ಕನ್ನಡಪ್ರಭ ವಾರ್ತೆ ಮದ್ದೂರು
ವಿದ್ಯೆಯಿಂದ ಪ್ರಗತಿ ಸಾಧ್ಯ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲೂಕಿನ ಕೆಸ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಅಧ್ಯಕ್ಷ ಸಿ.ನಾಗೇಗೌಡ ಹೇಳಿದರು.ಗ್ರಾಮದ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆ ಹಾಗೂ ಸಂಕ್ರಾಂತಿ ಸುಗ್ಗಿ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯೆ, ವಿನಯ ಸಂಸ್ಕಾರದ ಒಂದು ನಡೆಯಾಗಿದೆ. ಕತ್ತಲನ್ನು ದೂರ ಮಾಡಿ ಬೆಳಕಿನತ್ತ ಕೊಂಡೊಯ್ಯುತ್ತದೆ. ಹೀಗಾಗಿ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹೊತ್ತು ನೀಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಹಳ್ಳಿಗಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿದೆ. ನಾವುಗಳು ಪಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಕಾರಣ ಹಳ್ಳಿಗಾಡಿನ ಕಲೆ ಮತ್ತು ಸಾಹಿತ್ಯ ನೈಪತ್ಯಕ್ಕೆ ಸರಿದು ಹೋಗುತ್ತಿದೆ ಎಂದು ವಿಷಾದಿಸಿದರು.ನಮ್ಮ ಪೂರ್ವಜ್ಞರು ಹಿಂದಿನ ಕಾಲದಲ್ಲಿ ಭತ್ತದ ರಾಶಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸಿ ಪ್ರೀತಿ, ಸಹ ಬಾಳ್ವೆಯಿಂದ ನಡೆಸುತ್ತಿದ್ದ ಉದಾಹರಣೆಗಳು ಸಾಕಷ್ಟಿವೆ ಎಂದರು.
ಅಂದಿನ ಸಂಕ್ರಾಂತಿ ಸಂಭ್ರಮವನ್ನು ಇಂದಿನ ಮಕ್ಕಳಿಗೆ ಮತ್ತೊಮ್ಮೆ ಪರಿಚಯಿಸಬೇಕೆಂಬ ಉದ್ದೇಶದಿಂದ ಶಾಲೆಯಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ ಆಯೋಜಿಸುತ್ತಿರುವುದಾಗಿ ತಿಳಿಸಿದರು.ಮಕ್ಕಳ ಸಂತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಮಕ್ಕಳ ಪೋಷಕರು ತರಕಾರಿ, ಸೊಪ್ಪು, ತಿಂಡಿ ತಿನಿಸು, ಹಣ್ಣುಗಳನ್ನು ಖರೀದಿಸುವ ಮೂಲಕ ಮಕ್ಕಳ ಸಂತೆಗೆ ಪ್ರೋತ್ಸಾಹ ನೀಡಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ, ಮುಖ್ಯ ಶಿಕ್ಷಕಿ ಶೋಭಾ ನಾಗೇಗೌಡ, ಪುಷ್ಪಗಿರಿ ಸಂಸ್ಥೆ ಅಧ್ಯಕ್ಷ ಸೋಮಶೇಖರ್, ಎಲೈಟ್ ಸಂಸ್ಥೆ ಅಧ್ಯಕ್ಷ ಅರುಣ್ ಕುಮಾರ್, ಶಿಕ್ಷಕರಾದ ಶ್ವೇತಾ, ರಾಧಾ, ಅರ್ಪಿತ, ಧನಲಕ್ಷ್ಮಿ, ಕಾವ್ಯ, ಶೃತಿ ಮತ್ತು ಸೌಮ್ಯ ಅವರುಗಳು ಮಕ್ಕಳ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಿದರು.