ಬಾಲ್ಯದಲ್ಲೇ ಸಂಸ್ಕೃತಿ, ಸಂಸ್ಕಾರ ನೀಡಿ: ಸೋಮಲಿಂಗ ಶ್ರೀ

KannadaprabhaNewsNetwork |  
Published : Dec 07, 2025, 04:00 AM IST
 ದೇವರಹಿಪ್ಪರಗಿ | Kannada Prabha

ಸಾರಾಂಶ

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ನೀಡುವ ಮೂಲಕ ಅವರನ್ನು ಸತ್ಪ್ರಜೆಗಳಾಗಿ ರೂಪಿಸಲು ಶಿಕ್ಷಕರು, ಪಾಲಕರು ಮುಂದಾಗಬೇಕು ಎಂದು ಕೆಸರಟ್ಟಿಯ ಪ.ಪೂ ಬಾಲ ತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮೀಜಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ನೀಡುವ ಮೂಲಕ ಅವರನ್ನು ಸತ್ಪ್ರಜೆಗಳಾಗಿ ರೂಪಿಸಲು ಶಿಕ್ಷಕರು, ಪಾಲಕರು ಮುಂದಾಗಬೇಕು ಎಂದು ಕೆಸರಟ್ಟಿಯ ಪ.ಪೂ ಬಾಲ ತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮೀಜಿಗಳು ಹೇಳಿದರು.

ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ನಿಗದಿತ ಪಠ್ಯಪುಸ್ತಕ ಅಧ್ಯಯನ ಮಾಡುವುದರೊಂದಿಗೆ ಸಾಮಾನ್ಯ ಜ್ಞಾನ ಪಡೆಯಬೇಕು. ಪ್ರತಿಭೆ ಯಾರ ಸ್ವತ್ತಲ್ಲ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಪ್ರತಿಭೆಗೆ ಹೆಚ್ಚು ಅವಕಾಶಗಳಿವೆ. ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸುವ ಗುಣ ಎಲ್ಲ ಶಿಕ್ಷಣ ಪ್ರೇಮಿಗಳಲ್ಲಿಯೂ ಬರುವಂತಾಗಲಿ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಭಾರತೀಯ ಸಂಸ್ಕಾರ, ಸಂಸ್ಕೃತಿಯ ತತ್ವಗಳನ್ನು, ದೇಶಾಭಿಮಾನ ಮೂಡಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಮುಖಂಡರಾದ ಚಂದ್ರಶೇಖರ ಕವಟಗಿ ಅವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಜೊತೆಗೆ ನಾಗರಿಕತೆ ಮತ್ತು ಸಂಸ್ಕಾರ ಕಲಿಸುವುದು ತುಂಬಾ ಅಗತ್ಯವಾಗಿದೆ. ದೇಶಕ್ಕಾಗಿ ಪ್ರಾಣ ನೀಡುವ ಶಿಕ್ಷಣ ಬೇಕಾಗಿದೆ ಎಂದು ಹೇಳಿದರು.

ನಿಂಬಾಳದ ಶ್ರೀ ಗುರುದೇವ ತಪೋವನ ಆಶ್ರಮದ ಪ.ಪೂ ತೇಜೋಮಯಾನಂದ ಮಹಾಸ್ವಾಮಿಗಳು ಮಾತನಾಡಿ, ಇತ್ತೀಚೆಗೆ ಮೊಬೈಲ್‌ ಎಂಬ ಮಾಯಾ ಕನ್ನಡಿ ಬಂದ ಬಳಿಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಲಿಯುವ ಆಸಕ್ತಿ ಕಡಿಮೆ ಆಗುತ್ತಿದೆ. ಶಿಕ್ಷಣ ಎಷ್ಟೇ ಕಲಿತರೂ ಉತ್ತಮ ಮಾನವೀಯ ಮೌಲ್ಯಗಳು ಇಲ್ಲದಿದ್ದರೆ ವ್ಯರ್ಥ. ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಸ್ಥಳೀಯ ಹಿರೇಮಠದ ಷ.ಬ್ರ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಲ್.ಆರ್.ಅಂಗಡಿ ವಹಿಸಿದ್ದರು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನಡೆದವು.

ಇದೇ ಸಂದರ್ಭದಲ್ಲಿ ಮುಖಂಡರಾದ ಸುರೇಶ ಪ್ಯಾಟಿ, ಶಶಿಧರ ಕುಮಟಗಿ, ಅಂಬಣ್ಣ ಆನೆಗುಂದಿ, ರಾಚಪ್ಪ ಕಮತಗಿ, ಸಿಬ್ಬಂದಿ ಪಿ.ಕೆ.ನಾಯಕ್, ಎಸ್.ಬಿ. ಬಿರಾದಾರ, ಎನ್.ಎಲ್. ಅಂಗಡಿ, ಎಂ.ಎನ್.ಪತ್ತಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಿ.ಎಂ. ಉಣ್ಣಿ ಬಾಯಿ ನಿರೂಪಿಸಿದರು. ಡಿ.ಜಿ. ಜಾಡರ್ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭಾ ಕಾರಂಜಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೂ ದಾರಿ: ಕೃಷ್ಣಪ್ಪ
ಕುಂದಚೇರಿ ಗ್ರಾಮಸಭೆಗೆ ಹಲವು ಅಧಿಕಾರಿಗಳು ಗೈರು : ಗ್ರಾಮಸ್ಥರ ಅಸಮಾಧಾನ