ಶಿಫಾರಸು ಇಲ್ಲದೆ ಬರುವವರಿಗೆ ಮೊದಲ ಆದ್ಯತೆ ಕೊಡಿ

KannadaprabhaNewsNetwork |  
Published : Aug 30, 2024, 01:06 AM IST
29ಎಚ್ಎಸ್ಎನ್16 : ಹಾಸನ ತಾಲೂಕು ಪಂಚಾಯ್ತಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಶ್ರೇಯಸ್‌ ಪಟೇಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. | Kannada Prabha

ಸಾರಾಂಶ

ಶಿಫಾರಸು ಹಾಗೂ ಪರಿಚಯವನ್ನು ಹೇಳಿಕೊಂಡು ಸರ್ಕಾರಿ ಕಚೇರಿಗೆ ಬರುವ ಜನರ ಕೆಲಸ ಕಾರ್ಯಗಳು ಒಂದು ವಾರ ತಡವಾದರೂ ಪರವಾಗಿಲ್ಲ, ಯಾವುದೇ ಶಿಫಾರಸುಗಳೂ ಇಲ್ಲದಂತೆ ಕಚೇರಿಗೆ ಬರುವ ಸಾಮಾನ್ಯ ಜನರಿಗೆ ಮೊದಲ ಆದ್ಯತೆ ನೀಡಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕೆಂದು ಸಂಸದ ಶ್ರೇಯಸ್ ಪಟೇಲ್ ಸೂಚಿಸಿದ್ದಾರೆ. ಗ್ರಾಮೀಣ ಜನರಿಗೆ ಕಚೇರಿಗೆ ಅಲೆದಾಡಿಸದೆ, ಭ್ರಷ್ಟಾಚಾರ ರಹಿತವಾಗಿ ಜನರ ಕೆಲಸಗಳನ್ನು ಕಾನೂನಿನಂತೆ ಸಮರ್ಪಕವಾಗಿ ಮಾಡಿಕೊಡಬೇಕೆಂದು ತಿಳಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಶಿಫಾರಸು ಹಾಗೂ ಪರಿಚಯವನ್ನು ಹೇಳಿಕೊಂಡು ಸರ್ಕಾರಿ ಕಚೇರಿಗೆ ಬರುವ ಜನರ ಕೆಲಸ ಕಾರ್ಯಗಳು ಒಂದು ವಾರ ತಡವಾದರೂ ಪರವಾಗಿಲ್ಲ, ಯಾವುದೇ ಶಿಫಾರಸುಗಳೂ ಇಲ್ಲದಂತೆ ಕಚೇರಿಗೆ ಬರುವ ಸಾಮಾನ್ಯ ಜನರಿಗೆ ಮೊದಲ ಆದ್ಯತೆ ನೀಡಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕೆಂದು ಸಂಸದ ಶ್ರೇಯಸ್ ಪಟೇಲ್ ಸೂಚಿಸಿದ್ದಾರೆ.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿದ ಸಂಸದರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಷಮತೆಯ ಮೇಲೆ ಅನೇಕ ದೂರುಗಳು ಕೇಳಿ ಬರುತ್ತಿದ್ದು, ಪಿಡಿಒಗಳು ಜನಸ್ನೇಹಿಯಾಗಿ ವರ್ತಿಸಬೇಕು. ಗ್ರಾಮೀಣ ಜನರಿಗೆ ಕಚೇರಿಗೆ ಅಲೆದಾಡಿಸದೆ, ಭ್ರಷ್ಟಾಚಾರ ರಹಿತವಾಗಿ ಜನರ ಕೆಲಸಗಳನ್ನು ಕಾನೂನಿನಂತೆ ಸಮರ್ಪಕವಾಗಿ ಮಾಡಿಕೊಡಬೇಕೆಂದು ತಿಳಿ ಹೇಳಿದರಲ್ಲದೆ, ಅಧಿಕಾರಿಗಳ ವಿರುದ್ಧ ಆರೋಪಗಳು ಕೇಳಿ ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ವಾರ್ನಿಂಗ್‌ ಸಹ ನೀಡಿದರು. ಇನ್ನು ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅವರ ಇಲಾಖೆಯ ಪ್ರಗತಿಗಳು ಹಾಗೂ ಕುಂದುಕೊರತೆಗಳು ಬಗ್ಗೆ ಮಾಹಿತಿ ಪಡೆದುಕೊಂಡ ಸಂಸದರು ಸರ್ಕಾರದಿಂದ ನೀಡಲಾಗುವ ಸಬ್ಸಿಡಿ, ಸಹಾಯಧನ ಹಾಗೂ ವಿವಿಧ ಯೋಜನೆಗಳು ಸಮರ್ಪಕವಾಗಿ ಅರ್ಹರಿಗೆ ತಲುಪುವಂತೆ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಯಾವುದೇ ಲೋಪವಿವೆಸಗದಂತೆ ಕರ್ತವ್ಯ ನಿರ್ವಹಿಸಬೇಕೆಂದರು.

ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತನಾಡುವಾಗ, “ಸರ್ಕಾರದಿಂದ ಬಂದ ಅನುದಾನವನ್ನು ಖಾಲಿ ಮಾಡುವ ಸಲುವಾಗಿ ಗಿಡ ಹಾಕುವುದು ಮುಖ್ಯವಲ್ಲ, ಅದು ಬೆಳೆಯುವಂತೆ ಪೋಷಿಸಬೇಕು. ಅರಣ್ಯ ಇಲಾಖೆಯ ಗಾರ್ಡ್‌ಗಳು ಗಾಡಿ ಹಾಕಿಕೊಂಡು ಸುತ್ತಾಡುವುದರ ಬದಲು ನೆಟ್ಟ ಗಿಡಗಳ ಪಾಲನೆ ಪೋಷಣೆ ಬಗ್ಗೆ ಗಮನಹರಿಸಬೇಕೆಂದರು.

ಅಂಗವಿಕಲರಿಗೆ ನೀಡಲಾಗುವ ವಾಹನಗಳು ಹಾಗೂ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲು ಸೂಚಿಸಿದ ಸಂಸದರು, ಹಿಂದುಳಿದ ವರ್ಗಗಳ ಹಾಸ್ಟೆಲ್ ದುರಸ್ತಿ ಮತ್ತು ಅದಕ್ಕೆ ಬೇಕಾಗುವ ಅನುದಾನದ ಕುರಿತು ಮಾಹಿತಿ ಪಡೆದರು. ಕಂದಾಯ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಗ್ರಾಮ ಲೆಕ್ಕಿಗರು ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕೆಂದು ತಹಸೀಲ್ದಾರ್‌ ಶ್ವೇತಾ ಅವರಿಗೆ ಸೂಚಿಸಿದರು. ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಸಂಬಂಧಪಟ್ಟ ಹಾಗೆ ಜನರನ್ನು ಸತಾಯಿಸಬೇಡಿ ಎಂದು ಇದೇ ವೇಳೆ ಕಿವಿಮಾತು ಹೇಳಿದ ಸಂಸದರು, ದುರಸ್ತಿ ಅಭಿಯಾನ, ಪಹಣಿ ಆಧಾರ್‌ ಜೋಡಣೆ, ೧ ಟು ೫, ಕುರಿತಾದ ಮಾಹಿತಿಯನ್ನು ಪಡೆದರು.

ಇದೇ ವೇಳೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಸನ ತಹಸೀಲ್ದಾರ್‌ ಶ್ವೇತಾ ಹಾಗೂ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ