ವಿದ್ಯಾರ್ಥಿಗಳು ಓದಿನೊಂದಿಗೆ ಆರೋಗ್ಯಕ್ಕೆ ಮಹತ್ವ ನೀಡಿ

KannadaprabhaNewsNetwork | Published : Dec 16, 2023 2:01 AM

ಸಾರಾಂಶ

ಡಾ. ಪಿ.ಎಂ. ಬಿರಾದಾರ, ಡಾ. ಉದಯ ಪಾಟೀಲ, ಡಾ. ವಿಶ್ವನಾಥರೆಡ್ಡಿ, ಡಾ. ಸಂಗ್ರಾಮ ಬಿರಾದಾರ, ಡಾ. ಶಿವಕುಮಾರ ಸಿ.ಆರ್. ಅವರಿಗೆ ಡಾ. ಎಸ್.ಎಸ್. ಪಾಟೀಲ ಸ್ಮಾರಕ ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರದಾನ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ, ಸಿ.ಆರ್. ಚಂದ್ರಶೇಖರ ಸ್ನೇಹ ಬಳಗ, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಡಾ. ಸಿ.ಆರ್. ಚಂದ್ರಶೇಖರ 75ರ ಸಂಭ್ರಮ ವರ್ಷಪೂರ್ತಿ ಆರೋಗ್ಯದರಿವಿನ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಪುಸ್ತಕ ಬಿಡುಗಡೆ ಮತ್ತು ಡಾ. ಎಸ್.ಎಸ್. ಪಾಟೀಲ ಸ್ಮಾರಕ ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಡಾ. ಎಸ್.ಎಸ್. ಪಾಟೀಲ ಸ್ಮಾರಕ ಶ್ರೇಷ್ಠ ವೈದ್ಯ ಸೇವಾ ಪ್ರಶಸ್ತಿಯನ್ನು ಡಾ. ಪಿ.ಎಂ. ಬಿರಾದಾರ, ಡಾ. ಉದಯ ಪಾಟೀಲ, ಡಾ. ವಿಶ್ವನಾಥರೆಡ್ಡಿ, ಡಾ. ಸಂಗ್ರಾಮ ಬಿರಾದಾರ, ಡಾ. ಶಿವಕುಮಾರ ಸಿ.ಆರ್. ಅವರಿಗೆ ನೀಡಿ ಗೌರವಿಸಲಾಯಿತು.

ನಂತರ ಸಿ.ಆರ್. ಚಂದ್ರಶೇಖರ ಸ್ನೇಹ ಬಳಗದ ಗೌರವಾಧ್ಯಕ್ಷ ಡಾ. ನಾ.ಸೋಮೇಶ್ವರ ಅವರು ಮಾತನಾಡಿ, ಡಾ. ಸಿ.ಆರ್. ಚಂದ್ರಶೇಖರ ಅವರು ಕನ್ನಡದಲ್ಲಿ ದೇಹದ ಆರೋಗ್ಯ ಮಾನಸಿಕ ಆರೋಗ್ಯ ಕುರಿತು 400 ಕ್ಕಿಂತ ಹೆಚ್ಚು ಕೃತಿ ರಚಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಅನೇಕ ವೈದ್ಯರಿಗೆ ಲೇಖನ ಬರೆಯಲು ಪ್ರೇರಣೆ ನೀಡಿದರು. ನಮ್ಮ ದೇಶದಲ್ಲಿ ಮನೋವೈದ್ಯರ ಕೊರತೆ ನೀಗಿಸಲು ಮನಸ್ಸಿನ ಕಾಯಿಲೆ ಗುರುತಿಸುವ ಬಗ್ಗೆ, ಯಾವ ಸಂದರ್ಭದಲ್ಲಿ ರೋಗಿಯನ್ನು ಹೇಗೆ ಆಪ್ತ ಸಲಹೆ ನೀಡಬೇಕೆಂದು ತಿಳಿಸಿದರು.

ಡಾ. ಸಿ.ಆರ್. ಚಂದ್ರಶೇಖರ ಅವರು ಪ್ರತಿಸ್ಪಂದನ ನುಡಿಗಳನ್ನಾಡುತ್ತ, ಎಲ್ಲರೂ ಆರೋಗ್ಯವಂತರಾಗಿರಬೇಕು. ದೇವರಲ್ಲಿ ಹಣ, ಅಧಿಕಾರ, ಆಸ್ತಿ, ಕೇಳಬಾರದು. ಆರೋಗ್ಯ ಭಾಗ್ಯ ಕೊಡು ಎಂದು ಪ್ರಾರ್ಥಿಸಬೇಕು. ಕರ್ನಾಟಕದಲ್ಲಿ ಒಂದುವರೆ ಲಕ್ಷ ಜನ ವೈದ್ಯರಿದ್ದರೂ ಆ ಕ್ಷಣಕ್ಕೆ ಬೇಕಾಗುವ ಚಿಕಿತ್ಸೆ ನೀಡುವ ವೈದ್ಯರೂ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಮಹತ್ವ ನೀಡಿದಂತೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷದ್, ಉತ್ತರ ಪ್ರಾಂತದ ಉಪಾಧ್ಯಕ್ಷ ಪೂಜ್ಯ ಲಿಂಗರಾಜಪ್ಪ ಅಪ್ಪ ಅವರು ವಹಿಸಿದ್ದರು. ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹಸಂಯೋಜಕ ಮತ್ತು ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ಎಸ್.ಎಸ್.ಗುಬ್ಬಿ, ಎಸ್.ಎಸ್.ಹಿರೇಮಠ,ಡಾ. ಭೀಮಾಶಂಕರ ಬಿಲಗುಂದಿ , ಅಮರನಾಥ ಪಾಟೀಲ, ವೈ.ವಿ. ಗುಂಡೂರಾವ, ಡಾ. ಎಸ್.ಸಿ. ದೇಸಾಯಿ, ಎಂ.ಸಿ.ಕಿರೇದಳ್ಳಿ, ಪ್ರಶಾಂತ ಕುಲಕರ್ಣಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ ಮತ್ತು ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಡಾ. ಶಶಿಶೇಖರ ರಡ್ಡಿ ನಿರೂಪಿಸಿದರು. ಡಾ. ಬಿ.ಎಸ್. ದೇಸಾಯಿ ವಂದಿಸಿದರು. ಸರ್ವಜ್ಞ ಚಿಣ್ಣರ ಲೋಕದ ವಿದ್ಯಾರ್ಥಿನಿಯಾದ ಶರಣಮ್ಮ ಪ್ರಾರ್ಥಿಸಿದರು. ನಂತರ ಏಕವ್ಯಕ್ತಿ ಅಭಿನಯದ ನಾನು ಅಲ್ಬರ್ಟ್ ಐನಸ್ಟಿನ್ ಎಂಬ ನಾಟಕವನ್ನು ಜನರಂಗ ಮತ್ತು ಕಲಾ ಕುಟೀರ ಟ್ರಸ್ಟ್ ಸಸ್ತಾಪುರ ತಂಡದವರು ಪ್ರಸ್ತುತ ಪಡಿಸಿದರು.

Share this article