ಗದಗ: ತಂದೆ-ತಾಯಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಉತ್ತಮ ನಾಗರಿಕನನ್ನಾಗಿ ಮಾಡುವ ಗುರುತರ ಜವಾಬ್ದಾರಿಯನ್ನು ಮರೆಯಬಾರದು ಎಂದು ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿದರು.
ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಜರುಗಿದ ದಾಸಶ್ರೇಷ್ಠ ಭಕ್ತ ಕನಕದಾಸರ 537ನೇ ಜಯಂತಿ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಇದರ ನಡುವೆ ಬದುಕಿನಲ್ಲಿ ಮಾಡುವ ಪ್ರತಿಯೊಂದು ಉತ್ತಮ ಕೆಲಸ ಕಾರ್ಯಗಳು ಬಹಳ ಮುಖ್ಯವಾದದು. ಯುವ ಜನತೆ ದುಷ್ಚಟಗಳಿಂದ ದೂರ ಉಳಿದು ದೀರ್ಘಾಯುಷಿಗಳಾಗಬೇಕು ಎಂದು ಹೇಳಿದರು.ಶಹರಗಳಿಗಿಂತ ಹಳ್ಳಿಗಳಲ್ಲಿ ಹಿರಿಯರನ್ನು ಗೌರವದಿಂದ ಕಾಣುವುದು ಕಡಿಮೆಯಾಗುತ್ತಿದೆ. ಹಿರಿಯರ ಮಾತುಗಳನ್ನು ಪಾಲಿಸಿ, ಗೌರವದಿಂದ ನಡೆದುಕೊಳ್ಳುವುದನ್ನು ಕಲಿಯುವ ಜತೆಗೆ ಆರ್ಥಿಕವಾಗಿ ಸಬಲರಾಗಿ, ಸುಧಾರಣೆಯತ್ತ ಯುವ ಜನತೆ ಸಾಗಬೇಕು ಎಂದು ಹೇಳಿದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಕಾರ್ತಿಕ ಮಾಸದಲ್ಲಿ ಸಾಮೂಹಿಕವಾಗಿ ದೀಪ ಹಚ್ಚುವ ಮಹತ್ವವನ್ನು ತಿಳಿಸಿ, ನಾಡಿನ ಪರಂಪರೆ ಮರೆಯದೆ, ದಾಸರು, ಶರಣರು, ಸಂತರು ನೀಡಿದ ಮಾರ್ಗದರ್ಶನಲ್ಲಿ ಸಾಗಬೇಕು ಎಂದರು.ಈ ವೇಳೆ ಕಾಂಗ್ರೆಸ್ ಯುವ ಮುಖಂಡ ಪ್ರಕಾಶ ಕರಿ, ತಾಪಂ ಮಾಜಿ ಸದಸ್ಯ ಪ್ರಹ್ಲಾದ ಹೊಸಳ್ಳಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಕೀರ್ತಿ ಪಾಟೀಲ, ಆನಂದಪ್ಪ ಪುರದ, ಈರಪ್ಪ ಹೊಸಳ್ಳಿ, ಅರುಣ ಅಣ್ಣಿಗೇರಿ, ಈರಪ್ಪ ದೊಡ್ಡಮನಿ, ಕಾಶೀಮಸಾಬ ಹರಿವಾಣ, ಜಮಾಲಸಾಬ ಬೇಲೇರಿ, ಮಂಜುನಾಥ ಜಡಿ, ಬಾಳಪ್ಪ ಕೊಪ್ಪದ, ಜನಪದ ಕಲಾವಿದ ಹನುಮಂತ ಬಟ್ಟೂರ, ಹೇಮಂತ ಎಸ್.ಜಿ., ಕುಮಾರ ಮಾರನಬಸರಿ, ಅಚ್ಚು, ಪ್ರವೀಣ, ಸಚಿನ್, ಸುನೀಲ, ರವಿ ಹುಡೇದ, ಬಸಣ್ಣ ಕರಬಷ್ಠಿ ಇದ್ದರು.ಸಮಾರಂಭಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳಿನ ಮೇಳದೊಂದಿಗೆ ದಾಸಶೇಷ್ಠ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆಯ ಜರುಗಿತು. ಮೆರವಣಿಗೆಗೆ ಮಾಜಿ ಶಾಸಕ ಬಿ.ಆರ್. ಯಾವಗಲ್ ಚಾಲನೆ ನೀಡಿದರು. ಸ್ಥಳೀಯ ಶ್ರೀ ಸಿದ್ದಲಿಂಗೇಶ್ವರ ಕಲಾ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.