ಹಾನಗಲ್ಲ: ಹಾವೇರಿ ಜಿಲ್ಲೆಯಲ್ಲಿ ಮಾವು ಹಲವು ದಶಕಗಳ ದಾಖಲೆ ನಷ್ಟ ಹೊಂದಿ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದು, ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಿದ್ಧರಾಮಯ್ಯ ಬರಗೀಮಠ ತಿಳಿಸಿದರು.ಸೋಮವಾರ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ವಂಶಿ ತೋಟಗಾರಿಕಾ ಫಾರ್ಮನಲ್ಲಿ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಿರಸಿಯ ತೋಟಗಾರಿಕೆ ಮಹಾವಿದ್ಯಾಲಯ, ದೇವೀಹೊಸೂರು ಕೃಷಿ ಸಂಶೋಧನಾ ಕೇಂದ್ರ ಸಂಯುಕ್ತವಾಗಿ ಆಯೋಜಿಸಿದ ಒಂದು ದಿನದ ಮಾವು ಬೆಳೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ವೈಪರಿತ್ಯ ತೋಟಗಾರಿಕೆ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಾಂಪ್ರದಾಯಿಕ ಕೃಷಿಗೂ ಕೃಷಿ ಭೂಮಿ ಒಗ್ಗಿಕೊಳ್ಳುತ್ತಿಲ್ಲ. ಹಾನಗಲ್ಲ ತಾಲೂಕಿನ ಯಳವಟ್ಟಿಯಲ್ಲಿ ಮಾವು ಸಂಸ್ಕರಣ ಹಾಗೂ ಸಾಂಭಾರ ಘಟಕ ಕಾಮಗಾರಿ ಹಂತ ತಲುಪುತ್ತಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾವು ಕ್ಷೇತ್ರವಿರುವುದು ಹಾನಗಲ್ಲ ತಾಲೂಕಿನಲ್ಲಿಯೇ ಆಗಿದೆ. ಈ ಬಾರಿ ಮಾವು ಸಂಪೂರ್ಣ ಹಾಳಾಗಿದ್ದು ಮಾವು ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಾಗುತ್ತಿದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ವಂಶಿ ಮಾವು ಫಾರ್ಮ ಮಾಲೀಕ ಆರ್.ಪ್ರತಾಪ, ಕಳೆದ ಎರಡು ದಶಕಗಳಿಂದ ಇಂತಹ ಮಾವು ಫಸಲಿನ ಇಳುವರಿ ಲೋಪ ಕಂಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ರೈತರ ಪರವಾಗಿ ನಿಲ್ಲುತ್ತಿಲ್ಲ. ಕೃಷಿ ವೃತ್ತಿಯನ್ನು ನಂಬಿದ ರೈತರು ಇದರೊಂದಿಗೆ ಹೈನುಗಾರಿಕೆ ಉಪ ಉದ್ಯಮವಾಗಿ ಸ್ವೀಕರಿಸಬೇಕು. ಕೋಲಾರ ಜಿಲ್ಲೆಯಲ್ಲಿ ನೀರಿನ ಮಿತ ಬಳಕೆ ಹಾಗೂ ಬೆಳೆ ನಿರ್ವಹಣೆ ಮೂಲಕ ಉತ್ತಮ ಕೃಷಿ ಸಾಧನೆ ಮಾಡಿದ್ದಾರೆ. ಇಲ್ಲಿನ ರೈತರು ಅಲ್ಲಿನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಶಿರಸಿಯ ತೋಟಗಾರಿಕಾ ಹಣ್ಣು ವಿಭಾಗದ ವಿಜ್ಞಾನಿ ಪ್ರಾಧ್ಯಾಪಕ ಡಾ.ಪ್ರಕಾಶ ಮಾತನಾಡಿ, ಆಗಸ್ಟ ತಿಂಗಳಿನಲ್ಲಿಯೇ ಮಾವು ಬೆಳೆಗಾರರಿಗೆ ಪ್ರತಿ ವರ್ಷ ಮಾವು ಬೆಳೆ ವಿಚಾರ ಸಂಕಿರಣ ಆಯೋಜಿಸಿದಲ್ಲಿ ರೈತರಿಗೆ ಸರಿಯಾದ ಕೃಷಿ ಪದ್ಧತಿ ತಿಳಿಸಲು ಸಾಧ್ಯವಾಗುತ್ತದೆ. ಹವಾಮಾನ ವೈಪರಿತ್ಯ ಭೂಮಿ ಗುಣದಿಂದಾಗಿ ಹಲವು ಕೀಟ ಬಾಧೆ ಸಾಧ್ಯ. ಭೂಮಿಯನ್ನು ಫಲವತ್ತು ಮಾಡಿಕೊಂಡು ಸಕಾಲಿಕವಾಗಿ ನೀರು ಪೋಷಕಾಂಶ ನಿರ್ವಹಣೆಯೂ ಮಾವು ಬೆಳೆಗೆ ಅತ್ಯವಶ್ಯ. ಮಾವು ಬೆಳೆಯನ್ನು ಚನ್ನಾಗಿ ನಿರ್ವಹಿಸಿದರೆ ಅತ್ಯುತ್ತಮ ಫಸಲು ಆದಾಯ ಸಾಧ್ಯ ಎಂದರು.ಕೀಟ ವಿಭಾಗದ ವಿಜ್ಞಾನಿ ಪ್ರಾಧ್ಯಾಪಕ ರವಿಕುಮಾರ ಮಾತನಾಡಿ, ಸಸ್ಯಗಳಿಗೆ ರೋಗದ ಆರಂಭದ ಹಂತದಲ್ಲಿಯೇ ಸರಿಯಾದ ಔಷಧೋಪಚಾರ ಮಾಡಿದರೆ ಮಾತ್ರ ರೋಗ ನಿರ್ವಹಣೆ ಸುಲಭ. ಆದರೆ ರೋಗ ಹಾಗೂ ಕೀಟ ಬಾಧೆಯನ್ನು ಗುರುತಿಸುವಲ್ಲಿ ರೈತ ಹಿಂದ ಬೀಳಬಾರದು. ಕಾಲ ಕಾಲಕ್ಕೆ ಬೆಳೆಯ ನಿರ್ವಹಣೆಯಲ್ಲಿ ಸಮತೋಲನ ತಪ್ಪಬಾರದು. ಸಾವಯವ ಅಥವಾ ರಾಸಾಯನಿಕ ಯಾವುದೇ ಕೃಷಿಯಾಗಿರಲಿ ಅದು ರೈತನ ಇಚ್ಛಾಶಕ್ತಿ ಹಾಗೂ ಸರಿಯಾದ ನಿರ್ವಹಣೆಯನ್ನೇ ಅವಲಂಬಿಸಿದೆ ಎಂದರು.ಮಾವು ಬೆಳೆ ಪ್ರಗತಿಪರ ರೈತ ಬಸಾಪುರದ ನಾಗಪ್ಪ ಮುದ್ದಿ, ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ತೋಟಗಾರಿಕಾ ಸಹಾಯಕ ನಿರ್ದೇಶಕ ಜಿ.ಆರ್. ವೀರಭದ್ರಸ್ವಾಮಿ, ಹೈಕೋರ್ಟ್ ನ್ಯಾಯವಾದಿ ಸಂದೀಪ ಪಾಟೀಲ, ಮಾಜಿ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಕೃಷಿ ಇಲಾಖೆಯ ಅಧಿಕಾರಿ ಸುರೇಶ, ಬಸವಂತಪ್ಪ ಮೆಳ್ಳಿಹಳ್ಳಿ, ರುದ್ರಪ್ಪ ಹಣ್ಣಿ, ಎಸ್.ಎಸ್.ಅಂಗಡಿ, ಮೃತ್ಯುಂಜಯ ಹಿರೇಮಠ, ಕೋಟೆಪ್ಪ ವೇದಿಕೆಯಲ್ಲಿದ್ದರು.