ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ

KannadaprabhaNewsNetwork |  
Published : Nov 18, 2026, 03:00 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸರ್ಕಾರಿ ಶಾಲೆಗಳ ಜತೆಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಸುಧಾರಣೆಗೂ ಒತ್ತು ನೀಡಬೇಕು. ಪ್ರತಿ ಮಗುವಿನ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನೆ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದ ಕೊನೆಯ ಮಗುವಿಗೂ ಹೆಚ್ಚಿನ ಆದ್ಯತೆ ನೀಡಿ, ಎಸ್‌ಒಪಿ ಜಾರಿಗೊಳಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ವಿ.ರಶ್ಮಿ ಮಹೇಶ್‌ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರಿ ಶಾಲೆಗಳ ಜತೆಗೆ ಅನುದಾನಿತ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಸುಧಾರಣೆಗೂ ಒತ್ತು ನೀಡಬೇಕು. ಪ್ರತಿ ಮಗುವಿನ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನೆ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದ ಕೊನೆಯ ಮಗುವಿಗೂ ಹೆಚ್ಚಿನ ಆದ್ಯತೆ ನೀಡಿ, ಎಸ್‌ಒಪಿ ಜಾರಿಗೊಳಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ವಿ.ರಶ್ಮಿ ಮಹೇಶ್‌ ಸೂಚಿಸಿದರು.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುವ ಉದ್ದೇಶದಿಂದ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಗಾಗಿ ಮಿಷನ್‌ 60+ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಬರವಣಿಗೆ ಅಭ್ಯಾಸ ಮತ್ತು ಮೌಲ್ಯಮಾಪನಕ್ಕೆ ಹೆಚ್ಚಿನ ಗಮನ ನೀಡಬೇಕು. ಶಿಕ್ಷಕರು ಮಕ್ಕಳ ನೋಟ್‌ಬುಕ್‌ಗಳನ್ನು ಪರಿಶೀಲಿಸಿ, ತಪ್ಪುಗಳನ್ನು ತಿದ್ದಿ ಸಹಿ ಹಾಕುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಬೇಕು. ಪ್ರಶ್ನೆಕೋಠಿ, ಪೋಷಕರ ಸಭೆ ಮತ್ತು ಮನೆ ಭೇಟಿಗಳಿಗೂ ಆದ್ಯತೆ ನೀಡಬೇಕು ಎಂದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕಿ ಅನಿತಾ ವಿ.ನಾಜರೆ ಮಾತನಾಡಿ, 10ನೇ ತರಗತಿಯ ಮಾಸಿಕ ಪಠ್ಯಕ್ರಮ, ಸೆಮಿಸ್ಟರ್‌ ವಾರು ಬೋಧನಾ ಅವಧಿ, ಪೋಷಕರ ಸಭೆ, ಸಿಸಿಇ, ಎಚ್‌ಪಿಸಿ ಮತ್ತು ಎಫ್‌ಎ ಕುರಿತು ಮಾಹಿತಿ ನೀಡಿದರು. ಮೂರು ಪೂರ್ವಸಿದ್ಧತಾ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಗುರುತಿಸಿ, ನೀಲನಕ್ಷೆ, ಮಾದರಿ ಪ್ರಶ್ನೆಪತ್ರಿಕೆ ಹಾಗೂ ಎಲ್‌ಬಿಎ ಸಾಮಗ್ರಿಗಳ ಮೂಲಕ ಪರೀಕ್ಷೆಗೆ ಸಿದ್ಧಪಡಿಸಬೇಕು ಎಂದು ಮಾರ್ಗದರ್ಶನ ನೀಡಿದರು.

ಮಂಡಳಿ ಅಧ್ಯಕ್ಷ ಭರತ್‌ ಎಸ್‌. ಮಾತನಾಡಿ, ಮಧ್ಯವಾರ್ಷಿಕ ಪರೀಕ್ಷೆಯ ಫಲಿತಾಂಶ ಆಧರಿಸಿ ವಿದ್ಯಾರ್ಥಿವಾರು ಕ್ರಿಯಾ ಯೋಜನೆ ರೂಪಿಸಬೇಕು. ಅನುತ್ತೀರ್ಣರಾಗುವ ಸಾಧ್ಯತೆ ಇರುವ ಮಕ್ಕಳಿಗೆ ಹೆಚ್ಚಿನ ಗಮನ ನೀಡಬೇಕು. ನಿರಂತರ ಮೌಲ್ಯಮಾಪನ, ಬರವಣಿಗೆ ಅಭ್ಯಾಸ ಮತ್ತು ನೀಲನಕ್ಷೆ ಆಧಾರಿತ ಸಿದ್ಧತೆಗೆ ಆದ್ಯತೆ ನೀಡಬೇಕು ಎಂದರು.

ಜಿಪಂ ಸಿಇಒ ರಾಹುಲ್‌ ಶಿಂಧೆ ಮಾತನಾಡಿ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್‌ ಸರ್ಚ್‌ ಪರೀಕ್ಷೆ ನಡೆಸಲಾಗುತ್ತಿದೆ. ಸಿಇಟಿ ಸಕ್ಷಮ ಮತ್ತು ಸೂಪರ್‌ 50 ಬ್ಯಾಚ್‌ಗಳ ತರಬೇತಿಯ ಫಲವಾಗಿ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ಎಂಬಿಬಿಎಸ್‌. ಹಾಗೂ ಇಬ್ಬರು ವಿದ್ಯಾರ್ಥಿಗಳು ಐಐಟಿ ಮತ್ತು ಎನ್‌ಐಟಿಗೆ ಆಯ್ಕೆಯಾಗಿದ್ದಾರೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡುವ ಸಾಮರ್ಥ್ಯವಿದೆ. ಇಲಾಖೆಯ ಮಿಷನ್‌ 60+ ಕೈಪಿಡಿಯನ್ನೇ ಶಿಕ್ಷಕರು ಅನುಸರಿಸಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಕಳೆದ ವರ್ಷ ಮಿಷನ್‌ 40+ ಮೂಲಕ ಬೆಳಗಾವಿ ವಿಭಾಗ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿತ್ತು. ಆಂತರಿಕ ಅಂಕಗಳಿಲ್ಲದೆ ಶೇ.84ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಗಮನಾರ್ಹ ಸಾಧನೆ. ಪ್ರಸಕ್ತ ವರ್ಷ ಮಿಷನ್‌ 60+ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಶೇ.100ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಲ್‌.ಎಸ್‌.ಹಿರೇಮಠ, ಎ.ಸಿ.ಮಣ್ಣಿಕೇರಿ ಹಾಗೂ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಹಾದೇವ ಕಾಂಬ್ಳೆ ಅವರು ಶೈಕ್ಷಣಿಕ ವರ್ಷದ ಯೋಜನೆಗಳು, ಸವಾಲುಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಸಂಪನ್ಮೂಲ ಶಿಕ್ಷಕರಿಗೆ 15 ಕೊಠಡಿಗಳಲ್ಲಿ ವಿಷಯವಾರು ಕಾರ್ಯಾಗಾರ ನಡೆಸಲಾಯಿತು. ಮಿಷನ್‌ 60+ ಅನುಷ್ಠಾನ, ಕ್ರಿಯಾ ಯೋಜನೆ, ಗುಂಪು ಚರ್ಚೆ, ಸಂದೇಹಗಳ ಪರಿಹಾರ, ಸ್ಟೂಡೆಂಟ್‌ ಕಾರ್ನರ್‌ ಹಾಗೂ ಮೇಲುಸ್ತುವಾರಿ ಕುರಿತು ಚರ್ಚಿಸಲಾಯಿತು. ಅಪರ ಮುಖ್ಯ ಕಾರ್ಯದರ್ಶಿ ಪ್ರತಿ ಕೊಠಡಿಗೂ ಭೇಟಿ ನೀಡಿ ಮಾರ್ಗದರ್ಶನ ನೀಡಿದರು.

ಧಾರವಾಡ ಅಪರ ಆಯುಕ್ತರ ಕಚೇರಿಯ ನಿರ್ದೇಶಕಿ ಮಮತಾ ನಾಯಕ ಸ್ವಾಗತಿಸಿದರು. ಉಪನಿರ್ದೇಶಕ ಗಿರೀಶ ಪದಕಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ
ಸಹಕಾರಿ ಸಂಘಗಳು ಆರ್ಥಿಕಾಭಿವೃದ್ಧಿಗೆ ಪೂರಕವಾಗಿರಲಿ