ಸಮನ್ವಯ ಸಭೆ । ವಿವಿಧ ಇಲಾಖೆಗಳಿಗೆ ಡಿಸಿ ಗಂಗಾಧರ ಸ್ವಾಮಿ ಸಲಹೆ
ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ 0.5 ಎಚ್‌ಐವಿ ಸೋಂಕು ಪ್ರಕರಣಗಳು ಇಳಿಕೆಯಾಗಿವೆ. ಇದೇ ಅವಧಿಯಲ್ಲಿ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ವರ್ಗವಾಗುವ ಪ್ರಮಾಣ ಕಡಿಮೆಯಾಗಿದೆ. ಏಡ್ಸ್ ರೋಗಿಯನ್ನು ಅಪರಾಧಿ ದೃಷ್ಟಿಯಿಂದ ನೋಡದೇ ಸಮಾನವಾಗಿ ಕಾಣುವುದರಿಂದ ಆತ್ಮಸ್ಥೈರ್ಯ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ವಿವಿಧ ಇಲಾಖೆಗಳಿಂದ ಆಯೋಜಿಸಲಾಗಿದ್ದ ವಿವಿಧ ಇಲಾಖಾ ಮುಖ್ಯಸ್ಥರ ಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಎಚ್.ಐ.ವಿ. ಸೋಂಕಿತರಿಗೆ ನೀಡಲು ಮತ್ತು ತಾರತಮ್ಯ ಆಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದರು.ಹವಾಮಾನ ಬದಲಾವಣೆ ಕುರಿತು ಮಾತನಾಡಿದ ಅವರು, ಜಗಳೂರಿನಲ್ಲಿ ಬೆಂಕಿ ಅನಾಹುತಗಳು ತುಂಬಾ ಸಂಭವಿಸುತ್ತಿವೆ. ಇದಕ್ಕೆ ಎನ್‌ಜಿಟಿ ಗೈಡ್‌ಲೈನ್ಸ್ ಪ್ರಕಾರ ಅವರಿಗೆ ಮಾರ್ಗದರ್ಶನ ನೀಡಬೇಕು. ರಸ್ತೆಗಳಲ್ಲಿ ಹುಲ್ಲಿನ ಲಾರಿಯ ಮೇಲೆ ಬೆಂಕಿ ಅವಘಡ ಸಂಭವಿಸುತ್ತಿದೆ, ಇದನ್ನು ತಡೆಯಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಬೇಕು. ವಿವಿಧ ಇಲಾಖೆಗಳ ಜೊತೆಗೂಡಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಶ್ರಮಿಸಬೇಕು ಎಂದರು.
ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ವರ್ಗಾವಣೆ ಆಗದಂತೆ ತಡೆಯಲು ಪ್ರಮುಖ ಪಾತ್ರ ವಹಿಸುವ ನೆವರಿಪೈನ್ ಸೇರಿ ಕೆಲ ಔಷಧಿಗಳನ್ನು ನೀಡುತ್ತೇವೆ. ಶಿಶು ಜನಿಸಿದ ಬಳಿಕ ಅದರ ತೂಕದ ಅನುಸಾರ ಔಷಧಿ ನೀಡಿ, ನಿಗಾ ವಹಿಸುತ್ತೇವೆ. ನಂತರ ಹಂತಹಂತವಾಗಿ ಪರೀಕ್ಷೆ ಮಾಡುತ್ತೇವೆ. ಐಸಿಟಿಸಿ ಕೇಂದ್ರಗಳಲ್ಲಿ ಎಚ್‌ಐವಿ ಸೋಂಕು ಪೀಡಿತರಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಔಷಧಿ ಕೊಡಲಾಗುತ್ತಿದೆ. ಯಾವುದೇ ಗೊಂದಲ, ಸಮಸ್ಯೆಗಳಿಗೆ ಆಸ್ಪದ ಮಾಡಿಕೊಡುತ್ತಿಲ್ಲ ಎಂದು ಹೇಳಿದರು.