ಬಂದರು ನಿರ್ಮಾಣ ಕೈಬಿಡಿ, ಕಡಲತೀರ ಉಳಿಸಲು ಕಾಸರಕೋಡ ಗ್ರಾಮಸ್ಥರ ಮನವಿ

KannadaprabhaNewsNetwork |  
Published : Jan 13, 2025, 12:48 AM IST
ಗ್ರಾಮ ಸಭೆ ನಡೆದಿರುವುದು | Kannada Prabha

ಸಾರಾಂಶ

ಸ್ಥಳೀಯ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಪರಿಸರ ಇಲಾಖೆ ಏಕಾಏಕಿ ಯೋಜನಾ ಕಾಮಗಾರಿಗೆ ಅನುಮತಿ ನೀಡಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ಹಾಗೂ ಅದಕ್ಕೆ ಸಂಬಂಧಿಸಿದ ಚತುಷ್ಪಥ ರಸ್ತೆ ಮತ್ತು ರೈಲು ಮಾರ್ಗ ವಿರೋಧಿಸಿ ನಡೆದ ಗ್ರಾಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದದಿಂದ ನಿರ್ಣಯ ಅಂಗೀಕರಿಸಲಾಯಿತು.ವಾಣಿಜ್ಯ ಬಂದರು ಕಾಮಗಾರಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ ಹಿನ್ನೆಲೆ ಕಾಸರಕೋಡ ಗ್ರಾಮ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.

ಪಿಡಿಒ ಉದಯ ಬಾಂದೇಕರ ವಾಣಿಜ್ಯ ಬಂದರಿನ ನಿರ್ಮಾಣದ ಕುರಿತು ವಿವರಿಸಿದರು. ಆಗ ಸಾರ್ವಜನಿಕರು ಮಾತನಾಡಿ, ವಾಣಿಜ್ಯ ಬಂದರು ನಿರ್ಮಾಣ ಕೈಬಿಡಿ, ಮೀನುಗಾರರನ್ನು ಬದುಕಲು ಬಿಡಿ. ಸುಂದರ ಕಡಲತೀರವನ್ನು ಉಳಿಸಿ, ಪರಿಸರವನ್ನು ರಕ್ಷಿಸಿ ಎಂದು ಎಚ್‌ಪಿಪಿಎಲ್ ಕಂಪನಿಗೆ ಗ್ರಾಮಸ್ಥರು ಧಿಕ್ಕಾರ ಕೂಗಿದರು. ಅಲ್ಲದೇ ವಾಣಿಜ್ಯ ಬಂದರು ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.

ಟೊಂಕ ಆಮೆಗಳು ಮೊಟ್ಟೆ ಇಡುವ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಬಂದರು ನಿರ್ಮಾಣದಿಂದ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗಲಿದೆ. ಕಾಸರಕೋಡ ಇಕೊ ಬೀಚ್‌ನ ಸೌಂದರ್ಯಕ್ಕೂ ಧಕ್ಕೆಯಾಗಲಿದೆ. ಸ್ಥಳೀಯ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಪರಿಸರ ಇಲಾಖೆ ಏಕಾಏಕಿ ಯೋಜನಾ ಕಾಮಗಾರಿಗೆ ಅನುಮತಿ ನೀಡಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬಂದರು, ರಸ್ತೆ ಹಾಗೂ ರೈಲು ಮಾರ್ಗ ನಿರ್ಮಾಣದಿಂದ 300ಕ್ಕೂ ಹೆಚ್ಚು ಕುಟುಂಬಗಳು ನಿರ್ವಸತಿಕರಾಗಲಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆಗೆ ತೊಡಕಾಗಿ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ವ್ಯಕ್ತವಾಯಿತು.ಮೀನುಗಾರರು ವಾಸವಿರುವ ಕಡಲ ತೀರದಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅವಕಾಶ ನೀಡಬಾರದು ಎಂದು ಮೀನುಗಾರರ ಸಂಘಟನೆಯ ಮುಖಂಡ ರಾಜೇಶ ತಾಂಡೇಲ ಲಿಖಿತ ಮನವಿ ಸಲ್ಲಿಸಿದರು. ವಾಣಿಜ್ಯ ಬಂದರು ಕಾಮಗಾರಿಗಳಿಗೆ ಕೇಂದ್ರ ಪರಿಸರ ಇಲಾಖೆ ನೀಡಿರುವ ಅನುಮತಿ ಹಿಂಪಡೆಯುವಂತೆ ಆಗ್ರಹಿಸಿ ಪತ್ರ ಬರೆಯಬೇಕು ಎಂದು ತೀರ್ಮಾನಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಕಾಳಿ ಹರಿಜನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಉದಯ ಬಾಂದೇಕರ ಸ್ವಾಗತಿಸಿದರು. ಸದಸ್ಯರಾದ ಜಗದೀಶ ತಾಂಡೇಲ, ವಿವನ್ ಫರ್ನಾಂಡಿಸ್‌, ಮುಖಂಡರಾದ ಮಂಜು ಗೌಡ, ರಾಜು ತಾಂಡೇಲ, ಹಮಜಾ ಪಟೇಲ್, ಪರಮೇಶ್ವರ ಮೇಸ್ತ, ಚಂದ್ರಹಾಸ ಗೌಡ, ಸ್ಟೀವನ್ ಫರ್ನಾಂಡಿಸ್‌, ಗಣಪತಿ ತಾಂಡೇಲ, ಲಿಂಗಾ ಗೌಡ ಭಾಗವಹಿಸಿದರು.

ಅವಕಾಶ ಬೇಡ: ಸ್ಥಳೀಯ ಜನರ ಅಹವಾಲು ಆಲಿಸದೇ ಬಂದರು ಮತ್ತು ಚತುಷ್ಪಥ ರಸ್ತೆ ಯೋಜನೆಗೆ ಅನುಮತಿ ನೀಡಿರುವ ಪರಿಸರ ಮೌಲ್ಯ ಮಾಪನ ಶಾಸ್ತ್ರ ಇಲಾಖೆಯ ನಡೆ ಪ್ರಶ್ನಿಸಿ, ಗ್ರಾಮ ಪಂಚಾಯಿತಿಯು ಸ್ಥಳೀಯ ಜನರ ಪರವಾಗಿ ನಿಲ್ಲಬೇಕು. ನಮ್ಮ ಭಾಗದಲ್ಲಿ ವಾಣಿಜ್ಯ ಬಂದರು ಮತ್ತು ಕಡಲತೀರದಲ್ಲಿ ಚತುಷ್ಪಥ ರಸ್ತೆ ಹಾಗೂ ರೈಲು ಮಾರ್ಗದ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರಾದ ಮಹ್ಮದ ಸಾಬ್ ತಿಳಿಸಿದರು.

ಪರಂಪರಾಗತ ವಸತಿನೆಲೆ: ಉದ್ದೇಶಿತ ವಾಣಿಜ್ಯ ಬಂದರು ಯೋಜನೆ ಅನುಷ್ಠಾನ ಮಾಡಿದರೆ ಸ್ಥಳೀಯ 2000 ಜನರು ಉದ್ಯೋಗದಿಂದ ವಂಚಿತರಾಗುತ್ತಾರೆ. ಕಡಲತೀರದಲ್ಲಿ ವಾಸವಿರುವ ಸುಮಾರು 500 ಮೀನುಗಾರರ ಕುಟುಂಬಗಳು ಪರಂಪರಾಗತ ವಸತಿನೆಲೆಗಳನ್ನು ಕಳೆದುಕೊಂಡು ಬೀದಿಗೆ ಬರಲಿವೆ ಎಂದು ಗ್ರಾಪಂ ಸದಸ್ಯರಾದ ಜಗದೀಶ ತಾಂಡೇಲ ತಿಳಿಸಿದರು.

ಉದ್ಯಮಕ್ಕೆ ಧಕ್ಕೆ: ವಾಣಿಜ್ಯ ಬಂದರು ನಿರ್ಮಾಣ ಮಾಡಿದರೆ ಈ ಬಂದರಿಗೆ ಅಗತ್ಯವಿರುವ ರಸ್ತೆ ಮತ್ತು ರೈಲು ಮಾರ್ಗ ಸಹಿತ ವಿವಿಧ ಮೂಲ ಸೌಕರ್ಯ ಕಲ್ಪಿಸಿದರೆ ಇಲ್ಲಿನ 350ಕ್ಕೂ ಹೆಚ್ಚಿನ ಮೀನುಗಾರರ ಪರಂಪರಾಗತ ವಸತಿ ನೆಲೆಗಳಿಗೆ, ಸಾವಿರಾರು ಮೀನುಗಾರರಿಗೆ ಬದುಕನ್ನು ನೀಡಿರುವ ಒಣಮೀನು ಉದ್ಯಮಕ್ಕೆ ಧಕ್ಕೆಯಾಗಲಿದೆ ಎಂದು ಮೀನುಗಾರರಾದ ವಿವಿನ್ ಫರ್ನಾಂಡಿಸ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ