ಮೇಯರ್ ಚುನಾವಣೆಗೆ ರೆಸಾರ್ಟ್ ರಾಜಕೀಯ11 ಸದಸ್ಯರು ಅಜ್ಞಾತ ಸ್ಥಳಕ್ಕೆ ಶಿಫ್ಟ್!

KannadaprabhaNewsNetwork | Published : Dec 16, 2023 2:01 AM

ಸಾರಾಂಶ

ಮೇಯರ್ ತ್ರಿವೇಣಿ ರಾಜೀನಾಮೆಯಿಂದ ತೆರವಾದ ಮೇಯರ್ ಸ್ಥಾನಕ್ಕೆ ನ. 28ರಂದು ನಿಗದಿಯಾಗಿತ್ತು. ಆದರೆ, ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಒಮ್ಮತ ಮೂಡದ ಹಿನ್ನೆಲೆ ಚುನಾವಣೆ ಮುಂದೂಡಲಾಯಿತು. ಇದೀಗ ಮತ್ತೆ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಒಂದು ಬಣದ ಪಾಲಿಕೆ ಸದಸ್ಯರು ಕಾಣೆಯಾಗಿದ್ದಾರೆ.

ಕೆ.ಎಂ. ಮಂಜುನಾಥ್ ಬಳ್ಳಾರಿ: ಡಿ. 19ರಂದು ಮುಹೂರ್ತ ನಿಗದಿಯಾಗಿರುವ ಮೇಯರ್ ಆಯ್ಕೆ ಚುನಾವಣೆ ಮುನ್ನವೇ ಕಾಂಗ್ರೆಸ್‌ನ ಎರಡು ಬಣಗಳ ಗುಂಪುಗಾರಿಕೆ ಬಯಲಾಗಿದ್ದು, ಒಂದು ಗುಂಪಿನ ಸದಸ್ಯರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ನಡುವಿನ ಮುಸುಕಿನ ಗುದ್ದಾಟ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೇಯರ್ ತ್ರಿವೇಣಿ ರಾಜೀನಾಮೆಯಿಂದ ತೆರವಾದ ಮೇಯರ್ ಸ್ಥಾನಕ್ಕೆ ನ. 28ರಂದು ನಿಗದಿಯಾಗಿತ್ತು. ಆದರೆ, ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಒಮ್ಮತ ಮೂಡದ ಹಿನ್ನೆಲೆ ಚುನಾವಣೆ ಮುಂದೂಡಲಾಯಿತು. ಇದೀಗ ಮತ್ತೆ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಒಂದು ಬಣದ ಪಾಲಿಕೆ ಸದಸ್ಯರು ಕಾಣೆಯಾಗಿದ್ದಾರೆ. ಈ ಬೆಳವಣಿಗೆ ಒಂದೆಡೆ ಕೈ ಪಕ್ಷದಲ್ಲಿನ ಗುಂಪುಗಾರಿಕೆ ಹೊರಬಿದ್ದಂತಾದರೆ, ಮತ್ತೊಂದೆಡೆ ಪಕ್ಷದ ಸದಸ್ಯರಿಗೂ ತೀವ್ರ ಮುಜುಗರಕ್ಕೀಡು ಮಾಡಿದೆ. ಕೈ ನಾಯಕರ ಪ್ರತಿಷ್ಠೆ ಮುಂದುವರಿಕೆ:ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಸದಸ್ಯರ ಪೈಕಿ 8 ಕಾಂಗ್ರೆಸ್ ಸದಸ್ಯರಿದ್ದು, ಮೂವರು ಪಕ್ಷೇತರರಿದ್ದಾರೆ. 11 ಸದಸ್ಯರನ್ನು ಸುಸಜ್ಜಿತ ರೆಸಾರ್ಟ್‌ಗೆ ಕಳಿಸಿಕೊಡಲಾಗಿದ್ದು, ಚುನಾವಣೆ ದಿನವೇ ಈ ಎಲ್ಲ ಸದಸ್ಯರು ನೇರವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಾಧ್ಯತೆಯಿದೆ. 35ನೇ ವಾರ್ಡ್ ನ ಸದಸ್ಯ ಮಿಂಚು ಶ್ರೀನಿವಾಸ್ ಅವರನ್ನು ಮೇಯರ್ ಮಾಡುವ ಉದ್ದೇಶದಿಂದಲೇ ರೆಸಾರ್ಟ್‌ ರಾಜಕೀಯ ನಡೆದಿದೆ ಎನ್ನಲಾಗಿದೆ. ಮಿಂಚು ಶ್ರೀನಿವಾಸ್‌ಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲವಿದ್ದು, ಮೇಯರ್ ಸ್ಥಾನದ ಮತ್ತೊಬ್ಬ ಕಾಂಗ್ರೆಸ್ ನ 31ನೇ ವಾರ್ಡ್‌ನ ಸದಸ್ಯೆ ಶ್ವೇತಾ ಪರ ಜಿಲ್ಲಾ ಸಚಿವ ನಾಗೇಂದ್ರ ಬೆಂಬಲಕ್ಕೆ ನಿಂತಿರುವುದು ಬಣ ರಾಜಕೀಯ ಬೆಳವಣಿಗೆ ಸ್ಫೋಟಗೊಳ್ಳಲು ಪ್ರಮುಖ ಕಾರಣವಾಗಿದೆ. ಕೈ ನಾಯಕರ ಪ್ರತಿಷ್ಠೆ:ಪಾಲಿಕೆಯಲ್ಲಿ ಒಟ್ಟು 39 ಸದಸ್ಯ ಬಲವಿದ್ದು, ಈ ಪೈಕಿ ಕಾಂಗ್ರೆಸ್ 21, ಬಿಜೆಪಿ 13 ಹಾಗೂ 5 ಜನ ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಆತಂರಿಕ ಒಪ್ಪಂದದಂತೆ ವರ್ಷಕ್ಕೊಬ್ಬರಿಗೆ ಮೇಯರ್ ಅಧಿಕಾರ ಹಿಡಿಯಲು ಅವಕಾಶ ಕಲ್ಪಿಸಲಾಗಿತ್ತು. ಪೂರ್ಣ ಬಲದೊಂದಿಗೆ ಕಾಂಗ್ರೆಸ್ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಮೊದಲ ಬಾರಿ ರಾಜೇಶ್ವರಿ ಅವರು ಮೇಯರ್ ಆಗಿದ್ದರು. ಎರಡನೇ ಅವಧಿಗೆ ಕಳೆದ 2022ರ ಮಾರ್ಚ್‌ 29ರಂದು ಅಧಿಕಾರ ವಹಿಸಿಕೊಂಡ ತ್ರಿವೇಣಿ ಅವರು 7 ತಿಂಗಳಲ್ಲಿಯೇ ರಾಜೀನಾಮೆ ಸಲ್ಲಿಸಿದ್ದರಿಂದ ಉಳಿದ ಅವಧಿಗೆ ಚುನಾವಣೆ ನಡೆಯಬೇಕಿದ್ದು, ಕೈ ನಾಯಕರ ಪ್ರತಿಷ್ಠೆಗೆ ಚುನಾವಣೆ ಅಖಾಡ ತೀವ್ರ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.ಖಾಸಗಿ ಹೋಟೆಲ್‌ನಲ್ಲಿ ಪಕ್ಷದ ಸದಸ್ಯರ ಸಭೆ:ಮೇಯರ್ ಆಯ್ಕೆ ವಿಚಾರದಲ್ಲಿ ಪಕ್ಷದ ನಾಯಕರಲ್ಲಿಯೇ ಭಿನ್ನಮತ ಸ್ಫೋಟಗೊಂಡಿರುವುದರಿಂದ ಶಮನಕ್ಕೆ ರಾಜ್ಯ ನಾಯಕರಾದ ಎಚ್.ಎಂ. ರೇವಣ್ಣ ಹಾಗೂ ಆರ್‌.ವಿ. ವೆಂಕಟೇಶ್ ಅವರು ನಗರಕ್ಕೆ ಆಗಮಿಸಿದ್ದು, ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಪಕ್ಷದ ಸದಸ್ಯರ ಸಭೆ ನಡೆಸಿದ್ದಾರೆ. ರಾಜ್ಯ ನಾಯಕರ ಆಗಮನದ ಬಳಿಕವೂ ಮೇಯರ್ ಆಯ್ಕೆ ಕಗ್ಗಂಟು ಸರಿಯಾಗಿಲ್ಲ. ನಗರ ಶಾಸಕ ಭರತ್ ರೆಡ್ಡಿ ಬೆಂಬಲಿತ ಸದಸ್ಯ ಮಿಂಚು ಶ್ರೀನಿವಾಸ್ ಮೇಯರ್ ಆಗಲು ಎಲ್ಲ ಕಾರ್ಯತಂತ್ರ ರೂಪಿಸಿಕೊಂಡಿರುವುದರಿಂದ ಪಕ್ಷದ ರಾಜ್ಯ ನಾಯಕರ ಭಿನ್ನಮತ ಶಮನ ಯತ್ನ ಫಲ ನೀಡುವುದಿಲ್ಲ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ.

Share this article