ನಿರ್ಲಕ್ಷ್ಯಕ್ಕೆ ಒಳಗಾದ ಪಂಪ ಸ್ಮಾರಕ ಭವನ!

KannadaprabhaNewsNetwork |  
Published : Dec 17, 2024, 01:00 AM IST
16ಡಿಡಬ್ಲೂಡಿ3ಗಿಡ-ಕಂಟಿಗಳಿಂದ ಕಾಣೆಯಾಗುತ್ತಿರುವ ಅಣ್ಣಿಗೇರಿಯ ಪಂಪ ಸ್ಮಾರಕ ಭವನ. | Kannada Prabha

ಸಾರಾಂಶ

ಪಂಪ ಸ್ಮಾರಕ ಭವನಕ್ಕೆ ಭೇಟಿ ನೀಡುವವರು ಪಂಪ, ಅವರ ಪ್ರತಿಮೆ, ಸಾಹಿತ್ಯ ಕೃತಿ ಮತ್ತು ಪುಸ್ತಕಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಕಾರಣ ನಿರಾಶೆಗೊಳ್ಳುವ ಸ್ಥಿತಿ ಉಂಟಾಗಿದೆ.

ಬಸವರಾಜ ಹಿರೇಮಠ

ಧಾರವಾಡ:

ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿಯಲ್ಲಿ ಪಂಪನ ಸ್ಮರಣೆಗಾಗಿ ಕಳೆದ ಹತ್ತು ವರ್ಷಗಳ ಹಿಂದೆ ಸ್ಥಾಪಿಸಿದ್ದ ಪಂಪ ಸ್ಮಾರಕ ಭವನ ಇದೀಗ ಆಡಳಿತ ವ್ಯವಸ್ಥೆಯ ದಿವ್ಯ ನಿರ್ಲಕ್ಷ್ಯದಲ್ಲಿದೆ.

ಡಾ. ಎಂ.ಎಂ. ಕಲಬುರ್ಗಿ ಅವರಿಗೆ ದೊರೆತ ಪಂಪ ಪ್ರಶಸ್ತಿ ಹಾಗೂ ಅದರಿಂದ ಬಂದ ₹1 ಲಕ್ಷವನ್ನು ಪಂಪ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮರಳಿಸಿದ್ದು, ಇವರ ಪ್ರೇರಣೆಯಿಂದ 2013ರಲ್ಲಿ ಅಂದಾರು ₹2 ಕೋಟಿ ವೆಚ್ಚದಲ್ಲಿ ಪಂಪ ಸ್ಮಾರಕ ಭವನ ನಿರ್ಮಿಸಲಾಗಿತ್ತು. ಆಗಾಗ ಈ ಭವನದಲ್ಲಿ ರಾಜಕೀಯ ಹಾಗೂ ಖಾಸಗಿ ಕಾರ್ಯಕ್ರಮ ಹೊರತುಪಡಿಸಿ ಪಂಪನ ಸಾಹಿತ್ಯ ಪ್ರಚಾರವಾಗಲಿ ಅಥವಾ ಪಂಪನ ಸ್ಮರಣೆಯ ಕಾರ್ಯವಾಗಲಿ ಆಗಿಲ್ಲ ಎಂಬುದು ಒಂದೆಡೆ ಬೇಸರವಿದ್ದರೆ, ನಿರ್ವಹಣೆ ಇಲ್ಲದೆ ಸ್ಮಾರಕ ಭವನ ಕೆಲವೇ ದಿನಗಳಲ್ಲಿ ಗಿಡ-ಗಂಟಿಗಳಲ್ಲಿ ಮುಚ್ಚಿ ಹೋಗುವ ಭಯ ಸಹ ಪಂಪನ ಅಭಿಮಾನಿಗಳಲ್ಲಿ ಕಾಡುತ್ತಿದೆ. ಜತೆಗೆ ಭವನಕ್ಕೆ ಸುಣ್ಣ-ಬಣ್ಣದ ಭಾಗ್ಯವೂ ಬೇಕಿದೆ.

ನಿರಾಶೆ ಸ್ಥಿತಿ:

ಪಂಪ ಸ್ಮಾರಕ ಭವನಕ್ಕೆ ಭೇಟಿ ನೀಡುವವರು ಪಂಪ, ಅವರ ಪ್ರತಿಮೆ, ಸಾಹಿತ್ಯ ಕೃತಿ ಮತ್ತು ಪುಸ್ತಕಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಕಾರಣ ನಿರಾಶೆಗೊಳ್ಳುವ ಸ್ಥಿತಿ ಉಂಟಾಗಿದೆ. ಸಾಹಿತ್ಯಿಕ ಚಟುವಟಿಕೆಗಳಿಗೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ಭವನದಲ್ಲಿ ಸೂಕ್ತ ಪೀಠೋಪಕರಣ, ಗುಣಮಟ್ಟದ ಧ್ವನಿ ವ್ಯವಸ್ಥೆ ಹಾಗೂ ಜನರೇಟರ್ ಮುಂತಾದ ಮೂಲ ಸೌಕರ್ಯಗಳಿಲ್ಲ. ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಲು ಭವನದಲ್ಲಿ ಮೂಲ ಸೌಕರ್ಯಗಳಿರಬೇಕು ಎಂಬುದು ಸಾಹಿತ್ಯಾಸಕ್ತರ ಅಪೇಕ್ಷೆ. ಆದರೆ ಅವರ ಆಸೆ ಇನ್ನೂ ಈಡೇರಿಲ್ಲ.

ಏನೇನಾಗಬೇಕು:

ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಅರವಿಂದ ಮಾಲಗತ್ತಿ, ಚೆನ್ನೈನಲ್ಲಿರುವ ತಮಿಳು ಕವಿ ತಿರುವುಳ್ಳವರ್ ಅವರ ಮಾದರಿಯ ಪಂಪನ ಕಾವ್ಯದ ಶಿಲಾಲಯವನ್ನು ಭವನದಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದು, ‘ಆದಿಕವಿ ಪಂಪ ಪ್ರಾಧಿಕಾರ’ ಸ್ಥಾಪಿಸಲು ಸಹ ಸರ್ಕಾರದ ಮೇಲೆ ಒತ್ತಡವೂ ಇದೆ. ಆದಿಕವಿ ಪಂಪ ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಎಸ್. ಹರ್ಲಾಪುರ ಕಳೆದ ನಾಲ್ಕು ದಶಕಗಳಿಂದ ಆದಿಕವಿ ಪಂಪ ಪ್ರಾಧಿಕಾರ ಸ್ಥಾಪನೆಗೆ ಒತ್ತಾಯಿಸುತ್ತಿದ್ದರೂ ಈ ಬಗ್ಗೆ ಯಾವ ಬೆಳವಣಿಗೆಗಳಾಗಿಲ್ಲ. ಇವುಗಳೊಂದಿಗೆ ಸ್ಥಳೀಯ ಆಡಳಿತ ವ್ಯವಸ್ಥೆ ಭವನವನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ.

ನಿರ್ವಹಣೆ ಭಾಗ್ಯ ಸಿಗಲಿ:

ಪಂಪನ ಉಲ್ಲೇಖವಿಲ್ಲದೆ ಕನ್ನಡ ಸಾಹಿತ್ಯದ ಚರಿತ್ರೆಗಳು ಅಪೂರ್ಣವಾಗಿರುವುದರಿಂದ ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಈ ಮೊದಲು ಅಣ್ಣಿಗೇರಿ ನವಲಗುಂದ ತಾಲೂಕಿನ ಭಾಗವಾಗಿದ್ದು, ಇದೀಗ ನೂತನ ತಾಲೂಕು ಸ್ಥಾನ ಪಡೆದಿದೆ. ಆಧುನಿಕ ಜೈನ ವಿದ್ವಾಂಸರಾದ ಹಂಪ ನಾಗರಾಜಯ್ಯ, ಪಂಪ ಅಣ್ಣಿಗೇರಿಯಲ್ಲಿ ಜನಿಸಿದರು, ಬಾಲ್ಯವನ್ನು ಹತ್ತಿರದ ವರದಾ ನದಿಯ ದಡದಲ್ಲಿ ಕಳೆದರು ಮತ್ತು ಅವರ ತಾಯಿ ಅಬ್ಬನಬ್ಬೆ ಅಣ್ಣಿಗೇರಿಯ ಜೋಯಿಸ ಸಿಂಹ ಅವರ ಮೊಮ್ಮಗಳು ಎಂದು ದಾಖಲಿಸಿದ್ದಾರೆ. ಅಣ್ಣಿಗೇರಿಯೊಂದಿಗೆ ಪಂಪನ ಸಂಪರ್ಕವನ್ನು ಗುರುತಿಸುವ ಪ್ರಯತ್ನದಲ್ಲಿ, ಪಂಪ ಸ್ಮಾರಕ ಭವನ ನಿರ್ಮಿಸಿದೆ. ಆದರೆ, ಸರ್ಕಾರ, ಸ್ಥಳೀಯ ಸಂಸ್ಥೆ ಹಾಗೂ ಈ ಭಾಗದ ಚುನಾಯಿತ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಲಕ್ಷ್ಯದ ಸ್ಥಿತಿಯಲ್ಲಿದ್ದು, ಇನ್ನಾದರೂ ಪಂಪ ಸ್ಮಾರಕ ಭವನಕ್ಕೆ ನಿರ್ವಹಣೆಯ ಭಾಗ್ಯ ದೊರೆಯಬೇಕಿದೆ ಎಂಬುದು ಪಂಪನ ಅಭಿಮಾನಿಗಳ ಆಗ್ರಹ.ಭೇಟಿ ನೀಡಿ ಪರಿಶೀಲನೆ...

ಪಂಪ ಸ್ಮಾರಕ ಭವನ ದುಸ್ಥಿತಿ ಬಗ್ಗೆ ತಮಗೂ ಮಾಹಿತಿ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಲ್ಲಿ ಈ ಭವನ ನಿರ್ಮಾಣವಾಗಿದ್ದು ಅಣ್ಣಿಗೇರಿ ಪುರಸಭೆ ನಿರ್ವಹಣೆಗೆ ನೀಡಲಾಗಿದೆ. ಕೂಡಲೇ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ವರದಿ ಸಹ ನೀಡುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ