ಚಿತ್ತಾಪುರ ಪಥಸಂಚಲನ ಕಗ್ಗಂಟು ಇಂದು ಸಡಿಲುಗೊಳ್ಳುವುದೆ?

| Published : Oct 28 2025, 12:03 AM IST

ಸಾರಾಂಶ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ ತವರು ಚಿತ್ತಾಪುರದಲ್ಲಿ ಆರೆಸ್ಸೆಸ್‌ ಪಥ ಸಂಚಲನ ಸುತ್ತ ಎದ್ದಿರುವ ವಿವಾದ, ನಂತರದ ಪರಿಸ್ಥಿತಿಗೆ ಆಡಳಿತದ ಹಂತದಲ್ಲೇ ಪರಿಹಾರ ಕಂಡುಕೊಳ್ಳಲು ಹೈಕೋರ್ಟ್‌ ಪೀಠ ಕೊಟ್ಟಿರುವ ಅವಕಾಶದಂತೆ ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ 11.30ಕ್ಕೆ ಆಯೋಜಿಸಿರುವ ಶಾಂತಿ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ ತವರು ಚಿತ್ತಾಪುರದಲ್ಲಿ ಆರೆಸ್ಸೆಸ್‌ ಪಥ ಸಂಚಲನ ಸುತ್ತ ಎದ್ದಿರುವ ವಿವಾದ, ನಂತರದ ಪರಿಸ್ಥಿತಿಗೆ ಆಡಳಿತದ ಹಂತದಲ್ಲೇ ಪರಿಹಾರ ಕಂಡುಕೊಳ್ಳಲು ಹೈಕೋರ್ಟ್‌ ಪೀಠ ಕೊಟ್ಟಿರುವ ಅವಕಾಶದಂತೆ ಜಿಲ್ಲಾಡಳಿತ ಮಂಗಳವಾರ ಬೆಳಿಗ್ಗೆ 11.30ಕ್ಕೆ ಆಯೋಜಿಸಿರುವ ಶಾಂತಿ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.

ಜಿಲ್ಲಾಡಳಿತದಿಂದ ಸಭೆಗೆ ಹಾಜರಾಗುವಂತೆ ಆರೆಸ್ಸೆಸ್‌ ಸೇರಿದಂತೆ 10 ಸಂಘಟನೆಗಳಿಗೆ ಬುಲಾವ್‌ ಹೋಗಿದೆ. ಜಿಲ್ಲಾಧಿಕಾರಿಗಳು, ನಗರ ಪೊಲೀಸ್‌ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಆಯುಕ್ತರು, ಸೇಡಂ ಉಪ ವಿಭಾಗ ಸಹಾಯಕ ಆಯುಕ್ತರು, ಶಹಾಬಾದ್‌ ಡಿವೈಎಸ್ಪಿ, ಚಿತ್ತಾಪುರ ತಹಸೀಲ್ದಾರ್‌, ಸಿಪಿಐ ಸೇರಿದಂತೆ ಹಲವು ಹಂತದಲ್ಲಿನ ಕಂದಾಯ, ಪೊಲೀಸ್‌ ಅಧಿಕಾರಿಗಳ ತಂಡ ಶಾಂತಿಸಭೆ ಆಯೋಜನೆಯ ಹೊಣೆ ಹೊತ್ತು ಅದಾಗಲೇ 2 ದಿನಗಳ ಹಿಂದೆಯೇ ಸಂಘಟನೆಗಳ ಮುಖಂಡರಿಗೆ ನೋಟಿಸ್‌ ರವಾನಿಸಿರುವ ಹಿನ್ನೆಲೆ ಶಾಂತಿ ಸಭೆಯಲ್ಲಿನ ಚರ್ಚೆ, ಅಲ್ಲಿಂದ ಹೊರಬೀಳುವ ಫಲಿತಾಂಶದ ಸುತ್ತ ಕುತೂಹಲ ಹೆಚ್ಚಿದೆ.

ಹೈಕೋರ್ಟ್‌ ನಿರ್ದೇಶನದಂತೆ ಜಿಲ್ಲಾಡಳಿತ ಆರೆಸ್ಸೆಸ್‌, ಭೀಮ್‌ ಆರ್ಮಿ, ದಲಿತ ಪ್ಯಾಂಥರ್‌, ಗೊಂಡ- ಕುರುಬ, ರೈತ ಸಂಘ ಹಸಿರು ಸೇನೆ, ಕ್ರಿಶ್ಚಿಯನ್‌ ಅಸೋಸಿಯೇಶನ್‌ ಸೇರಿದಂತೆ ಆರೆಸ್ಸೆಸ್‌ ಪಥ ಸಂಚಲನ ನಡೆಸಲು ಅನುಮತಿ ಕೋರಿರುವ ನ. 2ರಂದೇ ಚಿತ್ತಾಪುರದಲ್ಲಿ ಪಥಸಂಚಲನ, ಹೋರಾಟಕ್ಕೆ ಅನುಮತಿ ಕೋರಿರುವ ವಿವಿಧ ಸಂಘಟನೆಗಳವರಿಗೆ ಈ ಶಾಂತಿ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಚಿತ್ತಾಪುರದಲ್ಲಿ ನ. 2 ರಂದು ಆರೆಸ್ಸೆಸ್‌ ಕೋರಿರುವಂತೆ ಪಥ ಸಂಚಲನಕ್ಕೆ ಅನುಮತಿ ನೀಡಿದಲ್ಲಿ ಅಶಾಂತಿ, ಕಾನೂನು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಚಿತ್ತಾಪುರವಷ್ಟೇ ಅಲ್ಲ, ತಾೂಕಿನ ಸುತ್ತ ಹಾಗೂ ಜಿಲ್ಲಾದ್ಯಂತ ಇದರ ಪರಿಣಾಮ ಉಂಟಾಗುವ ಸಂಭವಗಳಿವೆ ಎಂದು ಜಿಲ್ಲಾ ಎಸ್ಪಿ ಹಾಗೂ ಸ್ಥಳೀಯ ಪೊಲೀಸ್‌ ವರದಿ ಇರೋದರಿಂದ ಪಥ ಸಂಚಲನಕ್ಕಿದು ಸೂಕ್ತ ಕಾಲವಲ್ಲವೆಂದು ಸಂಘದ ಅರ್ಜಿ ವಿಚಾರಣೆಯಲ್ಲಿ ಸರ್ಕಾರದ ಅಡ್ವೋಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ನ್ಯಾಯಪಪೀಠದ ಗಮನ ಸೆಳೆದಿದ್ದರು.

ಜಿಲ್ಲಾಡಳಿತ, ಸರ್ಕಾರದ ವಾದವನ್ನು ಮನ್ನಿಸಿ ನ್ಯಾ. ಎಂಜಿಎಸ್‌ ಕಮಲ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ಜಿಲ್ಲಾಡಳಿತ ಹಾಗೂ ಪೊಲೀಸ್‌ ಹಂತದಲ್ಲೇ ಸರ್ವ ಸಮ್ಮತ ಹಾಗೂ ಶಾಂತ ರೀತಿಯಲ್ಲಿ ಅಭಿಪ್ರಾಯ ಕ್ರೂಢೀಕರಣದ ಕೆಲಸವಾಗಲಿ, ಪಥ ಸಂಚಲನದ ಸುತ್ತಮುತ್ತ ಉಂಟಾಗಿರುವ ಕಗ್ಗಂಟು ಬಿಡಿಸುವ ಯತ್ನದ ಭಾಗವಾಗಿ ಶಾಂತಿ ಸಭೆಗೆ ಸೂಚಿಸಿದ್ದರ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಸಭೆ ಆಯೋಜಿಸಿದೆ.

ಆರೆಸ್ಸೆಸ್‌ನ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್‌, ಭಾರತೀಯ ದಲಿತ ಪ್ಯಾಂಥರ್ (ರಿ) ನ ಮಲ್ಲಪ್ಪ ಹೊಸ್ಮನಿ ಹಾಗೂ ಮುಖಂಡರು, ಭೀಮ್ ಆರ್ಮಿ, ರಾಜ್ಯ ಯುವ ಘಟಕ, ಗೊಂಡ-ಕುರುಬ ಎಸ್.ಟಿ. ಹೋರಾಟ ಸಮಿತಿ, ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ (ರಿ), ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಘಟಕ, ಬೀದರ್ ನ ಕ್ರಿಶ್ಚಿಯನ್ ಹೌಸ್ ನ ಸಂಜಯ ಜಾಗೀರದಾರ, ದಸಂಸ ಸಮಿತಿ ಭೀಮ್‌ ಮಾರ್ಗ, ಡಾ.ವಿಠಲ ದೊಡ್ಡಮನಿ, ಸಂತೋಷ ಬಿ. ಪಾಳಾ ಅವರಿಗೆ ಅವರಿಗೆ ಸಭೆಯ ಬಗ್ಗೆ ನೋಟಿಸ್ ನೀಡಲಾಗಿದೆ.

ಸಭೆಗೆ ಪ್ರತಿ ಸಂಘಟನೆಯಿಂದ ಗರಿಷ್ಠ ಮೂವರು ಹಾಜರಾಗಿ, ಲಿಖಿತ ಹೇಳಿಕೆ ಸಲ್ಲಿಸಲು ಬಯಸುವ ಸಂಘಟನೆಗಳು ಸಭೆಯಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಅವಕಾಶವಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸಂಘ ಶತಾಬ್ದಿ ಅಂಗವಾಗಿ ಅ.19ರಂದು ನಡೆಸಲು ಉದ್ದೇಶಿಸಿದ್ದ ಪಥ ಸಂಚಲನಕ್ಕೆ ತಾಲೂಕು ಆಡಳಿತ ಅನುಮತಿ ನಿರಾಕರಿಸಿದ್ದನ್ನ ಪ್ರಶ್ನಿಸಿ ಸಂಘ ಕೋರ್ಟ್‌ ಮೊರೆ ಹೋಗಿತ್ತು. ಸಂಘದ ರಿಟ್‌ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್‌ ಬೇರೊಂದು ದಿನಾಂಕ ನಿಗದಿ ಮಾಡಿ ಹೊಸ ಅರ್ಜಿ ಸಲ್ಲಿಸಲು ಸಂಘಕ್ಕೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆಯಂತೆ ಸಂಘ ನ. 2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿತ್ತು.

ಸಂಘದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾ. ಎಂಜಿಎಸ್‌ ಕಮಲ್‌ ಗೊಂದಲ ತಿಳಿಗೊಳಿಸಲು ಮಂಗಳವಾರ ಶಾಂತಿಸಭೆ ನಡೆಸಿ ವರದಿಯೊಂದಿಗೆ ಅ.30ಕ್ಕೆ ಬನ್ನಿರೆಂದು ಸೂಚಿಸಿದ್ದರಿಂದ ಜಿಲ್ಲಾಡಳಿತ ಇದೀಗ ನ. 2ರಂದೇ ಚಿತ್ತಾಪುರದಲ್ಲಿ ಪಥ ಸಂಚಲನ, ಹೋರಾಟಕ್ಕೆ ಅನುಮತಿ ಕೋರಿರುವ ವಿವಿಧ ಸಂಘಟನೆಗಳ ಪ್ರಮುಖರಿಗೆ ಜಿಲ್ಲಾಡಳಿತ ಶಾಂತಿಸಭೆಗೆ ಹಾಜರಾಗುವಂತೆ ನೋಟಿಸ್‌ ನೀಡಿತ್ತು. ಇಂದಿನ ಕಲಬುರಗಿ ಶಾಂತಿಸಭೆ, ಅಲ್ಲಿನ ಚರ್ಚೆಗಳು ಅತ್ಯಂತ ಮಹತ್ವ ಪಡೆದುಕೊಂಡಿದ್ದು ಎಲ್ಲರೂ ಕುತೂಹಲದಿಂದ ಕಾಯುವಂತೆ ಮಾಡಿದೆ.