ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮೆದುಳು ನಿಷ್ಕ್ರಿಯಗೊಂಡ ಒಬ್ಬ ಮನುಷ್ಯ ಏಳು ಮಂದಿಗೆ ಹೊಸ ಜೀವನ ಕೊಡಬಹುದು ಎಂದಾದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಆದಿಚುಂಚನಗಿರಿಯಲ್ಲಿ ವಿನೂತನ ವಾಕಥಾನ್ ಗೆ ಚಾಲನೆ ನೀಡಿ, ಇದೊಂದು ಅದ್ಭುತ ಹಾಗೂ ರಾಜ್ಯದಲ್ಲಿ ಎಲ್ಲೂ ನಡೆಯದಂಥ ಅರಿವಿನ ದೊಡ್ಡ ಕಾರ್ಯಕ್ರಮ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲಕ್ಷಾಂತರ ಮಂದಿಗೆ ಆರೋಗ್ಯ ನೀಡಲು ಸಾಧ್ಯವಾಗಿದೆ ಎಂದರು.
ಭೈರವೈಕ್ಯಶ್ರೀಗಳು ಗ್ರಾಮೀಣ ಪ್ರದೇಶದ ಜನತೆ ಯಾರೂ ಅನಾರೋಗ್ಯದಿಂದ ನರಳಬಾರದು ಎಂದು ಸಂಕಲ್ಪ ತೊಟ್ಟು 90 ರ ದಶಕದಲ್ಲೇ ಅಮೆರಿಕಾ ಸೇರಿದಂತೆ ವಿದೇಶಗಳಿಂದ ನುರಿತ ವೈದ್ಯರ ತಂಡವನ್ನು ಕರೆಸಿ ಹಲವು ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹೇಳಿದರು.ಸೀಳುತುಟಿ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಸೀಳುತುಟಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಸಾವಿರಾರು ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. ವಿವಿಧ ಕಾರಣಗಳಿಂದ ಕೈ-ಕಾಲು ಕಳೆದುಕೊಂಡವರಿಗೆ ಉಚಿತವಾಗಿ ಕೃತಕ ಕೈ ಮತ್ತು ಕಾಲು ಜೋಡಣೆ ಶಿಬಿರ ನಡೆಸಿ ನೂರಾರು ಜನರ ಬದುಕಿಗೆ ಶ್ರೀಮಠ ಆಸರೆಯಾಗಿ ಶ್ರೀಗಳು ಅಂದು ತೊಟ್ಟ ಸಂಕಲ್ಪ ಇಂದು ಬೃಹದಾಕಾರಗೊಂಡಿದೆ ಎಂದು ತಿಳಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಅಂಗಾಂಗ ದಾನದಿಂದ ನಾವು ಮತ್ತೊಬ್ಬನ ಜೀವಕ್ಕೆ ಆಶ್ರಯವಾಗುತ್ತೇವೆ. ಇಂತಹ ಅಂಗಾಂಗ ದಾನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಶ್ರೀ ಆದಿಚುಂಚನಗಿರಿ ಮಟ್ಟವು ಒಂದು ಮೈಲಿಗಲ್ಲು ನಿರ್ಮಿಸಲಿದೆ ಎಂದರು.ರಾಜ್ಯದಲ್ಲಿ ನಾವು ಕಂಡಿರುವಂತಹ ಮಹಾಸ್ವಾಮೀಜಿಗಳನ್ನು ಗುರುತಿಸುವುದಾದರೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು, ಪೇಜಾವರ ಮಠದ ಸ್ವಾಮೀಜಿಗಳು ಹಾಗೂ ಸಿದ್ದಗಂಗೆ ಮಠದ ಶಿವಕುಮಾರ ಸ್ವಾಮೀಜಿಗಳನ್ನು ನಾವು ಮೇರುಮಟ್ಟದಲ್ಲಿ ನೋಡುತ್ತೇವೆ ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಅವರು ಬಾಲಗಂಗಾಧರನಾಥ ಸ್ವಾಮೀಜಿಯವರ ದೃಢಸಂಕಲ್ಪವನ್ನು ಯಶಸ್ವಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಶ್ಲಾಘಿಸಿದರು.ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಮಾತನಾಡಿ, ಆದಿಚುಂಚನಗಿರಿ ಮಠ ಅನ್ನ, ಅಕ್ಷರ ಹಾಗೂ ಆರೋಗ್ಯ ಸೇವೆ ನೀಡುವ ಮೂಲಕ ನಾಡಿನಾದ್ಯಂತ ಹೆಸರಾಗಿದೆ. ಈಗ ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿರುವವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಅಂಗಾಂಗ ದಾನ ಜಾಗೃತಿ ಜಾಥಾ ನಡೆಸುವ ಮೂಲಕ ಸಾಮಾಜಿಕ ಕಳಕಳಿ ಸಾರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-------------19ಕೆಎಂಎನ್ ಡಿ27
ಆದಿಚುಂಚನಗಿರಿ ಆಸ್ಪತ್ರೆ ಆವರಣದಲ್ಲಿ ವಾಕಥಾನ್‌ಗೆ ಗಣ್ಯರು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು.