ವಿಶೇಷ ಚೇತನ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ವಿಶೇಷ ಚೇತನ ಮಕ್ಕಳು ಜನನ ಪೂರ್ವಜನ್ಮದ ಕರ್ಮದ ಫಲವಲ್ಲ. ಅಂತಹ ಮಕ್ಕಳು ನಿಜವಾಗಿಯೂ ಅದೃಷ್ಟವಂತರು, ಅವರಲ್ಲಿ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ವಿಶೇಷ ಚೇತನ ಮಕ್ಕಳು ಜನನ ಪೂರ್ವಜನ್ಮದ ಕರ್ಮದ ಫಲವಲ್ಲ. ಅಂತಹ ಮಕ್ಕಳು ನಿಜವಾಗಿಯೂ ಅದೃಷ್ಟವಂತರು, ಅವರಲ್ಲಿ ಆತ್ಮ ಸ್ಥೈರ್ಯ ತುಂಬುವಂತಹ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡುವಂತೆ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.

ಪಟ್ಟಣದ ಶಾಸಕರ ಬಡಾವಣೆ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾವೇರಿ, ತಾಪಂ ಬ್ಯಾಡಗಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಇವುಗಳ ಸಹಯೋಗದಲ್ಲಿ ನಡೆದ ವಿಶೇಷ ಚೇತನ ಮಕ್ಕಳಿಗೆ ಸಾಧನ, ಸಲಕರಣೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ರೂರ ಮನಸ್ಸಿನ ಕೆಲ ಪಾಲಕರು ವಿಶೇಷಚೇತನ ಮಕ್ಕಳನ್ನು ಬೀದಿಗೆ ತಳ್ಳಿ ನಮ್ಮ ಮಕ್ಕಳೇ ಅಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇನ್ನೂ ಕೆಲವರು ಬಸ್ ನಿಲ್ದಾಣ ರೈಲ್ವೆ ಸ್ಟೇಷನ್ ಇತರ ಜನನಿಬಿಡ ಪ್ರದೇಶಗಳಲ್ಲಿ ಬಿಟ್ಟು ಬಿಕ್ಷಾಟನೆ ಮಾಡಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಅಂತಹ ಪಾಲಕರನ್ನು ಗುರುತಿಸಿ ಸರಿಯಾದ ಶಿಕ್ಷೆಯನ್ನು ನೀಡುವ ಮೂಲಕ ವಿಶೇಷಚೇತನ ಮಕ್ಕಳಿಗೆ ಗೌರವಯುತವಾದ ಸ್ಥಾನ ನೀಡುವಂತೆ ಮಾಡಬೇಕಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ವಿಶೇಷಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ, ಸೌಲಭ್ಯಗಳನ್ನು ಬಳಸಿಕೊಂಡು ಪೋಷಕರು ಎಲ್ಲ ಮಕ್ಕಳಂತೆ ವಿಶೇಷಚೇತನ ಮಕ್ಕಳನ್ನು ಪೋಷಣೆ ಮಾಡುವಂತೆ ಸಲಹೆ ನೀಡಿದರು, ವಿಕಲತೆ ದೇಹಕ್ಕೆ ಹೊರತು ಮನಸ್ಸಿಗಲ್ಲ ಎನ್ನುವ ಮನೋಭಾವನೆ ಮಕ್ಕಳಲ್ಲಿ ಬೆಳೆಸಬೇಕಿದೆ. ಎಲ್ಲ ಮಕ್ಕಳಂತೆ ವಿಶೇಷ ಚೇತನ ಮಕ್ಕಳು ಎನ್ನುವಂತೆ ಮನೆಯಲ್ಲಿ ಪೋಷಕರು ನಡೆದುಕೊಳ್ಳುವ ಮೂಲಕ ಅವರಲ್ಲಿ ಕೀಳರಿಮೆ ಹುಟ್ಟದಂತೆ ನೋಡಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್. ಹುಲ್ಯಾಳ, ಬಡಾವಣೆ ಶಾಲೆಯ ಮುಖ್ಯಶಿಕ್ಷಕಿ ರಾಜಶ್ರೀ ಸಜ್ಜೇಶ್ವರ, ಮುಖಂಡರಾದ ರವಿ ಪೂಜಾರ, ಗಿರೀಶ ಇಂಡಿಮಠ, ದುರ್ಗೇಶ ಗೋಣೆಮ್ಮನವರ, ವಿಶೇಷ ಚೇತನ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ, ಶಿಕ್ಷಕರಾದ ಜಿ.ಬಿ. ಬೂದಿಹಾಳ, ಬಿ. ಸುಭಾಷ, ಎಂ.ಎಫ್. ಕರಿಯಣ್ಣನವರ, ಅಶ್ವಿನಿ ಬಿದರಿ, ಆಶಾ ಕಾಟೇನಹಳ್ಳಿ, ಸ್ಮಿತಾ ಮೋಹಿತೆ ಕೆ.ಎಂ. ದಾಮೋದರ, ಚಂದ್ರು ಮೂಲಂಗಿ, ಜೆ.ಎನ್. ಬಡ್ಡಿಯವರ, ಎಚ್. ಸುರೇಶ, ಶಂಭು ಹಾವೇರಿ, ತಿಮ್ಮನಗೌಡ್ರ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರು ಭಾಗವಹಿಸಿದ್ದರು.

Share this article