅರ್ಜಿದಾರರೇ ಜಿಲ್ಲಾಡಳಿತ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳದ ಸಂಗತಿ, ತಮ್ಮ ಪರವಾಗಿ ಮೂವರನ್ನು ಕಳುಹಿಸಿ ಪತ್ರದ ಮೂಲಕ ಆಡಳಿತಕ್ಕೆ ಮಾಹಿತಿ ನೀಡಿದ ವಿಚಾರ ಸೇರಿದಂತೆ ಶಾಂತಿ ಸಭೆಯಲ್ಲಿನ ಬೆಳವಣಿಗೆಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಲೇ ಈ ಪ್ರಕರಣದಲ್ಲಿ ಇನ್ನೋಂದು ಸುತ್ತಿನ ಸಭೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟದ್ದು ಗಮನಾರ್ಹವಾಗಿತ್ತು.

ಪಥಸಂಚಲನದಲ್ಲಿ ಭಾಗಿ ಆದ ಪಿಡಿಒಅಮಾನತಿಗೆ ತಡೆ

ಬೆಂಗಳೂರು: ಆರ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪದ ಮೇಲೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ಪ್ರವೀಣ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಶುಕ್ರವಾರ ಮಧ್ಯಂತರ ತಡೆಯಾಜ್ಞೆ ಮಾಡಿ ಆದೇಶ ಮಾಡಿದೆ.

ಮಾದರಿ ಆಗುವಂತಹತೀರ್ಪು ನೀಡೋಣಚಿತ್ತಾಪುರ ಪ್ರಕರಣವು ಗಂಭೀರ ಹಾಗೂ ಸೂಕ್ಷ್ಮವಾಗಿದೆ. ಮುಂದೆ ಇಂತಹ ಪ್ರಕರಣ ಉದ್ಭವವಾದರೆ ಚಿತ್ತಾಪುರ ಪ್ರಕರಣದ ತೀರ್ಪು ಮಾದರಿ ಆಗುವಂತಾಗಬೇಕು. ಆ ರೀತಿ ಪ್ರಕರಣವನ್ನು ಬಗೆಹರಿಸೋಣ.- ನ್ಯಾ। ಎಂ.ಜಿ.ಎಸ್.ಕಮಲ್‌

Read more Articles on